ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮುನಿಸಿಪಾಲಿಟಿ ಕಾಂಪ್ಲೆಕ್ಸ್‌ಗೆ ಬೇಕಿದೆ ಸರ್ಜರಿ

ಶಿಥಿಲಾವಸ್ಥೆ ತಲುಪಿರುವ ಕಟ್ಟಡಗಳು l ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಮರೀಚಿಕೆ
Last Updated 27 ಜೂನ್ 2022, 5:32 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿರುವ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳು ಸ್ಥಳೀಯ ಆಡಳಿತದ ನಿರ್ಲಕ್ಷ್ಯದ ಕಾರಣ ಶಿಥಿಲಗೊಂಡಿವೆ. ಶೌಚಾಲಯ, ಕುಡಿಯುವ ನೀರು ಸೇರಿ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ.

ದಾವಣಗೆರೆ ನಗರದ ವಿವಿಧ ವಾರ್ಡ್‌ಗಳಲ್ಲಿರುವ ವಾಣಿಜ್ಯ ಸಂಕೀರ್ಣಗಳಲ್ಲಿ ಎಲ್ಲಿಯೂ ಶೌಚಾಲಯವಿಲ್ಲದ ಕಾರಣ ವ್ಯಾಪಾರಿಗಳಿಗೆ ಬಯಲು ಬಹಿರ್ದೆಸೆ ಅನಿವಾರ್ಯವಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ್ದರಿಂದ ಮನೆಯಿಂದಲೇ ನೀರು ತಂದಿಟ್ಟುಕೊಳ್ಳಬೇಕಾದ ಸ್ಥಿತಿ ಇದೆ. ವಾಣಿಜ್ಯ ಸಂಕೀರ್ಣದ ಮಳಿಗೆಗಳಿಂದ ಸಂಗ್ರಹಿಸಿದ ಬಾಡಿಗೆ ಹಣವನ್ನು ಪ್ರತ್ಯೇಕ ಖಾತೆಯಲ್ಲಿರಿಸಿ, ಅಭಿವೃದ್ಧಿ ಕಾಮಗಾರಿಗಳಿಗೆ ಉಪಯೋಗಿಸಬೇಕು ಎಂಬ ನಿಯಮವಿದೆ. ಆದರೆ, ವಾಣಿಜ್ಯ ಸಂಕೀರ್ಣಗಳನ್ನು ಕಟ್ಟಿದ ದಿನದಿಂದ ಈವರೆಗೆ ಒಂದೇ ಒಂದು ಅಭಿವೃದ್ಧಿ ಕೆಲಸವನ್ನು ಪಾಲಿಕೆ ಕೈಗೆತ್ತಿಕೊಂಡಿಲ್ಲ ಎಂದು ವ್ಯಾಪಾರಿಗಳು ದೂರಿದ್ದಾರೆ.

‘ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಶೌಚಾಲಯ ಸೌಲಭ್ಯ ಇಲ್ಲದಿರುವುದರಿಂದ ಅಲ್ಲಿ ಕೆಲಸ ಮಾಡುವ ಮಹಿಳೆಯರು ನೈಸರ್ಗಿಕ ಕರೆಗೆ ಓಗೊಡುವುದಕ್ಕೆ ಆಗದೆ ಸಂಕಷ್ಟಪಡುತ್ತಿದ್ದಾರೆ. ಪುರುಷರು ಸಂಕೀರ್ಣದ ಹಿಂಭಾಗದಲ್ಲಿಯೇ ಬಹಿರಂಗವಾಗಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಸಾರ್ವಜನಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಬಾಡಿಗೆಯನ್ನು ನಿಯಮಿತವಾಗಿ ಪಾವತಿಸುತ್ತೇವೆ. ಆದರೆ, ಸೌಲಭ್ಯಗಳು ಮಾತ್ರ ಇಲ್ಲ’ ಎನ್ನುತ್ತಾರೆ ಮಹಾನಗರ ಪಾಲಿಕೆ ವಾಣಿಜ್ಯ ಮಳಿಗೆಗಳ ಬಾಡಿಗೆದಾರರ ಸಂಘದ ಕಾರ್ಯದರ್ಶಿ ಎಚ್‌. ನಾಗರಾಜ್‌.

‘ತಾಲ್ಲೂಕು ಕಚೇರಿ ಮುಂಭಾಗದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ 6 ಮಳಿಗೆಗಳಿಗೆ ಬೀಗ ಹಾಕಲಾಗಿದೆ. ಕಟ್ಟಿದಾಗಿನಿಂದ ಇದುವರೆಗೆ ಯಾರಿಗೂ ಬಾಡಿಗೆಗೆ ನೀಡಿಲ್ಲ. ಕಟ್ಟಡದ ಗೋಡೆ ಮತ್ತು ಮಹಡಿಯಲ್ಲಿ ಅರಳಿ ಗಿಡಗಳು ಬೆಳೆದಿವೆ. ಇದರಿಂದ ಕಟ್ಟಡ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಚಾಲ್ತಿಯಲ್ಲಿರುವ ಮಳಿಗೆಗಳ ಸೀಲಿಂಗ್‌ ಉದುರುತ್ತಿದೆ. ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರೆ ಖಾಲಿ ಮಾಡಿ ಎನ್ನುತ್ತಾರೆಯೇ ವಿನಾ ದುರಸ್ತಿಗೆ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ವ್ಯಾಪಾರಿ ನ್ಯಾಮತಿ ಶಿವಕುಮಾರ್‌.

‘ಚಾಮರಾಜಪೇಟೆ ವೃತ್ತದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಒಟ್ಟು 56 ಮಳಿಗೆಗಳಿದ್ದು, ಮೊದಲನೇ ಮಹಡಿಯ 28 ಮಳಿಗೆಗಳೂ ಖಾಲಿ ಬಿದ್ದಿವೆ. ಅನಧಿಕೃತ ವ್ಯಕ್ತಿಗಳು ಬಳಕೆ ಮಾಡಿಕೊಳ್ಳುತ್ತಿದ್ದು, ಹೇಳುವವರು ಕೇಳುವವರೇ ಇಲ್ಲದಂತಾಗಿದೆ. ಸಂಕೀರ್ಣದ ಮೇಲೆ ಮರದ ಕೊಂಬೆಯೊಂದು ಬಾಗಿದ್ದು, ತೆರವುಗೊಳಿಸುವಂತೆ ಹಲವು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜೀವ ಕೈಯಲ್ಲಿ ಹಿಡಿದುಕೊಂಡು ವ್ಯಾಪಾರ ನಡೆಸುತ್ತಿದ್ದೇವೆ. ಮೊದಲನೇ ಮಹಡಿಯ ಕೈಪಿಡಿ ಸಂಪೂರ್ಣ ಬಿದ್ದು ಹೋಗಿದೆ. ಮೆಟ್ಟಿಲಿಗೆ ಅಡ್ಡಲಾಗಿ ಕಟ್ಟಿರುವ ಗೋಡೆ ಕುಸಿಯುತ್ತಿದೆ. ಮಹಡಿಯ ಮೇಲೆ ಮದ್ಯದ ಬಾಟಲಿಗಳು ತುಂಬಿವೆ. ಸಂಬಂಧಪಟ್ವರು ಈ ಬಗ್ಗೆ ಗಮನಹರಿಸಬೇಕು’ ಎಂದು ಆಗ್ರಹಿಸುತ್ತಾರೆ ಸಂಘದ ಖಜಾಂಚಿ ನಿಜಗುಣಸ್ವಾಮಿ.

‘ಮಳೆ ನೀರು ಹರಿಯಲು ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದಲ್ಲಿ ಮಳಿಗೆಗಳ ಒಳಗೆ ನೀರು ನುಗ್ಗುತ್ತದೆ. ನೆಲಮಹಡಿಯಲ್ಲಿ ಇದ್ದವರಿಗೆ ತೀವ್ರ ತೊಂದರೆಯಾಗುತ್ತಿದ್ದರಿಂದ ಮಳಿಗೆಗಳನ್ನು ಖಾಲಿ ಮಾಡಿದ್ದಾರೆ. ಸಂಕೀರ್ಣದ ಮಹಡಿ ಮೇಲೆ ಕಸ ತುಂಬಿದ್ದು, ವಿಲೇವಾರಿ ಮಾಡದ ಕಾರಣ ಮಳೆ ನೀರು ನಿಲ್ಲುವುದರಿಂದ ಕಟ್ಟಡ ಶಿಥಿಲಗೊಳ್ಳುತ್ತಿದೆ. ರಾತ್ರಿ ವೇಳೆ ಕುಡುಕರ ಹಾವಳಿ ಇದೆ. ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ಸ್ಟೇಡಿಯಂ ಮುಂಭಾಗದಲ್ಲಿರುವ ವಾಣಿಜ್ಯ ಸಂಕೀರ್ಣದ ಬಾಡಿಗೆದಾರರಾದ ನರೇಂದ್ರ ಪ್ರಕಾಶ್‌, ಪ್ರಮೋದ್‌, ಪ್ರಭುದೇವ.

ಕೊಟ್ಟಿಗೆಯಾಗಿರುವ ವಾಣಿಜ್ಯ ಮಳಿಗೆ

ಕೆ.ಟಿ.ಜೆ ನಗರದ 4ನೇ ಕ್ರಾಸ್‌ನಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣದಲ್ಲಿ ಕೆಲವೇ ಮಳಿಗೆಗಳು ಕಾರ್ಯ ನಿರ್ವಹಿಸುತ್ತಿವೆ. ಬಹುತೇಕ ಮಳಿಗೆಗಳು ಖಾಲಿ ಇದ್ದು, ಹಾಳು ಸುರಿಯುತ್ತಿವೆ. ಸ್ಥಳೀಯರು ತಮ್ಮ ವಸ್ತುಗಳನ್ನು ಇಡಲು, ದನಕರು, ಕುದುರೆ ಕಟ್ಟಲು ಜಾಗವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಟ್ಟಿದ ಸಂಕೀರ್ಣ ಅಗತ್ಯವಿರುವವರಿಗೆ ಉಪಯೋಗಕ್ಕೆ ಇಲ್ಲದಂತಾಗಿದೆ. ಮುಖ್ಯವಾಗಿ ಪಾಲಿಕೆಗೂ ಸಾವಿರಾರು ರೂಪಾಯಿ ಆದಾಯ ನಷ್ಟವಾಗುತ್ತಿದೆ ಎಂದು ಸ್ಥಳೀಯರೊಬ್ಬರು ದೂರಿದ್ದಾರೆ.

ಸೋರುತ್ತಿವೆ ವಾಣಿಜ್ಯ ಮಳಿಗೆಗಳು

ಎಚ್.ವಿ. ನಟರಾಜ್

ಚನ್ನಗಿರಿ: ವಾಣಿಜ್ಯ ಮಳಿಗೆಗಳು ಪುರಸಭೆಯ ಆದಾಯದ ಪ್ರಮುಖ ಮೂಲಗಳಾಗಿವೆ. ಆದರೆ, ಅವುಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಪುರಸಭೆ ವಿಫಲವಾಗಿರುವುದು ಮಳಿಗೆ ನೋಡಿದ ತಕ್ಷಣ ಅರ್ಥವಾಗುತ್ತದೆ.

ಪುರಸಭೆಯಿಂದ ಇದುವರೆಗೆ 124 ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಬಹುತೇಕ ಮಳಿಗೆಗಳಲ್ಲಿ ಶೌಚಾಲಯಗಳಿಲ್ಲ. ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆಗಳೂ ಸೋರುತ್ತಿವೆ.

‘ಸೋರುತ್ತಿರುವ ಮಳಿಗೆಗಳ ದುರಸ್ತಿ ಕ್ರಮ ಕೈಗೊಳ್ಳಲು ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಮುಂದಾಗಿಲ್ಲ. ಇದರಿಂದ ನಾವು ತೊಂದರೆ ಅನುಭವಿಸುವಂತಾಗಿದೆ’ ಎನ್ನುತ್ತಾರೆ ಬಾಡಿಗೆದಾರ ಶ್ರೀನಿವಾಸ್.

ಈ ಬಗ್ಗೆ ಕೇಳಿದರೆ, ‘ಸೋರುತ್ತಿರುವ ಮಳಿಗೆಗಳ ದುರಸ್ತಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ, ಶೀಘ್ರದಲ್ಲಿ ದುರಸ್ತಿ ಕೆಲಸ ಮಾಡಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಕೆ. ಪರಮೇಶ್ ಭರವಸೆ ನೀಡಿದ್ದಾರೆ.

ಆದಾಯ ಪಡೆಯಲು ಆಡಳಿತ ವಿಫಲ

ಇನಾಯತ್‌ ಉಲ್ಲಾ ಟಿ.

ಹರಿಹರ: ಜಿಲ್ಲೆಯ ಎರಡನೇ ದೊಡ್ಡ ನಗರ ಹರಿಹರದಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣದ ಮೂಲಕ ಗರಿಷ್ಠ ಮಟ್ಟದಲ್ಲಿ ಆದಾಯ ಪಡೆಯಲು ಇಲ್ಲಿನ ನಗರಸಭೆ ವಿಫಲವಾಗಿದೆ.

ನಗರದ ವಾಣಿಜ್ಯ ಸಂಕೀರ್ಣಗಳಲ್ಲಿ ಒಟ್ಟು 186 ಮಳಿಗೆಗಳಿವೆ. ಈ ಪೈಕಿ 9 ಮಳಿಗೆಗಳು ಖಾಲಿ ಇದ್ದು, 7 ಮಳಿಗೆಗಳು ದುರಸ್ತಿಯಲ್ಲಿವೆ. ನಗರಸಭೆಗೆ ವಾರ್ಷಿಕ ₹ 22 ಲಕ್ಷ ಆದಾಯ ಇದೆ. ಅದನ್ನು ಮಳಿಗೆಗೆಗಳ ದುರಸ್ತಿ, ಹೊಸ ಮಳಿಗೆಗಳ ನಿರ್ಮಾಣ ಅಥವಾ ಅಭಿವೃದ್ಧಿ ಕೆಲಸಗಳಿಗೆ ಬಳಸುತ್ತಿಲ್ಲ. ಐಡಿಎಸ್‌ಎಂಟಿ ಹೊರತಾಗಿ ಬೇರೆ ಅನುದಾನದಿಂದ ಮಳಿಗೆಗಳನ್ನು ನಿರ್ಮಿಸಿ, ಬರುವ ಆದಾಯವನ್ನು ನಗರಾಭಿವೃದ್ಧಿಗೆ ಬಳಸಿಕೊಳ್ಳಲು ಮುಂದಾಗಬೇಕು ಎನ್ನುತ್ತಾರೆ ಹರಿಹರದ ಗಾಂಧಿ ವೃತ್ತದ ಐಡಿಎಸ್‌ಎಂಟಿ ವಾಣಿಜ್ಯ ಸಂಕೀರ್ಣದಲ್ಲಿರುವ ಬಾಡಿಗೆದಾರ ವೀರೇಶ್‌.

ಸ್ವಚ್ಛತೆಗೆ ಒತ್ತು ನೀಡುವಂತೆ ಮನವಿ

ಎಂ. ನಟರಾಜನ್‌

ಮಲೇಬೆನ್ನೂರು: ಇಲ್ಲಿನ ಪುರಸಭೆಗೆ ಸುಸಜ್ಜಿತ ಸಂತೆ ಮೈದಾನ, ಕುರಿ, ಕೋಳಿ ಮಾಂಸ ಮಾರಾಟ ಮಾಡುವ ಮಳಿಗೆಗಳು, ವಾರದ ಸಂತೆ ಪ್ರಮುಖ ಆದಾಯ ಮೂಲ. ಆದರೆ, ಆ ಸ್ಥಳದಲ್ಲಿ ಸ್ವಚ್ಛತೆ ಇಲ್ಲವಾಗಿದೆ.

ಇಲ್ಲಿನ ವ್ಯಾಪಾರಿಗಳು ಮತ್ತು ಗ್ರಾಹಕರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಯಾವಾಗಲೂ ಬಾಗಿಲು ಮುಚ್ಚಿರುತ್ತದೆ. ವಾರದ ಸಂತೆಗೆ ಸಾವಿರಾರು ಸಂಖ್ಯೆಯಲ್ಲಿ ಬರುವ ಜನರು ಶೌಚಕ್ಕಾಗಿ ಬಯಲನ್ನು ಅವಲಂಭಿಸಬೇಕಾದ ಸ್ಥಿತಿ ಇದೆ ಎಂದು ದೂರುತ್ತಾರೆ ವ್ಯಾಪಾರಿ ಇಮ್ರಾನ್.

ಪ.ಪಂ.ಗೆ ಬೇಕಿದೆ ವಾಣಿಜ್ಯ ಮಳಿಗೆ

ಡಿ.ಎಂ. ಹಾಲಾರಾಧ್ಯ

ನ್ಯಾಮತಿ: ನೂತನ ತಾಲ್ಲೂಕು ಕೇಂದ್ರವಾಗಿರುವ ನ್ಯಾಮತಿಯಲ್ಲಿದ್ದ ಗ್ರಾಮಪಂಚಾಯಿತಿಯು ಪಟ್ಟಣ ಪಂಚಾಯಿತಿಯಾಗಿ ಮೇಲ್ದೇರ್ಜೆಗೆ ಏರಿದೆ. ವಾಣಿಜ್ಯ ಕೇಂದ್ರವಾಗಿರುವ ಪಟ್ಟಣಕ್ಕೆ ಹೆಚ್ಚಿನ ವಾಣಿಜ್ಯ ಮಳಿಗೆಗಳ ಅವಶ್ಯಕತೆ ಇದೆ.

ಗ್ರಾಮ ಪಂಚಾಯಿತಿ ಆಡಳಿತ ಇದ್ದಾಗ ವಿವಿಧ ಅನುದಾನಗಳಿಂದ 18 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಅವುಗಳಲ್ಲಿ 7 ಮಳಿಗೆಗಳನ್ನು ತಾಲ್ಲೂಕು ಕಚೇರಿಗೆ ಹಸ್ತಾಂತರ ಮಾಡಲಾಗಿದೆ. ಉಳಿದ 11 ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ.

ಬಾಡಿಗೆ ದೃಷ್ಟಿಯಿಂದ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತದೆಯೇ ಹೊರತು ಮೂಲಸೌಲಭ್ಯ ಕಲ್ಪಿಸುವ ಕನಿಷ್ಠ ಯೋಚನೆ ಮಾಡುವುದಿಲ್ಲ. ಈಗಿರುವ ಮಳಿಗೆಗಳು ಮಳೆ ಬಂದಾಗ ಸೋರುವುದರಿಂದ ವಿದ್ಯುತ್ ಶಾರ್ಟ್ ಸರ್ಕಿಟ್ ಆಗುವ ಭಯವಿದ್ದು, ಅವಘಡ ಸಂಭವಿಸುವ ಸಾಧ್ಯತೆ ಇದೆ. ಸ್ಥಳೀಯ ಆಡಳಿತಾಧಿಕಾರಿಗಳು ಗಮನಹರಿಸಬೇಕು ಎಂದು ಬಾಡಿಗೆದಾರರಾದ ಸುನಿಲ್‌, ಪವನ್‌ ದೇವರಾಜ್‌ ಮತ್ತು ಎ.ಕೆ. ದೀಪಾ ಮನವಿ ಮಾಡಿದ್ದಾರೆ.

ಪಿತ್ರಾರ್ಜಿತ ಆಸ್ತಿಯಂತಾಗಿರುವ ಮಳಿಗೆಗಳು!

ಡಿ. ಶ್ರೀನಿವಾಸ್

ಜಗಳೂರು: ಇಲ್ಲಿನ ಪಟ್ಟಣ ಪಂಚಾಯಿತಿಗೆ ಸೇರಿದ 100ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಆಯಕಟ್ಟಿನ ಸ್ಥಳದಲ್ಲಿವೆ. ಓಬಿರಾಯನ ಕಾಲದಲ್ಲೇ ಹರಾಜು ಮೂಲಕ ಮಳಿಗೆ ಪಡೆದವರು ಇಂದಿಗೂ ಅವು ತಮ್ಮ ಪಿತ್ರಾರ್ಜಿತ ಸ್ವತ್ತು ಎಂಬಂತೆ ಎರಡು ತಲೆಮಾರುಗಳಿಂದ ಬಾಡಿಗೆದಾರರಾಗಿದ್ದಾರೆ. ದಶಕಗಳಿಂದ ಬಾಡಿಗೆ ದರವನ್ನೂ ಪರಿಷ್ಕರಿಸಲಾಗಿಲ್ಲ.

ಪಟ್ಟಣದ ಮಧ್ಯಭಾಗದಲ್ಲಿ ಮಧ್ಯಮ ಗಾತ್ರದ ಖಾಸಗಿ ವಾಣಿಜ್ಯ ಮಳಿಗೆಗೆ ಕನಿಷ್ಠ ₹ 10 ಸಾವಿರದಿಂದ ₹ 15 ಸಾವಿರ ಬಾಡಿಗೆ ಇದೆ. ಆದರೆ, ಪಟ್ಟಣ ಪಂಚಾಯಿತಿ ಕಚೇರಿಗೆ ಹೊಂದಿಕೊಂಡಿರುವ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಮತ್ತು ಹೊಸ ಖಾಸಗಿ ಬಸ್ ನಿಲ್ದಾಣದ ಎದುರು ಇರುವ 30ಕ್ಕೂ ಹೆಚ್ಚು ಹಳೆಯ ಮಳಿಗೆಗಳಲ್ಲಿ ಸಾವಿರಕ್ಕಿಂತಲೂ ಕಡಿಮೆ ಬಾಡಿಗೆ ಪಡೆಯಲಾಗುತ್ತಿದೆ.

‘ಇಲ್ಲಿನ ಮಳಿಗೆಗಳನ್ನು 40 ವರ್ಷಗಳ ಹಿಂದೆ ಹರಾಜು ಪ್ರಕ್ರಿಯೆಯಲ್ಲಿ ಬಾಡಿಗೆ ಕೊಟ್ಟಿದ್ದು, ಇದುವರೆಗೂ ಮರು ಹರಾಜು ನಡೆದಿಲ್ಲ. ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಮತ್ತು ಸದಸ್ಯರೊಂದಿಗೆ ಶಾಮೀಲಾಗಿ ದಾಖಲೆಗಳಲ್ಲಿ ಮಾತ್ರ ಮರು ಹರಾಜು ಮಾಡಲಾಗುತ್ತಿದೆ’ ಎಂದು ವಕೀಲ ದೊಡ್ಡಬೋರಯ್ಯ ಆರೋಪಿಸಿದ್ದಾರೆ.

* ನಗರದಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು 25 ವರ್ಷಗಳಿಗೂ ಹಿಂದಿನವು. ಪಿ.ಜೆ. ಬಡಾವಣೆಯಲ್ಲಿರುವ ಸೂಪರ್‌ ಮಾರ್ಕೆಟ್‌ ಸೋರುತ್ತಿರುವ ಬಗ್ಗೆ ದೂರುಗಳಿದ್ದು, ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ವಾಣಿಜ್ಯ ಸಂಕೀರ್ಣಗಳನ್ನು ಪರಿಶೀಲಿಸಿ ರಿಪೇರಿ ಕೆಲಸ ನಡೆಸಲಾಗುವುದು. ಬಳಸದೆ ಹಾಗೆ ಇರುವ ಮಳಿಗೆಗಳನ್ನು ಅಗತ್ಯ ಇರುವವರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು.

ವಿಶ್ವನಾಥ ಮುದಜ್ಜಿ, ಆಯುಕ್ತರು, ದಾವಣಗೆರೆ ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT