ಸೋಮವಾರ, ಜನವರಿ 27, 2020
23 °C

ಭಯೋತ್ಪಾದನೆ ವ್ಯಾಮೋಹವಿದ್ದರೆ ಕಾಂಗ್ರೆಸ್‌ನವರು ಪಾಕ್‌ಗೆ ಹೋಗಲಿ: ರೇಣುಕಾಚಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ಕಾಂಗ್ರೆಸ್‌ನ ಮುಖಂಡರಿಗೆ ದೇಶ ವಿರೋಧಿ ಚಟುವಟಿಕೆ, ಭಯೋತ್ಪಾದನೆಯ ಬಗ್ಗೆ ವ್ಯಾಮೋಹವಿದ್ದರೆ ಅವರು ಪಾಕಿಸ್ತಾನದಲ್ಲಿಯೇ ನೆಲೆಸಲಿ’ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಕಾಂಗ್ರೆಸ್‌ನವರು ಬೇಕಿದ್ದರೆ ಪಾಕಿಸ್ತಾನಕ್ಕೆ ಹೋಗಲಿ. ಅಲ್ಲಿನ ಹಿಂದೂಗಳ ಪರ ಹೋರಾಟ ಮಾಡಲಿ. ಕಾಶ್ಮೀರದಲ್ಲಿ ಅಮಾಯಕ ಹಿಂದೂ ಪಂಡಿತರ ಹತ್ಯೆ ನಡೆಯುತ್ತಿದ್ದು, ಅವರ ಪರ ನಿಲ್ಲಲಿ’ ಎಂದು ಸಲಹೆ ನೀಡಿದ್ದಾರೆ.

ಭಾರತದಲ್ಲಿ ಬಂದು ನೆಲೆಸಿರುವ ನುಸುಳುಕೋರರರಿಗೆ ಪೌರತ್ವ ನೀಡಲು ಭಾರತ ಅವರ ‘ಮಾವನ ಮನೆಯಲ್ಲ’ ಎಂದೂ ರೇಣುಕಾಚಾರ್ಯ ಹೇಳಿದ್ದಾರೆ.

‘ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರ‍್ಯಾಲಿ ಕಾಂಗ್ರೆಸ್‌ ಕೃಪಾಪೋಷಿತ. ಮುಸ್ಲಿಂ ಧರ್ಮ ಗುರುಗಳೂ ಕಾಯ್ದೆಯನ್ನು ಸ್ವಾಗತಿಸಿದ್ದಾರೆ. ಆದರೆ ಇದರ ಹೆಸರು ಹೇಳಿಕೊಂಡು ಕಾಂಗ್ರೆಸ್‌ನವರು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಕಾಂಗ್ರೆಸ್ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ 20 ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆಯಾಗಿದೆ. ಆ ಬಗ್ಗೆ ಕಾಂಗ್ರೆಸ್‌ನವರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಮಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಮೃತಪಟ್ಟವರಿಗೆ ಪರಿಹಾರ ಕೇಳುತ್ತಿದ್ದಾರೆ. ಪರಿಹಾರ ಇವರಪ್ಪನ ಮನೆ ಆಸ್ತಿಯಾ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.

ಮಂಗಳೂರಿನಲ್ಲಿ ನಡೆದ ಗಲಭೆಗೆ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಕಾರಣ. ಗಲಭೆಯಲ್ಲಿ ಸತ್ತವರು ಅಮಾಯಕರಲ್ಲ. ಪ್ರಚೋದನೆ ಕೊಟ್ಟವರಿಗೆ ಪರಿಹಾರ ಕೊಟ್ಟರೆ ಗಲಭೆ ಜಾಸ್ತಿಯಾಗುತ್ತದೆ ಎಂಬ ಉದ್ದೇಶದಿಂದ ಪರಿಹಾರ ವಾಪಸ್ ಪಡೆಯಲಾಗಿದೆ ಎಂದು ಸಮರ್ಥಿಸಿಕೊಂಡರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು