ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಳಸೇತುವೆ ನಿರ್ಮಿಸದಿದ್ದರೆ ಕೆಲಸ ಮಾಡಲು ಬಿಡುವುದಿಲ್ಲ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಂಸದರ ಎಚ್ಚರಿಕೆ
Last Updated 7 ಸೆಪ್ಟೆಂಬರ್ 2019, 7:15 IST
ಅಕ್ಷರ ಗಾತ್ರ

ದಾವಣಗೆರೆ: ರೈತರಿಗೆ ಹಾಗೂ ಗ್ರಾಮಸ್ಥರ ಬೇಡಿಕೆಯಂತೆ ಕೆಳಸೇತುವೆ ನಿರ್ಮಿಸದೇ ಇದ್ದರೆ ಷಟ್ಪಥ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ‘ಲಕ್ಕಮುತ್ತೇನಹಳ್ಳಿ, ಕಲಪನಹಳ್ಳಿ, ಮಲ್ಲಶೆಟ್ಟಿಹಳ್ಳಿ ಹಾಗೂ ದಾವಣಗೆರೆ ನಗರ ಪ್ರವೇಶಿಸುವ ಆವರಗೆರೆಯ ಬಳಿ ಕೆಳ ಸೇತುವೆ ನಿರ್ಮಿಸದಿದ್ದರೆ ಕೆಲಸ ಮಾಡಲು ಬಿಡುವುದಿಲ್ಲ ಎಂದು ನಿಮ್ಮ ಸಚಿವಾಲಯಕ್ಕೆ ಪತ್ರ ಬರೆಯಿರಿ. ಈ ಬಗ್ಗೆ ಸಚಿವರ ಗಮನಕ್ಕೂ ತರುತ್ತೇನೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀನಿವಾಸಲು ನಾಯ್ಡು, ‘ಹೆದ್ದಾರಿಯಲ್ಲಿ 11 ಕಡೆ ಕೆಳಸೇತುವೆ ನಿರ್ಮಿಸಲು ಪ್ರಸ್ತಾವ ಸಲ್ಲಿಸಲಾಗಿತ್ತು. ಇವುಗಳ ಪೈಕಿ 7 ಕಡೆ ನಿರ್ಮಿಸಲು ಒಪ್ಪಿಗೆ ಸಿಕ್ಕಿದೆ. ತಾಂತ್ರಿಕ ಕಾರಣಕ್ಕೆ ನಾಲ್ಕು ತಡೆ ತಿರಸ್ಕರಿಸಲಾಗಿದೆ. ದೆಹಲಿಯಿಂದ ಬಂದ ತಾಂತ್ರಿಕ ತಂಡವು ನಿಯಮಾವಳಿ ಪ್ರಕಾರ ಈ ನಾಲ್ಕು ಕಡೆ ನಿರ್ಮಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ’ ಎಂದು ಗಮನಕ್ಕೆ ತಂದರು.

ಇದರಿಂದ ಕೆರಳಿದ ಸಂಸದರು, ‘ತಾಂತ್ರಿಕ ತಂಡ ಬಂದಾಗ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ಏಕೆ ತಂದಿಲ್ಲ. ನಮಗೆ ಮಾಹಿತಿ ನೀಡಿದ್ದರೆ ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ. ಈಗ ಕೆಳ ಸೇತುವೆ ನಿರ್ಮಿಸದಿದ್ದರೆ ಜನ ಒದೆಯುತ್ತಾರೆ. ಹೀಗಾಗಿ ಇವುಗಳಿಗೆ ಒಪ್ಪಿಗೆ ಸಿಕ್ಕ ಬಳಿಕವೇ ಕೆಲಸ ಮಾಡಿ’ ಎಂದು ಸೂಚಿಸಿದರು.

ಚಿತ್ರದುರ್ಗ ಹಾಗೂ ರಾಣೆಬೆನ್ನೂರು ಕಡೆ ಹೆದ್ದಾರಿ ಕೆಲಸ ವೇಗವಾಗಿ ನಡೆಯುತ್ತಿದೆ. ದಾವಣಗೆರೆ ಭಾಗದಲ್ಲಿ ವಿಳಂಬವಾಗುತ್ತಿದೆ ಎಂದು ಸಂಸದರು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಅಧಿಕಾರಿಗಳು, ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದಕ್ಕೆ ಅಗತ್ಯ ಹಣವನ್ನು ಈಗಾಗಲೇ ನೀಡಿದ್ದರೂ ಬಳಸಿಕೊಂಡಿಲ್ಲ ಎಂದು ದೂರಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಕೂಡಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ಮುಗಿಸಲು ಕ್ರಮ ಕೈಗೊಳ್ಳಬೇಕು. ರೈತರು ಆಕ್ಷೇಪ ವ್ಯಕ್ತಪಡಿಸಿದರೆ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಅವರ ಮನವೊಲಿಸುತ್ತೇನೆ’ ಎಂದು ಹೇಳಿದರು.

ಶಾಸಕ ಎಸ್.ಎ. ರವೀಂದ್ರನಾಥ್, ‘ದಾವಣಗೆರೆ ನಗರದ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೆದ್ದಾರಿಯಿಂದ ಒಳಚರಂಡಿ ವ್ಯವಸ್ಥೆ, ವಾಟರ್‌ ಪೈಪ್‌ ಲೈನ್‌ಗಳಿಗೆ ತೊಂದರೆಯಾಗದಂತೆ ಪಾಲಿಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ಶಾಮನೂರು ಬಳಿಯ ಸರ್ವೀಸ್‌ ರಸ್ತೆಯಲ್ಲಿನ ಹೈಟೆನ್ಷನ್‌ ವಿದ್ಯುತ್‌ ಕಂಬವನ್ನು ಸ್ಥಳಾಂತರ ಮಾಡಲು ತುರ್ತಾಗಿ ಕ್ರಮ ಕೈಗೊಳ್ಳಬೇಕು. ಬಾಡಾ ಕ್ರಾಸ್‌, ಹರಿಹರ ಕ್ರಾಸ್‌ ಹಾಗೂ ಸಿರಿಗೆರೆ ಕ್ರಾಸ್‌ನಲ್ಲಿ ಸರ್ವೀಸ್‌ ರಸ್ತೆಯಲ್ಲಿ ಮಳೆ ನೀರು ನಿಂತುಗೊಳ್ಳುತ್ತಿದ್ದು, ಕೂಡಲೇ ಸರಿಪಡಿಸಬೇಕು ಎಂದು ಸಂಸದರು ಸೂಚಿಸಿದರು.

ಶಿವಮೊಗ್ಗ–ಹರಿಹರ ಹಾಗೂ ಹರಿಹರ– ಮರಿಯಮ್ಮನಹಳ್ಳಿ ಹೆದ್ದಾರಿ ಕಾಮಗಾರಿ ಬಗೆಗೂ ಸಂಸದರು ಮಾಹಿತಿ ಪಡೆದರು. 24x7 ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸಲು ಜಾಗ ಕಲ್ಪಿಸುವಂತೆಯೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಪ್ರೊ. ಲಿಂಗಣ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ಹೆದ್ದಾರಿ ಪ್ರಾಧಿಕಾರದ ತಾಂತ್ರಿಕ ವ್ಯವಸ್ಥಾಪಕ ಮಲ್ಲಿಕಾರ್ಜುನ, ತಹಶೀಲ್ದಾರ್‌ ಸಂತೋಷಕುಮಾರ್‌, ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎನ್.ಜಿ.ಗಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT