ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಉದ್ಯಮಿ ಕೊಲೆ; ನಾಲ್ವರ ಸೆರೆ

ಗಲಾಟೆಗೆ ಕುಮ್ಮಕ್ಕು ನೀಡಿದ್ದಾರೆಂಬ ಅನುಮಾನದಲ್ಲಿ ಹತ್ಯೆ
Last Updated 13 ಆಗಸ್ಟ್ 2021, 5:08 IST
ಅಕ್ಷರ ಗಾತ್ರ

ದಾವಣಗೆರೆ: ರಿಯಲ್‌ ಎಸ್ಟೇಟ್‌ ಉದ್ಯಮಿ, ಕಾಂಗ್ರೆಸ್‌ ಮುಖಂಡ ಪರಮೇಶ್ವರಪ್ಪ ಅಲಿಯಾಸ್‌ ಸೀಮೆ ಎಣ್ಣೆ ಪರಮೇಶ್‌ ಅವರ ಕೊಲೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಸವನಗರ ಪೊಲೀಸರು ಬಂಧಿಸಿದ್ದಾರೆ.

ಬಸವನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಹನುಮಂತ (33), ಬಸವರಾಜ (31), ಕುಮಾರ (27), ನಯಾಜ್ (23) ಬಂಧಿತ ಆರೋಪಿಗಳು.

ಚೌಡೇಶ್ವರಿ ದೇವಸ್ಥಾನದ ಪಟ್ಟಿ ಕೇಳುವ ವಿಚಾರದಲ್ಲಿ ಎರಡು ತಂಡಗಳ ನಡುವೆ ಹಿಂದೆ ಗಲಾಟೆ ನಡೆದಾಗ ಸೀಮೆ ಎಣ್ಣೆ ಪರಮೇಶ್ ರಾಜೀ ಪಂಚಾತಿಕೆ ಮಾಡಿ ಕಳುಹಿಸಿದ್ದರು. ಆದರೆ ಎರಡು ತಂಡಗಳ ಮಧ್ಯೆ ದ್ವೇಷ ಹಾಗೇ ಮುಂದುವರಿದಿತ್ತು. ಎರಡು ದಿನಗಳ ಹಿಂದೆ ಒಂದು ತಂಡದ ಗಾರೆ ಮಂಜ, ಟಗರು ಮಂಜ ಮುಂತಾದವರು ಇನ್ನೊಂದು ತಂಡದ ಹನುಮಂತ, ಬಸವರಾಜ ಸಹೋದರರ ಮನೆಗೆ ಬಂದು ಗಲಾಟೆ ಮಾಡಿದ್ದರು. ಮನೆಯಲ್ಲಿ ಹನುಮಂತ, ಬಸವರಾಜ ಇರದೇ ಇದ್ದರೂ ಹೆಣ್ಣುಮಕ್ಕಳೊಂದಿಗೆ ಗಲಾಟೆ ಮಾಡಿ ಹೋಗಿದ್ದರು. ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.‌

ಈ ಬಗ್ಗೆ ಪರಮೇಶ್‌ ಅವರಿಗೆ ಹನುಮಂತ ಮತ್ತು ತಂಡ ತಿಳಿಸಿದರೂ ಅವರು ಇನ್ನೊಂದು ತಂಡಕ್ಕೆ ಬುದ್ಧಿ ಹೇಳಲು ಮುಂದಾಗದೇ ಇರುವುದು ಹನುಮಂತ ತಂಡದ ಅನುಮಾನಕ್ಕೆ ಕಾರಣವಾಗಿತ್ತು. ಇದೇ ದ್ವೇಷದಲ್ಲಿ ಮನೆಗೆ ಬಂದು ಗಲಾಟೆ ಮಾಡಿದವರಿಗೂ ಮತ್ತು ಕುಮ್ಮಕ್ಕು ನೀಡಿದವರಿಗೂ ಬುದ್ಧಿ ಕಲಿಸಬೇಕು ಎಂದು ಯೋಜನೆ ಹಾಕಿದ್ದರು. ತಮ್ಮಲ್ಲಿದ್ದ ಮಚ್ಚನ್ನು ಸಾಣೆ ಹಿಡಿಸಿಕೊಂಡು ಬಂದಿದ್ದರು. ಬಸವರಾಜಪೇಟೆಯ ಹುಬ್ಬಳ್ಳಿ ಚೌಡಪ್ಪನಗಲ್ಲಿಯಲ್ಲಿ ಬುಧವಾರ ರಾತ್ರಿ ಪರಮೇಶ್‌ ಒಬ್ಬರೇ ಸಿಕ್ಕಿದಾಗ ಮೊದಲು ಮಚ್ಚು ಬೀಸಿ, ಬಳಿಕ ಕಲ್ಲು ಹೊತ್ತಾಗಿ ಕೊಲೆ ಮಾಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್‌ಪಿ ಸಿ.ಬಿ. ರಿಷ್ಯಂತ್‌, ಎಎಸ್‌ಪಿ ರಾಜೀವ್‌ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ನಾಗಪ್ಪ ಬಣಕಾಳಿ, ಪಿಎಸ್‌ಐಗಳಾದ ಲಲಿತಮ್ಮ, ಶೀಲಾ ಹೊಂಗಲ್‌, ಎಎಸ್‌ಐ ಕೃಷ್ಣಪ್ಪ ಮತ್ತು ತಂಡವು ಕೊಲೆ ನಡೆದು ಬೆಳಗಾಗುವ ಮೊದಲೇ ಆರೋಪಿಗಳನ್ನು ಬಂಧಿಸಿದ್ದಾರೆ.

‘ಆರೋಪಿಗಳನ್ನು ಬಂಧಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT