ಕೋಳಿ ಫಾರಂ ಸ್ಥಳಾಂತರಕ್ಕೆ ಸೂಚನೆ

7
ಕೆಂಚನಹಳ್ಳಿ: ನೊಣಗಳ ಹಾವಳಿಗೆ ತತ್ತರಿಸಿದ ಗ್ರಾಮಸ್ಥರು

ಕೋಳಿ ಫಾರಂ ಸ್ಥಳಾಂತರಕ್ಕೆ ಸೂಚನೆ

Published:
Updated:

ದಾವಣಗೆರೆ: ಹರಿಹರ ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ನೊಣಗಳ ಹಾವಳಿಯಿಂದ ತತ್ತರಿಸಿದ ಗ್ರಾಮಸ್ಥರ ನೋವಿಗೆ ಸ್ಪಂದಿಸಿದ ಸಂಸದ ಜಿ.ಎಂ. ಸಿದ್ದೇಶ್ವರ, ನೊಣ ಹಾವಳಿಗೆ ಕಾರಣವಾದ ಕೋಳಿ ಫಾರಂ ಮುಚ್ಚಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆಯುತ್ತಿದ್ದ ‘ದಿಶಾ’ ಸಭೆಗೆ ಬಂದ ಕೆಂಚನಹಳ್ಳಿಯ 50ಕ್ಕೂ ಹೆಚ್ಚು ಗ್ರಾಮಸ್ಥರು, ನೊಣಗಳ ಹಾವಳಿ ಬಗ್ಗೆ ಅಳಲು ತೋಡಿಕೊಂಡರು. 20 ವರ್ಷಗಳ ಹಿಂದೆ ಊರಿನಲ್ಲಿ ಕೋಳಿ ಫಾರಂ ಆರಂಭಿಸಲಾಗಿದೆ. ಆಗ 10 ಸಾವಿರ ಕೋಳಿಗಳು ಮಾತ್ರ ಇದ್ದವು. ಈಗ 11 ಎಕರೆ ಜಾಗದಲ್ಲಿ ಕೋಳಿ ಫಾರಂ ಮಾಡಲಾಗಿದ್ದು, ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಕೋಳಿಗಳಿವೆ. ಕೋಳಿ ಗೊಬ್ಬರ, ಸತ್ತ ಕೋಳಿಗಳನ್ನು ಸರಿಯಾಗಿ ವಿಲೇವಾರಿ ಮಾಡದಿರುವುದರಿಂದ ಎರಡು ವರ್ಷಗಳಿಂದ ನೊಣಗಳ ಹಾವಳಿ ಹೆಚ್ಚುತ್ತಿದೆ. ಮನೆಯಲ್ಲಿ ಕುಳಿತು ಊಟ ಮಾಡಲೂ ಸಾಧ್ಯವಾಗುತ್ತಿಲ್ಲ. ಕೂಡಲೇ ಕೋಳಿ ಫಾರಂ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ‘ಹತ್ತು ದಿನಗಳ ಹಿಂದೆ ಈ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ತರಲಾಗಿತ್ತು. ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಲಾಗಿದೆ. ಫಾರಂನಲ್ಲಿ ಒಂದೂವರೆ ಲಕ್ಷ ಕೋಳಿಗಳಿವೆ. ಈಗಾಗಲೇ ಫಾರಂಗೆ ನೋಟಿಸ್‌ ನೀಡಲಾಗಿದೆ. ಮೊದಲು ಕೋಳಿಗಳನ್ನು ವಿಲೇವಾರಿ ಮಾಡಿಸಿ, ಆ ಬಳಿಕ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಆದರೆ, ತಕ್ಷಣವೇ ಕೋಳಿ ಫಾರಂ ಮುಚ್ಚಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಾಗ, ‘ಇಷ್ಟು ದಿನ ನೀವು ಸುಮ್ಮನಿದ್ದೀರಿ. ಕೋಳಿ ಫಾರಂ ಮತ್ತು ನಿಮ್ಮ ನಡುವೆ ಈಗ ಹೊಂದಾಣಿಕೆ ಆಗುತ್ತಿಲ್ಲ ಎಂಬ ಕಾರಣಕ್ಕೆ ತಕ್ಷಣವೇ ಸ್ಥಳಾಂತರಿಸಿ ಎಂದರೆ ಹೇಗೆ? ಕಾಲಾವಕಾಶ ಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಂಗಳವಾರ ಪಶುಸಂಗೋಪನಾ ಅಧಿಕಾರಿಗೆ ಸ್ಥಳಕ್ಕೆ ತೆರಳಿ ವರದಿ ನೀಡಬೇಕು. ಔಷಧಿಗಳನ್ನು ಸಿಂಪಡಿಸಿ ನೊಣ ಹಾವಳಿ ತಡೆಗಟ್ಟಬೇಕು. ಹದಿನೈದು ದಿನಗಳ ಒಳಗೆ ಫಾರಂ ಮುಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿದ್ದೇಶ್ವರ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !