ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದಲ್ಲಿ ಮನೆ ಜಲಾವೃತ: ಗಂಗಾನಗರ ನಿವಾಸಿಗಳಿಗೆ ತಪ್ಪದ ಕಣ್ಣೀರು

ಮೊಸಳೆ ಕಣ್ಣೀರು ಹಾಕುವ ಜನಪ್ರತಿನಿಧಿ, ಅಧಿಕಾರಿಗಳು
Last Updated 26 ಜುಲೈ 2022, 3:16 IST
ಅಕ್ಷರ ಗಾತ್ರ

ಹರಿಹರ: ‘ಗಂಗಾನಗರ’ ಎಂಬ ಹೆಸರಿಗೆ ತಕ್ಕಂತೆ ಪ್ರತಿ ವರ್ಷ ಮಳೆಗಾಲದಲ್ಲಿ ಉಕ್ಕಿ ಬರುವ ಗಂಗೆಯ ಪರಿಣಾಮದಿಂದ ಇಲ್ಲಿನ ಜನ ಕಾಳಜಿ ಕೇಂದ್ರಕ್ಕೆ ಸೇರಿಕೊಳ್ಳುವುದು ತಪ್ಪುತ್ತಿಲ್ಲ.

ಇದು ನಗರದ ಎಪಿಎಂಸಿ ಆವರಣದ ಹಿಂಭಾಗದಲ್ಲಿರುವ ನಗರಸಭೆ ವ್ಯಾಪ್ತಿಯ 29ನೇ ವಾರ್ಡಿನ ಗಂಗಾನಗರದ ನಿವಾಸಿಗಳ ಪ್ರತಿ ವರ್ಷದ ವ್ಯಥೆ. ಕೂಲಿ, ಬೀಡಿ ಕಟ್ಟುವವರು, ಕೃಷಿ ಕಾರ್ಮಿಕರೇ ಹೆಚ್ಚಿರುವ ಇಲ್ಲಿ ಅಂದಾಜು 250 ಮನೆಗಳಿವೆ. ಪರ ಸ್ಥಳಗಳಿಂದ ಇಲ್ಲಿಗೆ ಬಂದಿರುವ ಇವರು ರಸ್ತೆ ಪಕ್ಕದ ಸರ್ಕಾರಿ ಜಾಗದಲ್ಲೇ ನೆಲೆಯೂರಿದ್ದಾರೆ.

ಇಲ್ಲಿನ ಮನೆಗಳ ಅಳತೆ 10ರಿಂದ 20 ಅಡಿಗಳಷ್ಟೇ ಇದೆ. 35 ವರ್ಷಗಳಿಂದ ಇಲ್ಲಿ ವಾಸವಾಗಿದ್ದಾರೆ. ಮಳೆ ಹೆಚ್ಚಾಗಿ ತುಂಗಭದ್ರಾ ನದಿ ಉಕ್ಕಿದರೆ ಇಲ್ಲಿನ 30 ಮನೆಗಳು ಜಲಾವೃತವಾಗುತ್ತವೆ. ಈ ಹಿಂದೆ ಇವರೆಲ್ಲ ತಿಂಗಳುಗಟ್ಟಲೆ ಎಪಿಎಂಸಿ ಗೋದಾಮಿನ ಕಾಳಜಿ ಕೇಂದ್ರದಲ್ಲೇ ಕಾಲ ಕಳೆದಿದ್ದರು.

ಈ ವರ್ಷವೂ ಅದೇ ಸ್ಥಿತಿ. ಕಾಳಜಿ ಕೇಂದ್ರದಲ್ಲಿ ಊಟವೇನೋ ಸಿಗುತ್ತಿದೆ. ಆದರೆ, ಮನೆಯ ಸಾಮಾನುಗಳನ್ನು ಹೊತ್ತು ತಿರುಗಬೇಕಾಗಿದೆ. ಕೂಲಿ–ನಾಲಿ, ಮಕ್ಕಳ ಶಾಲೆ ಬಂದ್ ಆಗಿದ್ದು, ಪ್ರವಾಹ ತರುವ ಸಂಕಷ್ಟ ಇವರನ್ನು ಹಣ್ಣು ಮಾಡಿದೆ.

2019ರ ಆಗಸ್ಟ್ ತಿಂಗಳಲ್ಲಿ ಪ್ರವಾಹ ಬಂದಾಗ ಸರ್ಕಾರದ ಆಗಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್‌ದಾವೆ, ಆಗಿನ ಜಿಲ್ಲಾಧಿಕಾರಿ ಜಿ.ಎಸ್. ಶಿವಮೂರ್ತಿ ಹಾಗೂ ಅಧಿಕಾರಿಗಳ ತಂಡ ಇಲ್ಲಿಗೆ ಭೇಟಿ ನೀಡಿತ್ತು. ಆದಷ್ಟು ಬೇಗ ಸುಸಜ್ಜಿತ ವಸತಿ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿತ್ತು. ಆದರೆ, ಅಧಿಕಾರಿಗಳ ಭರವಸೆಯೂ ರಾಜಕಾರಣಿಗಳು ನೀಡುವ ಸುಳ್ಳು ಭರವಸೆಗಳಂತಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ಪ್ರವಾಹದಿಂದ ಬಸವಳಿಯುವುದರ ಜೊತೆಗೆ ಪಕ್ಕದ ಎಪಿಎಂಸಿ ಗೋದಾಮುಗಳಿಂದ ಬರುವ ಕೀಟಗಳ ಬಾಧೆಯನ್ನೂ ಸಹಿಸಿಕೊಳ್ಳಬೇಕಾಗಿದೆ. ಕೀಟಗಳು ಇವರ ಆಹಾರ ಸಾಮಗ್ರಿ, ಬಟ್ಟೆಯನ್ನು ಸೇರಿಕೊಳ್ಳುತ್ತವೆ. ನದಿ ತೀರವು ಬಯಲು ಪ್ರದೇಶವಾಗಿದ್ದರಿಂದ ವಿಷ ಜಂತುಗಳ ಕಾಟವೂ ಇದೆ. ಮಳೆಗಾಲದಲ್ಲಿಮಕ್ಕಳು, ವೃದ್ಧರು, ಗರ್ಭಿಣಿಯರು, ರೋಗಿಗಳು ಇಲ್ಲಿ ನರಳುವಂತಾಗಿದೆ.

‘ಗಂಗಾನಗರದವರನ್ನು ತುಂಗಭದ್ರಾ ಪ್ರವಾಹದಿಂದ ರಕ್ಷಿಸಿ ಕನಿಷ್ಠ ಸೌಕರ್ಯದ ವಸತಿ ಸೌಲಭ್ಯವನ್ನಾದರೂ ಕಲ್ಪಿಸಬೇಕು. ನಮ್ಮ ಸಂಕಟವನ್ನು ದೂರ ಮಾಡಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

‘ನದಿ ಪ್ರವಾಹ ಬಂದು ಕಾಳಜಿ ಕೇಂದ್ರ ಸೇರುವುದೊಂದೇ ಇವರ ಸಮಸ್ಯೆಯಲ್ಲ. ಮೂಲಸೌಲಭ್ಯಗಳು ಇಲ್ಲದೇ ವಿಷ ಜಂತುಗಳ ಕಾಟ, ಅನೈರ್ಮಲ್ಯ ಸಮಸ್ಯೆಯೂ ಇದೆ. ಪರ್ವಿನ್ ಎಂಬ ಮಹಿಳೆಗೆನಾಗರಹಾವು ಕಚ್ಚಿತ್ತು. ಅವರ ಬೆರಳು ಈವರೆಗೂ ಸರಿಯಾಗಿಲ್ಲ’ ಎಂದು ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ಎಸ್. ಗೋವಿಂದ ಬೇಸರ ವ್ಯಕ್ತಪಡಿಸುತ್ತಾರೆ.

ವಸತಿ ವ್ಯವಸ್ಥೆ ಕಲ್ಪಿಸುವುದಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ನೀಡಿದ ಭರವಸೆಗಳು ನಮಗೆ ಕನ್ನಡಿಯೊಳಗಿನ ಗಂಟಾಗಿದೆ. ನಗರಸಭೆ, ಜಿಲ್ಲಾಧಿಕಾರಿ ಕಚೇರಿ ಎದುರು ಮಹಿಳೆ, ಮಕ್ಕಳೊಂದಿಗೆ ಧರಣಿ ಮಾಡಿದರೂ ಒಬ್ಬ ಜನಪ್ರತಿನಿಧಿ ಬಂದಿಲ್ಲ.
ಅಶ್ರಫ್ ಅಲಿ, ಗಂಗಾನಗರ ನಿವಾಸಿ.

ಗುತ್ತೂರಿನ ನಗರಸಭೆ ಜಾಗದಲ್ಲಿ ಜಿ+2 ಮಾದರಿ ವಸತಿ ಯೋಜನೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಯೋಜನೆ ಜಾರಿಗೊಳಿಸುವಾಗ ಗಂಗಾನಗರದ ಪ್ರವಾಹ ಪೀಡಿತರಿಗೆ ಆದ್ಯತೆ ಮೇರೆಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.
ಐಗೂರು ಬಸವರಾಜ್, ಪೌರಾಯುಕ್ತ, ಹರಿಹರ ನಗರಸಭೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT