ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನದ ಪರಿಶಿಷ್ಟ ಜಾತಿ ಬಾಲಕನ ಹತ್ಯೆ: ಖಂಡನೆ

Last Updated 19 ಆಗಸ್ಟ್ 2022, 3:51 IST
ಅಕ್ಷರ ಗಾತ್ರ

ಜಗಳೂರು: ರಾಜಸ್ಥಾನದ ಜೈಪುರದಲ್ಲಿ ನೀರಿನ ಮಡಕೆ ಮುಟ್ಟಿದ ಕಾರಣಕ್ಕೆ ಶಿಕ್ಷಕರೊಬ್ಬರು 9 ವರ್ಷದ ಪರಿಶಿಷ್ಟ ಜಾತಿಗೆ ಸೇರಿದ ಬಾಲಕನನ್ನು ಥಳಿಸಿ ಹತ್ಯೆ ಮಾಡಿದ್ದನ್ನು ಖಂಡಿಸಿ ತಾಲ್ಲೂಕು ದಲಿತ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಜಮಾಯಿಸಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

‘ರಾಜಸ್ಥಾನದ ಜರೋರ್ ಜಿಲ್ಲೆಯ ಸೂರಾನ ಗ್ರಾಮದ ಶಾಲೆಯಲ್ಲಿ 3ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ದಲಿತ ವಿದ್ಯಾರ್ಥಿ ಇಂದರ್ ಮೇಘವಾಲ್, ಮೇಲ್ವರ್ಗದ ಶಿಕ್ಷಕ ಚೈಲ್ ಸಿಂಗ್ ಅವರ ಕುಡಿಯುವ ನೀರಿನ ಹೂಜಿಯನ್ನು ಮುಟ್ಟಿದ ಕಾರಣಕ್ಕೆ ಥಳಿಸಿದ್ದು ಅಮಾನವೀಯ. ಬಾಲಕ 8 ದಿನಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ ದಾರುಣವಾಗಿ ಸಾವನ್ನಪ್ಪಿದ್ದಾನೆ. ಮುಗ್ಧ ಬಾಲಕನ ಮೇಲೆ ಹಲ್ಲೆ ಮಾಡಿ ಕೊಂದಿರುವ ಮನುವಾದಿ ಮನಸ್ಥಿತಿಯ ಶಿಕ್ಷಕನನ್ನು ಗಲ್ಲಿಗೇರಿಸಬೇಕು’ ಎಂದು ತಾಲ್ಲೂಕು ಸಂಚಾಲಕ ಸತೀಶ್ ಮಲೆಮಾಚಿಕೆರೆ ಆಗ್ರಹಿಸಿದರು.

‘ಸಂವಿಧಾನದಡಿ ಕಠಿಣ ಕಾನೂನು ಜಾರಿಯಲ್ಲಿ ಇದ್ದರೂ ಘಟನೆ ನಡೆದಿರುವುದು ವಿಷಾದನೀಯ. ಹತ್ಯೆಗೊಳಗಾದ ದಲಿತ ಬಾಲಕನ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸಬೇಕು. ದೇಶದಲ್ಲಿ ಜಾತಿವಾದಿಗಳಿಗೆ ಕಡಿವಾಣ ಹಾಕಿ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕು. ಇಲ್ಲದಿದ್ದರೆ ಉಗ್ರಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಒಕ್ಕೂಟದ ಎಚ್ಚರಿಸಿದರು.

ರಾಕೇಶ್, ಮೈಲಾರಸ್ವಾಮಿ, ಸಂದೀಪ್, ಶಿವಕುಮಾರ್, ಅಭಿಷೇಕ್, ಲಕ್ಷ್ಮಿ, ಅಶ್ವಿನಿ, ದಿವ್ಯ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT