ಪುರಸಭೆ ಅಧಿಕಾರ ಮತ್ತೊಮ್ಮೆ ಕಾಂಗ್ರೆಸ್ ತೆಕ್ಕೆಗೆ

7
ಚನ್ನಗಿರಿ: ಕಾಂಗ್ರೆಸ್ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ವಡ್ನಾಳ್‌

ಪುರಸಭೆ ಅಧಿಕಾರ ಮತ್ತೊಮ್ಮೆ ಕಾಂಗ್ರೆಸ್ ತೆಕ್ಕೆಗೆ

Published:
Updated:
Deccan Herald

ಚನ್ನಗಿರಿ: ಕಳೆದ ಐದು ವರ್ಷದ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗಾಗಿ ಪುರಸಭೆಗೆ ₹28.71 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಪಟ್ಟಣದ ಇತಿಹಾಸದಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಯಾವ ಜನಪ್ರತಿನಿಧಿಯೂ ಅನುದಾನವನ್ನು ತಂದಿಲ್ಲ. ಮತದಾರರ ಮುಂದೆ ಧೈರ್ಯವಾಗಿ ಹೋಗಿ ಮತ ಕೇಳುವ ಅಧಿಕಾರ ನಮಗಿದೆ. ಈ ಸದಾವಕಾಶವನ್ನು ಸದುಪಯೋಗಿಸಿಕೊಂಡು ಮತ್ತೊಮ್ಮೆ ಪುರಸಭೆಯ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ಬರುವಂತೆ ಪ್ರಚಾರ ನಡೆಸೋಣ ಎಂದು ಮಾಜಿ ಶಾಸಕ ವಡ್ನಾಳ್ ರಾಜಣ್ಣ ತಿಳಿಸಿದರು.

ಪಟ್ಟಣದ ಶಾದಿಮಹಲ್‌ನಲ್ಲಿ ಪುರಸಭೆ ಚುನಾವಣಾ ಸಂಬಂಧ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಪಕ್ಷದ ಎಲ್ಲಾ ಮುಖಂಡರ ಅಭಿಪ್ರಾಯ ಪಡೆದು ಇನ್ನೆರಡು ಮೂರು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು. ಕಾರ್ಯಕರ್ತರು ಪಕ್ಷದ ಬಗ್ಗೆಯಾಗಲಿ ಅಥವಾ ಯಾರ ಬಗ್ಗೆಯೂ ಟೀಕೆ-ಟಿಪ್ಪಣಿ ಮಾಡುವ ಕಾರ್ಯಕ್ಕೆ ಹೋಗಬಾರದು’ ಎಂದರು.

‘19 ಸ್ಥಾನಗಳಲ್ಲಿ ಕಳೆದ ಬಾರಿ 13 ಸ್ಥಾನಗಳನ್ನು ಗೆಲ್ಲುವ ಮೂಲಕ 5 ವರ್ಷ ಪಟ್ಟಣದಲ್ಲಿ ಉತ್ತಮ ಆಡಳಿತ ನೀಡಲಾಗಿದೆ. ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ರಸ್ತೆ, ಚರಂಡಿಗಳನ್ನು ನಿರ್ಮಿಸಲಾಗಿದೆ. ಅದೇ ರೀತಿ ಪುರಸಭೆ ನೂತನ ಕಟ್ಟಡದ  ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಭರದಿಂದ ಸಾಗಿದೆ. ಕಳೆದ ಮೂರು ಲೋಕಸಭಾ ಚುನಾವಣೆಗಳಲ್ಲೂ ಕೂಡಾ ಕಾಂಗ್ರೆಸ್ ಸೋಲನ್ನು ಕಂಡಿದೆ. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಸಂಘಟನಾ ಕಾರ್ಯದರ್ಶಿ ರಕ್ಷಿತ್ ಶಿವರಾಂ ಗೌಡ ಮಾತನಾಡಿ ‘ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪೂರ್ಣ ಬಹುಮತ ಪಡೆಯದೇ ಇರಬಹುದು. ಆದರೆ ಗೆಲುವಿಗಾಗಿ ಹೋರಾಟ ನಿರಂತರವಾಗಿರುತ್ತದೆ. ಕಾರ್ಯಕರ್ತರು ಹಾಗೂ ಮುಖಂಡರ ನಡುವೆ ಸಮನ್ವಯ ಸಾಧಿಸುವ ಹಾಗೂ ನೇರ ಸಂಪರ್ಕವನ್ನು ಹೊಂದುವ ಸಲುವಾಗಿ ‘ಶಕ್ತಿ’ ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ. ಪುರಸಭೆ ಚುನಾವಣೆಯಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಬೇಕು. ಈ ಸ್ಥಳಿಯ ಸಂಸ್ಥೆಗಳ ಚುನಾವಣೆ 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ’ ಎಂದರು.

ಮುಖಂಡರಾದ ಅಮಾನುಲ್ಲಾ, ಸಿ. ನಾಗರಾಜ್, ರವಿಕುಮಾರ್, ಅಸ್ಲಾಂಬೇಗ್, ಬಿ.ಆರ್. ಹಾಲೇಶ್, ಸಿ.ವೈ. ರವಿಕುಮಾರ್, ಶಿವರತ್ನಮ್ಮ, ಜ್ಯೋತಿ ಪ್ರಸಾದ್, ತಾವರೆಕೆರೆ ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ಯೋಗೇಶ್ ಇದ್ದರು. ತಾಲ್ಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು.

₹28 ಕೋಟಿ – ಕಳೆದ ಪುರಸಭೆ ಅಭಿವೃದ್ಧಿಗೆ ಬಿಡುಗಡಯಾದ ಅನುದಾನ

₹4.75 ಕೋಟಿ – ಪುರಸಭೆ ಕಟ್ಟಡಕ್ಕೆ ಬಿಡುಗಡೆಯಾದ ಅನುದಾನ

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !