ಭಾನುವಾರ, ನವೆಂಬರ್ 17, 2019
27 °C

ನೈತಿಕತೆ, ಬದ್ಧತೆ ಇಲ್ಲದ ಕಾಲ: ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

Published:
Updated:

ದಾವಣಗೆರೆ: ‘ಜೈಲಿಗೆ ಹೋಗಿ ಬಂದ ಭ್ರಷ್ಟರನ್ನು ಅದ್ದೂರಿಯಾಗಿ ಸ್ವಾಗತಿಸುವುದು, ಮೆರವಣಿಗೆ ಮಾಡುವುದು ಕಂಡರೆ ನಗಬೇಕೋ, ಅಳಬೇಕೋ ತಿಳಿಯುತ್ತಿಲ್ಲ. ನೈತಿಕತೆ, ಬದ್ಧತೆ ಇಲ್ಲದ ಇಂತಹ ಕಾಲಘಟ್ಟದಲ್ಲಿ ನಾವಿದ್ದೇವಲ್ಲ ಎಂದು ಬೇಸರವಾಗುತ್ತದೆ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಮಾಗನೂರು ಬಸಪ್ಪ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಶಿವಗೋಷ್ಠಿ ಸಮಿತಿ, ಸಾದರ ನೌಕರರ ಬಳಗ ಆಯೋಜಿಸಿದ್ದ ಶಿವಗೋಷ್ಠಿ ಸ್ಮರಣೆ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಹಾತ್ಮ ಗಾಂಧೀಜಿ ನ್ಯಾಯಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿ ಬಂದರು. ಇಂದಿನವರಿಗೆ ಜೈಲಿಗೆ ಹೋಗಿ ಬರುವುದೇ ದೊಡ್ಡ ವಿಷಯವಾಗಿದೆ. ಜೈಲಿನಿಂದ ಬಂದ ಭ್ರಷ್ಟರಿಗೆ ಹಾರ, ತುರಾಯಿ ಹಾಕಿ ಸ್ವಾಗತಿಸುವ ಜನರಿಗೆ ಬದ್ಧತೆ, ನೈತಿಕತೆ ಇಲ್ಲ ಎಂದು ವಿಷಾದಿಸಿದರು.

‘ಮನುಷ್ಯ ಅಲ್ಪತೃಪ್ತಿ ಹೊಂದಬೇಕು. ದುಡಿಮೆಯಲ್ಲಿ ಲೆಕ್ಕಾಚಾರ ಇರಬೇಕು. ಇಲ್ಲದಿದ್ದರೆ ಬದುಕಿನ ಬಂಡಿ ಹಳಿ ತಪ್ಪುತ್ತದೆ’ ಎಂದು ಕಿವಿಮಾತು ಹೇಳಿದರು.

ಇಂದು ನಮ್ಮ ಮಕ್ಕಳು ಕಾನ್ವೆಂಟ್‌ ಮೋಹ ಬೆಳೆಸಿಕೊಂಡು ಕನ್ನಡದಿಂದ ವಂಚಿತರಾಗುತ್ತಿದ್ದಾರೆ. ಹೀಗಾದರೆ ಮುಂದೆ ರಾಜ್ಯೋತ್ಸವ ಮಾಡುವವರು ಇಲ್ಲವಾಗುತ್ತಾರೆ. ಮಕ್ಕಳಿಗೆ ಕನ್ನಡ ಓದಲು, ಬರೆಯಲು ತಿಳಿಸಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.

‘ಸಾಧಕರಿಗೆ ಪ್ರಶಸ್ತಿ ಬಂದಾಗ ಕೆಲವೊಮ್ಮೆ ಅಪಸ್ವರ ಕೇಳಿಬರುತ್ತದೆ. ಇದು ಸರಿಯಲ್ಲ. ನಮ್ಮ ಸ್ನೇಹಿತರಿಗೆ ಪ್ರಶಸ್ತಿ ಬಂದಿದೆ ಎಂದು ಖುಷಿ ಪಡಬೇಕು. ಅವರನ್ನು ಪ್ರೋತ್ಸಾಹಿಸಬೇಕು’ ಎಂದರು.

ಪ್ರಶಸ್ತಿ ಸ್ವೀಕರಿಸಿದ ಸಾಲುಮರದ ವೀರಾಚಾರಿ, ‘ಎಲ್ಲರೂ ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕು. ಇದರಿಂದ ವಾಯುಮಾಲಿನ್ಯ ಸೇರಿ ಪ್ರಾಕೃತಿಕ ವಿಕೋಪಗಳನ್ನು ತಡೆಯಲು ಸಾಧ್ಯ’ ಎಂದು ಹೇಳಿದರು.

ಪ್ರಶಸ್ತಿ ಪುರಸ್ಕೃತರಾದ ಜಯಕುಮಾರ್‌ ಕೊಡಗನೂರು, ಎಸ್.ಟಿ. ಶಾಂತಗಂಗಾಧರ್‌ ಮಾತನಾಡಿದರು. 11 ವೈದ್ಯಕೀಯ ವಿದ್ಯಾರ್ಥಿಗಳಿಗೆ ತಲಾ ₹ 10 ಸಾವಿರ ವಿದ್ಯಾರ್ಥಿವೇತನ ನೀಡಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಮುಖ್ಯ ಕಾರ್ಯದರ್ಶಿ ಆರ್‌.ಆರ್‌. ಕುಸಗೂರು, ಶಿವಗೋಷ್ಠಿ ಸಮಿತಿ ಅಧ್ಯಕ್ಷ ಎಂ.ಜಿ. ಸೋಮಶೇಖರಗೌಡ್ರು, ವಿದ್ಯಾರ್ಥಿ ವೇತನ ದಾನಿಗಳು ಇದ್ದರು.

ಪ್ರತಿಕ್ರಿಯಿಸಿ (+)