ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಗಳಿಕೆ ಮಾರ್ಗ ಶುದ್ಧವಾಗಿರಲಿ

ಮುರುಘರಾಜೇಂದ್ರ ಬ್ಯಾಂಕ್‌ ಕಟ್ಟಡ ಉದ್ಘಾಟಿಸಿದ ಮುರುಘ ಶರಣರು
Last Updated 16 ಜನವರಿ 2019, 9:37 IST
ಅಕ್ಷರ ಗಾತ್ರ

ದಾವಣಗೆರೆ: ‘ಬದುಕಿನಲ್ಲಿ ಹಣ ಇಲ್ಲ ಎಂದು ಚಿಂತಿಸುವವರು ಅದು ಬರುವ ದಾರಿಯ ಬಗ್ಗೆಯೂ ಚಿಂತನೆ ನಡೆಸಬೇಕು’ ಎಂದು ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಲಾಯರ್‌ ರಸ್ತೆಯಲ್ಲಿ ಶ್ರೀ ಮುರುಘರಾಜೇಂದ್ರ ಕೋ–ಆಪರೇಟಿವ್‌ ಬ್ಯಾಂಕ್‌ನ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಿದ ಅವರು, ‘ಇಂದು ಬದುಕಿನಲ್ಲಿ ಹಣ ಪ್ರಮುಖವಾಗಿದೆ. ಜೀವನಾವಶ್ಯಕವಾದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಹಣ ಅನಿವಾರ್ಯವಾಗಿದೆ. ದುಡಿಮೆ– ಕಾಯಕ ಕೈಗೊಂಡಾಗ ಮಾತ್ರ ಕಾಂಚಾಣ ಬರುತ್ತದೆ. ಹೀಗಾಗಿ ಪ್ರತಿಯೊಬ್ಬನೂ ಉದ್ಯೋಗಸ್ಥನಾಗಬೇಕು; ಪರಿಶ್ರಮಿಗಳಾಗಬೇಕು. ಆಗ ಧನವಂತನಾಗಲು ಸಾಧ್ಯ’ ಎಂದು ಹೇಳಿದರು.

‘ಧನ ಸಂಪಾದಿಸುವುದು ಒಂದು ಮಾರ್ಗವಾದರೆ, ಬಳಸುವುದು ಇನ್ನೊಂದು ಮಾರ್ಗ. ಹಣದ ಮೂಲಕ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದು ಬೆಳೆಸುವ ಮಾರ್ಗವಾಗಿದೆ. ಮುಂದಿನ ಸಮಸ್ಯೆಗಳನ್ನು ಎದುರಿಸಲು ಹಣವನ್ನು ಕೂಡಿಡಲಾಗುತ್ತದೆ. ಆದರೆ, ಅನಾರೋಗ್ಯಕರವಾಗಿ ಹಣ ಕೂಡಿಟ್ಟಾಗ ಅದು ಕಪ್ಪು ಹಣವಾಗಿ ಮಾರ್ಪಡುತ್ತದೆ. ಹೀಗಾಗಿ ದುಡಿಮೆಯ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಬೇಕು’ ಎಂದು ಸ್ವಾಮೀಜಿ ಹೇಳಿದರು.

‘ಸಹಕಾರದ ಮೂಲಕ ಬ್ಯಾಂಕ್‌ ನಡೆಸಿಕೊಂಡು ಹೋಗಬೇಕು. ಬ್ಯಾಂಕಿನ ಉಜ್ವಲ ಭವಿಷ್ಯ ಗ್ರಾಹಕರಿಂದ ನಿರ್ಧಾರವಾಗುತ್ತದೆ. ಹೀಗಾಗಿ ಗ್ರಾಹಕರನ್ನು ಪ್ರೀತಿಯಿಂದ ಕಾಣಬೇಕು’ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ, ‘ಗ್ರಾಹಕರಿಗೆ ಸಾಲವನ್ನು ಕೊಟ್ಟು, ಸಕಾಲದಲ್ಲಿ ಮರಳಿ ಪಡೆದಾಗಲೇ ಷೇರುದಾರರಿಗೆ ಲಾಭಾಂಶ ಕೊಡಲು ಸಾಧ್ಯ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಮೂಲಕ ಮುರುಘರಾಜೇಂದ್ರ ಬ್ಯಾಂಕ್‌ ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್‌ ಆಗಲಿ’ ಎಂದು ಆಶಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ, ‘ಸಹಕಾರ ಬ್ಯಾಂಕಿನ ಅಧ್ಯಕ್ಷ, ವ್ಯವಸ್ಥಾಪಕ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹೇಗಿದ್ದಾರೆ ಎಂಬುದನ್ನು ಜೋಡಿ ಜನ ಠೇವಣಿ ಹಣ ಇಡುತ್ತಾರೆ. ಹೀಗಾಗಿ ಸಾಲ ಮರುಪಾವತಿಸುವಂತಹ ಒಳ್ಳೆಯ ಗ್ರಾಹಕರಿಗೇ ಸಾಲ ಕೊಡಿ. ಇಂದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಮರುಪಾವತಿ ಆಗದಿರುವುದೇ ದೊಡ್ಡ ಸಮಸ್ಯೆಯಾಗಿದೆ. ಸಹಕಾರ ಬ್ಯಾಂಕ್‌ಗಳಲ್ಲಿ ಜನರನ್ನು ನೋಡಿ ಸಾಲ ಕೊಡುವುದರಿಂದ ಅಷ್ಟು ದೊಡ್ಡ ಪ್ರಮಾಣದಲ್ಲಿ ವಂಚನೆ ಆಗಿಲ್ಲ’ ಎಂದು ಅಭಿಪ್ರಾಯಪಟ್ಟರು.

ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ, ‘ಇಂದು ಕೆಲವು ಬ್ಯಾಂಕ್‌ಗಳು ವಿಲೀನಗೊಳ್ಳುತ್ತಿವೆ. ಇಂಥ ಸಂದರ್ಭದಲ್ಲಿ ಜನ ಠೇವಣಿ ಇಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಎಂ. ಜಯಕುಮಾರ್‌, ‘ಬ್ಯಾಂಕಿನಲ್ಲಿ 21 ಕೋಟಿ ಠೇವಣಿ ಇದೆ. ಗ್ರಾಹಕರಿಗೆ ಎಟಿಎಂ, ಎನ್‌.ಇ.ಎಫ್‌.ಟಿ, ಆರ್‌.ಟಿ.ಜಿ.ಎಸ್‌, ಇ–ಬ್ಯಾಂಕಿಂಗ್‌, ಫೋನ್‌ ಬ್ಯಾಂಕಿಂಗ್‌ ಸೌಲಭ್ಯಗಳನ್ನೂ ಕಲ್ಪಿಸಿದ್ದೇವೆ’ ಎಂದು ಹೇಳಿದರು.

ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಯಜಮಾನ್‌ ಮೋತಿ ವೀರಣ್ಣ, ಯಜಮಾನ್‌ ಮೋತಿ ವಿಶ್ವನಾಥ, ಅಂದನೂರು ಮರುಗೇಶಪ್ಪ, ಸೋಗಿ ಆರ್‌. ಶಿವಯೋಗಿ, ಎಸ್‌. ಓಂಕಾರಪ್ಪ, ಕೆ.ಆರ್‌. ಪರಮೇಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು.

'ಸಾಲಗಾರರಿಗೇ ಬೆಲೆ ಹೆಚ್ಚು'

‘ಶಾಮನೂರು ಶಿವಶಂಕರಪ್ಪ, ಜಿ.ಎಂ. ಸಿದ್ದೇಶ್ವರ ಅವರು ಬ್ಯಾಂಕ್‌ ನಡೆಸುವ ಸಾಹುಕಾರರು. ನಾವು ಸಾಲ ಪಡೆಯುವ ಜನ. ಇಂದು ಸಾಲ ಪಡೆದುಕೊಳ್ಳುವವರಿಗೇ ಹೆಚ್ಚು ಬೆಲೆ ಬಂದಿದೆ’ ಎಂದು ಶಾಸಕ ಎಸ್‌.ಎ. ರವೀಂದ್ರನಾಥ ಹೇಳಿದರು.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಶಾಮನೂರು, ‘ಸಾಲ ವಾಪಸ್‌ ನೀಡುವವರಿಗೆ’ ಎಂದು ಕಾಲೆಳೆದರು. ‘ಕೆಲವರು ಭಂಡರಿರುತ್ತಾರೆ; ಏನು ಮಾಡಿದರೂ ಸಾಲ ಮರುಪಾವತಿಸುವುದಿಲ್ಲ’ ಎಂದು ರವೀಂದ್ರನಾಥ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT