ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ತಿದ್ದುಪಡಿ ಕಾಯ್ದೆಗಳಿಂದ ಇನ್ನಷ್ಟು ಬಿಕ್ಕಟ್ಟು: ಚಿಂತಕ ಶಿವಸುಂದರ್

‘ಕೃಷಿ ಕಾಯ್ದೆಗಳ ಇಂದಿನ ರಾಜಕೀಯ ಹುನ್ನಾರ’ ವಿಚಾರ ಸಂಕಿರಣ
Last Updated 20 ಫೆಬ್ರುವರಿ 2021, 3:36 IST
ಅಕ್ಷರ ಗಾತ್ರ

ದಾವಣಗೆರೆ: ಕೃಷಿ ವ್ಯವಸ್ಥೆಯನ್ನು ಸುಧಾರಣೆ ಮಾಡುತ್ತೇವೆ ಎಂದು ಬಾಯಲ್ಲಿ ಹೇಳುತ್ತಾ ಬಂಡವಾಳಶಾಹಿಗಳ ನೆರವಿಗಾಗಿ ಕೇಂದ್ರ ಸರ್ಕಾರ ಮಾಡಿರುವ ಕೃಷಿ ತಿದ್ದುಪಡಿ ಕಾಯ್ದೆಗಳಿಂದ ಕೃಷಿ ವ್ಯವಸ್ಥೆ ಸುಧಾರಣೆಯಾಗುವ ಬದಲು ಬಿಕ್ಕಟ್ಟು ಇನ್ನಷ್ಟು ಜಾಸ್ತಿಯಾಗಲಿದೆ ಎಂದು ಚಿಂತಕ ಶಿವಸುಂದರ್ ಆತಂಕ ವ್ಯಕ್ತಪಡಿಸಿದರು.

ಕೃಷಿ ಕಾಯ್ದೆಗಳ ತಿದ್ದುಪಡಿ ಕುರಿತು ನಗರದ ಎಪಿಎಂಸಿ ಆವರಣದಲ್ಲಿ ರಾಜ್ಯ ರೈತ ಸಂಘ, ಹಸಿರುಸೇನೆ (ಹುಚ್ಚವಹಳ್ಳಿ ಮಂಜುನಾಥ್ ಬಣ) ಶುಕ್ರವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ‘ಕೃಷಿ ಕಾಯ್ದೆಗಳ ಇಂದಿನ ರಾಜಕೀಯ ಹುನ್ನಾರ’ ಕುರಿತು ಅವರು ಮಾತನಾಡಿದರು.

ಕೃಷಿ ಕಾಯ್ದೆಗೆ ತಿದ್ದುಪಡಿ ತಂದು ಕನಿಷ್ಠ ಬೆಂಬೆಲ ಬೆಲೆ ನಿಗದಿ ಮಾಡಬೇಕಿತ್ತು. ಸರ್ಕಾರ ಕಡ್ಡಾಯ ಖರೀದಿಯನ್ನು ಜಾರಿ ಮಾಡಬೇಕಿತ್ತು. ದಲ್ಲಾಳಿಗಳ, ವ್ಯಾಪಾರಿಗಳ ಕಳ್ಳಾಟಕ್ಕೆ ನಿರ್ಬಂಧ ಹೇರಬೇಕಿತ್ತು. ಎಪಿಎಂಸಿಯಿಂದ ಎಲ್ಲಿ ಸೋರಿಕೆಯಾಗುತ್ತಿದೆ? ಎಲ್ಲಿ ತೊಂದರೆಯಾಗುತ್ತಿದೆ ಎಂದು ಸರ್ಕಾರ ಮತ್ತು ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳುವವರು ಹೇಳುತ್ತಿರುವುದು ಸರಿ ಇದೆ. ಆದರೆ ಸರ್ಕಾರ ತಂದಿರುವ ತಿದ್ದುಪಡಿ ಕಾಯ್ದೆಯಲ್ಲಿ ಅದಕ್ಕೆ ಪರಿಹಾರ ಎಲ್ಲಿದೆ ಎಂದು ಪ್ರಶ್ನಿಸಿದರು.

ರೈತರ ಆದಾಯ ದ್ವಿಗುಣಗೊಳಿಸಲಾಗುವುದು ಎಂದು ಹೇಳುತ್ತಲೇ ರೈತರನ್ನು ಕೃಷಿಯಿಂದಲೇ ಸಂಪೂರ್ಣ ವಿಮುಖರನ್ನಾಗಿಸಲು ಸರ್ಕಾರ ಹುನ್ನಾರ ನಡೆಸಿದೆ. ಉಳ್ಳವರಿಂದ ಕಿತ್ತುಕೊಂಡು ದೇಶದ ರೈತರು ಮತ್ತು ಜನಸಾಮಾನ್ಯರಿಗೆ ಕೊಡುವ ಬದಲು ಸಾಮಾನ್ಯ ಜನರಿಂದ ಕಿತ್ತುಕೊಂಡು ಅಂಬಾನಿ, ಅದಾನಿಯಂಥ ಉದ್ಯಮಿಗಳನ್ನು ಉದ್ಧಾರ ಮಾಡುವ ಷಡ್ಯಂತ್ರ ಇದು ಎಂದು ಆರೋಪಿಸಿದರು.

ಇಲ್ಲಿವರೆಗೆ ಎಪಿಎಂಸಿಯಲ್ಲಿಯೇ ಮಾರಾಟ ಮಾಡಬೇಕಿತ್ತು. ಇನ್ನು ಎಲ್ಲಿ ಬೇಕಾದರೂ ಮಾಡಬಹುದು ಎಂಬುದು ಇನ್ನೊಂದು ಸಮರ್ಥನೆ. ಆದರೆ ಇಲ್ಲಿಯವರೆಗೆ ಕೂಡ ಶೇ 75ರಷ್ಟು ಹೊರಗೆಯೇ ವ್ಯಾಪಾರವಾಗುತ್ತಿತ್ತು. ದಲ್ಲಾಳಿಗಳು ಹಣ ಮಾಡಿಕೊಳ್ಳುತ್ತಿದ್ದರು. ಮುಂದೆ ಮಾಡಿಕೊಳ್ಳುವುದಿಲ್ಲ ಎಂಬುದಕ್ಕೆ ಈ ಕಾಯ್ದೆ ಗ್ಯಾರಂಟಿ ಕೊಡುವುದಿಲ್ಲ. ಖಾಸಗಿ ಮಂಡಿಗಳಿಗೆ ಇನ್ನುಮುಂದೆ ಸೆಸ್‌ ಇರುವುದಿಲ್ಲ. ಆಗ ಸಹಜವಾಗಿಯೇ ವ್ಯಾಪಾರಿಗಳು, ಕೃಷಿಕರು ಎಲ್ಲರೂ ಅಲ್ಲಿ ವ್ಯವಹಾರ ನಡೆಸುತ್ತಾರೆ. ವ್ಯಾಪಾರವಿಲ್ಲದೇ ಒಮ್ಮೆ ಎಪಿಎಂಸಿ ಮುಳುಗಿದ ಮೇಲೆ ರೈತರಿಗೆ ಸಂಕಷ್ಟ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಕರಾರು ಕೃಷಿ ಕಾಯ್ದೆ, ವಿದ್ಯುಚ್ಛಕ್ತಿ ಕಾಯ್ದೆ ಮತ್ತು ಅಗತ್ಯ ವಸ್ತುಗಳ ಕಾಯ್ದೆಗಳ ತಿದ್ದುಪಡಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಶೀಘ್ರದಲ್ಲಿಯೇ ಕೇಂದ್ರ ಸರ್ಕಾರ ಇದೇ ಮಾದರಿಯ ಇನ್ನೂ 4 ಕಾಯಿದೆಗಳನ್ನು ಜಾರಿಗೆ ತರುವ ಹುನ್ನಾರ ನಡೆಸಿದೆ. 2022ರ ವೇಳೆಗೆ ದೇಶದ ರೈತರನ್ನು ಅವರ ಜಮೀನುಗಳಿಂದ ಹೊರ ಹಾಕಿ, ಎಲ್ಲ ಕ್ಷೇತ್ರಗಳನ್ನು ಖಾಸಗಿ ವಲಯಕ್ಕೆ ಒಪ್ಪಿಸುವ ಕುತಂತ್ರ ಇದು ಎಂದು ಎಚ್ಚರಿಸಿದರು.

ಸಿಪಿಐ ರಾಜ್ಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ್ ಮಾತನಾಡಿ, ‘ಕೇಂದ್ರ ಸರ್ಕಾರದ ಈ ಕರಾಳ ಕಾಯ್ದೆಗಳಿಗೆ ಪೂರಕವಾಗಿ ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದೆ. ಕೃಷಿಕರಲ್ಲಿಯೇ ಕೃಷಿ ಭೂಮಿ ಉಳಿಸುವ ಕಾರ್ಯ ಇನ್ನಿರಲಾರದು. ₹ 25 ಲಕ್ಷಕ್ಕಿಂತ ಅಧಿಕ ಆದಾಯ ಇದ್ದವರು ಕೃಷಿ ಭೂಮಿ ಖರೀದಿಸುವಂತಿರಲಿಲ್ಲ. ನೀರಾವರಿ ಭೂಮಿಯಾಗಿದ್ದರೆ ಯಾರೂ 54 ಎಕರೆಗಿಂತ ಹೆಚ್ಚು ಹೊಂದು ವಂತಿರಲಿಲ್ಲ. ಈ ಯಾವ ನಿರ್ಬಂಧವೂ ಮುಂದೆ ಇರುವುದಿಲ್ಲ’ ಎಂದರು.

ಎಐಟಿಯುಸಿ ಮುಖಂಡ ಎಚ್.ಕೆ.ರಾಮಚಂದ್ರಪ್ಪ ವಿಚಾರ ಸಂಕಿರಣ ಉದ್ಘಾಟಿಸಿದರು. ಪತ್ರಕರ್ತ ಬಿ.ಎನ್.ಮಲ್ಲೇಶ್, ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ಚನಹಳ್ಳಿ ಮಂಜುನಾಥ್, ಮರಿಯಮ್ಮನಹಳ್ಳಿ ಪರಶುರಾಮ್, ಖಾಜಿ ನಿಯಾಜ್,ಮಲ್ಲಶೆಟ್ಟಿಹಳ್ಳಿ ಪ್ರಕಾಶ್, ಚಿರಂಜೀವಿ ಇದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಗುಮ್ಮನೂರು ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT