ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಮೇಲೆ ಬಿಜೆಪಿ ಝೇಂಡಾ: ಸಿದ್ದೇಶ್ವರ ವಿಶ್ವಾಸ

Last Updated 12 ನವೆಂಬರ್ 2019, 15:34 IST
ಅಕ್ಷರ ಗಾತ್ರ

ದಾವಣಗೆರೆ: ‘ಮಹಾನಗರ ಪಾಲಿಕೆಯ 45 ವಾರ್ಡ್‌ಗಳ ಪೈಕಿ ಕನಿಷ್ಠ 30ರಿಂದ 32 ವಾರ್ಡ್‌ಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಎರಡನೇ ಬಾರಿಗೆ ಪಾಲಿಕೆ ಮೇಲೆ ಬಿಜೆಪಿ ಝೇಂಡಾ ಹಾರಿಸುತ್ತೇವೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ನಗರದ 39ನೇ ವಾರ್ಡ್‌ ವ್ಯಾಪ್ತಿಯ ತರಳಬಾಳು ಬಡಾವಣೆಯ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಗೆ ಪತ್ನಿ ಗಾಯತ್ರಿ ಹಾಗೂ ಸಹೋದರಿ ಜೊತೆಗೆ ಬಂದು ಮತ ಚಲಾಯಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬೆಳಿಗ್ಗೆ 6.30ರಿಂದ 9 ಗಂಟೆಯವರೆಗೂ 45 ವಾರ್ಡ್‌ಗಳಲ್ಲಿ ಸಂಚರಿಸಿ ಬಿಜೆಪಿ ಕಾರ್ಯಕರ್ತರು ವರದಿ ನೀಡಿದ್ದಾರೆ. ಪಕ್ಷದ ಪರ ವಾತಾವರಣ ಇರುವುದು ಕಂಡು ಬಂದಿದೆ. ಬಿಜೆಪಿ ಮತ್ತೆ ಪಾಲಿಕೆಯ ಚುಕ್ಕಾಣಿ ಹಿಡಿಯುವುದು ಖಚಿತ. ಈಗಾಗಲೇ ಕಮಲ ಅರಳಿದೆ’ ಎಂದು ನಗೆ ಬೀರಿದರು.

‘ಈ ಬಾರಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಅರಿತು ಹಲವರು ಟಿಕೆಟ್‌ ಬಯಸಿದ್ದರು. ಬಂಡಾಯ ಅಭ್ಯರ್ಥಿಗಳಿಂದ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಯಾವುದೇ ತೊಂದರೆ ಆಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ನಾನು ಹಾಗೂ ಶಾಸಕ ಎಸ್‌.ಎ. ರವೀಂದ್ರನಾಥ ಅವರು ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಪರಿಗಣಿಸಿ ಜನ ಬಿಜೆಪಿಗೆ ಮತ ನೀಡುತ್ತಿದ್ದಾರೆ’ ಎಂದು ಹೇಳಿದರು.

‘ಅಯೋಧ್ಯೆ ವಿವಾದ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಸುವರ್ಣಾಕ್ಷರದಲ್ಲಿ ಬರೆದಿಡುವಂತಿದೆ. ದೇಶದ ಹಿಂದೂ ಹಾಗೂ ಮುಸ್ಲಿಮರು ತೀರ್ಪನ್ನು ಸೌಹಾರ್ದಯುತವಾಗಿ ಸ್ವೀಕರಿಸಿದ್ದಾರೆ. ಶೀಘ್ರದಲ್ಲೇ ರಾಮ ಮಂದಿರವನ್ನು ಕಟ್ಟುತ್ತೇವೆ’ ಎಂದು ಸಂಸದರು ಹೇಳಿದರು.

‘ಕೈ’ಗೆ ‘ಕಮಲ’ ತೋರಿಸಿದ ಸಂಸದರು

ಮತ ಚಲಾಯಿಸಲು ಮಾಗನೂರು ಬಸಪ್ಪ ಶಾಲೆ ಆವರಣದ ಬಳಿ ಸಂಸದ ಸಿದ್ದೇಶ್ವರ ಅವರು ನಡೆದುಕೊಂಡು ಬರುತ್ತಿದ್ದರು. ಇದನ್ನು ಗಮನಿಸಿದ ಕಾಂಗ್ರೆಸ್‌ನ ಕೆಲವು ಮುಖಂಡರು ಸ್ಕೂಟರ್‌ ಏರಿ ಕುಳಿತಿದ್ದರು. ಸಂಸದರು ಸಮೀಪ ಬರುತ್ತಿದ್ದಂತೆ ‘ಕೈ’ ಬೀಸುತ್ತ ‘ಹಸ್ತ’ದ ಗುರುತಿಗೆ ಮತ ಚಲಾಯಿಸಿ ಎಂದು ಕಾಲೆಳೆದರು. ಇದಕ್ಕೆ ಪ್ರತಿಯಾಗಿ ಸಂಸದರು, ಕೈ ಬೆರಳುಗಳನ್ನು ‘ಕಮಲ’ದ ಚಿಹ್ನೆ ಕಾಣುವಂತೆ ಮಾಡಿ ತೋರಿಸುತ್ತ ವಿಜಯದ ಸಂಕೇತವನ್ನೂ ಪ್ರದರ್ಶಿಸಿ ಮತಗಟ್ಟೆಯೊಳಗೆ ನಡೆದರು.

ಮತಚಲಾಯಿಸಿ ಬಂದ ಸಂಸದರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಸಮೀಪದಲ್ಲೇ ನಿಂತಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಕೇಕೇ ಹಾಕಿ ಗದ್ದಲ ಮಾಡುತ್ತಿದ್ದರು. ಇದರಿಂದ ಬೇಸರಗೊಂಡ ಸಂಸದರು, ‘ಸೋಲುತ್ತೇವೆ ಎಂಬ ಹತಾಶ ಭಾವನೆಯಿಂದ ಈ ರೀತಿ ಗದ್ದಲ ಮಾಡುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಹಸ್ತ’ ಗುರುತಿನ ಚೀಟಿಗೆ ಆಕ್ಷೇಪ

ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆ ಸಂಖ್ಯೆ 328 ಹಾಗೂ 329ಕ್ಕೆ ಬರುತ್ತಿದ್ದ ಮತದಾರರಿಗೆ ಕಾಂಗ್ರೆಸ್‌ ಅಭ್ಯರ್ಥಿ ಶಾಂತಮ್ಮ ದಿಳ್ಯಪ್ಪ ಅವರ ಹೆಸರು ಹಾಗೂ ‘ಹಸ್ತ’ದ ಗುರುತಿನ ಚೀಟಿ ಕೊಟ್ಟು ಕಳುಹಿಸುತ್ತಿರುವುದಕ್ಕೆ ಬಿಜೆಪಿ ಅಭ್ಯರ್ಥಿ ಗೀತಾ ದಿಳ್ಯಪ್ಪ ಹಾಗೂ ಏಜೆಂಟರು ಆಕ್ಷೇಪ ವ್ಯಕ್ತಪಡಿಸಿದರು. ‘ಹಸ್ತ’ದ ಗುರುತು ಇರುವ ಚೀಟಿಯ ಹಿಂಭಾಗದಲ್ಲಿ ಮತದಾರರ ಕ್ರಮ ಸಂಖ್ಯೆ, ಮತಗಟ್ಟೆ ವಿವರಗಳನ್ನು ಬರೆದುಕೊಡಲಾಗುತ್ತಿದೆ ಎಂದು ಮತಗಟ್ಟೆ ಅಧಿಕಾರಿ ಗಮನಕ್ಕೆ ತಂದರು.

‘ನಾವು ಕೇಸರಿ ಶಾಲು ಹಾಕಿಕೊಂಡು ಬಂದಾಗ ಶಾಲು ತೆಗೆಯಿರಿ ಎಂದು ಅಧಿಕಾರಿಗಳು ಹೇಳುತ್ತಿದ್ದರು. ಕಾಂಗ್ರೆಸ್‌ನವರು ಹಸ್ತದ ಗುರುತು ಇರುವ ಚೀಟಿಯನ್ನೇ ಬರೆದು ಕಳುಹಿಸುತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದರು. ನಮ್ಮ ಪಕ್ಷದ ಮತಗಟ್ಟೆ ಏಜೆಂಟನ ಮೂಲಕ ಇದು ಗೊತ್ತಾಯಿತು. ಈ ಬಗ್ಗೆ ಚುನಾವಣಾ ಅಧಿಕಾರಿಗೆ ದೂರು ನೀಡಲಾಗುವುದು’ ಎಂದು ಅಭ್ಯರ್ಥಿ ಗೀತಾ ದಿಳ್ಯಪ್ಪ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT