ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗದಾತರ, ಉದ್ಯೋಗಾಕಾಂಕ್ಷಿಗಳ ನಡುವೆ ಸೇತುವೆಯಾಗಿ ಮಠ: ವಚನಾನಂದ ಸ್ವಾಮೀಜಿ

ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದಲ್ಲಿ
Last Updated 14 ಆಗಸ್ಟ್ 2022, 3:03 IST
ಅಕ್ಷರ ಗಾತ್ರ

ದಾವಣಗೆರೆ: ವಿದ್ಯಾರ್ಥಿಗಳು ಶೇ 90ಕ್ಕೂ ಅಧಿಕ ಅಂಕ ಗಳಿಸಿರುತ್ತಾರೆ. ಆದರೆ ಎಲ್ಲಿ ಹೋಗಬೇಕು. ಯಾವ ಉದ್ಯೋಗ ಪಡೆಯಬೇಕು ಎಂಬುದು ಗೊತ್ತಿರುವುದಿಲ್ಲ. ಉದ್ಯೋಗ ನೀಡುವ ಸಂಸ್ಥೆಗಳೂ ಇರುತ್ತವೆ. ಇವರ ಮಧ್ಯೆ ಸೇತುವೆಯಂತೆ ನಮ್ಮ ಮಠ ಕಾರ್ಯನಿರ್ವಹಿಸಲಿದೆ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಹೇಳಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಜಿಲ್ಲಾ ಘಟಕ, ಹರ ಸೇವಾ ಸಂಸ್ಥೆ, ಪಂಚಮಸಾಲಿ ಜಗದ್ಗುರು ಪೀಠದ ವತಿಯಿಂದ ಸಮಾಜದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ ವಿದ್ಯಾರ್ಥಿಗಳಿಗೆ ಶನಿವಾರ ಇಲ್ಲಿನ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಈಚೆಗೆ ಹಮ್ಮಿಕೊಂಡಿದ್ದ ಬೃಹತ್‌ ಉದ್ಯೋಗ ಮೇಳದಲ್ಲಿ 10 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಅದರಲ್ಲಿ 6543 ಮಂದಿಗೆ ಉದ್ಯೋಗ ಸಿಕ್ಕಿದೆ. ಮುಂದೆಯೂ ಇಂಥ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುವುದು. ಎಲ್ಲರೂ ಒಂದೇ ವಿಷಯವನ್ನು ಕಲಿಯಬೇಡಿ. ಎಲ್ಲರೂ ವೈದ್ಯರು ಅಥವಾ ಎಂಜಿನಿಯರ್‌ ಆಗಬೇಕು ಅಂದರೆ ಆಗದು. ಬೇರೆ ಬೇರೆ ಕ್ಷೇತ್ರಗಳಲ್ಲಿ ಮುಂದೆ ಬರುವಂತೆ ವಿಭಿನ್ನ ವಿಷಯಗಳಲ್ಲಿ ಕಲಿಯಬೇಕು. ಪಂಚಮಸಾಲಿ ಸಮಾಜದಲ್ಲಿ ಕೇವಲ ನಾಲ್ವರು ಐಎಎಸ್‌ ಅಧಿಕಾರಿಗಳಿದ್ದಾರೆ. ಅದು 40ಕ್ಕೆ ತಲುಪುವಂತೆ ನೀವು ಓದಬೇಕು ಎಂದು ಸಲಹೆ ನೀಡಿದರು.

1994ರಿಂದ ಇಲ್ಲಿವರೆಗೆ ಮಠ ಮತ್ತು ಸಂಘದಿಂದ 18 ಸಾವಿರ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗಿದೆ. ಯೋಗಕ್ಕಾಗಿ ಬೇರೆ ಬೇರೆ ದೇಶಗಳಿಂದ ನಮ್ಮಲ್ಲಿಗೆ ಬರುತ್ತಾರೆ. ನಮ್ಮದು ಅಂತರರಾಷ್ಟ್ರೀಯ ಮಠ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ‘ಹಿಂದೆ ಓದಿದವರಿಗೆ ಉದ್ಯೋಗ ಸಿಗುತ್ತಿತ್ತು. ಬಳಿಕ ಡಿಗ್ರಿ ಮಾಡಿದರಷ್ಟೇ ಸಿಗತೊಡಗಿತು. ಡಿಗ್ರಿಯಾದರೆ ಸಾಲದು ಉತ್ತಮ ಅಂಕ ಬೇಕು ಎಂಬುದು ನಂತರ ಬಂತು. ಈಗ ಆ ಅಂಕವೂ ಸಾಲುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಪ್ರಮುಖ. ಈ ಬದಲಾವಣೆಗೆ ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರತಿಯೊಬ್ಬರ ಆಸಕ್ತಿ, ಅಭಿರುಚಿ, ಪ್ರತಿಭೆ, ಮನೋಭಾವ ಬೇರೆ ಬೇರೆ ಇರುತ್ತದೆ. ಅದನ್ನು ಪರಿಗಣಿಸದೇ ಹೆತ್ತವರು ತಮ್ಮ ಯೋಚನೆಯಂತೆ ಕಲಿಸಲು ಒತ್ತಡ ಹೇರಿದಾಗ ಸಾಧನೆ ಸಾಧ್ಯವಾಗುವುದಿಲ್ಲ. ಮಕ್ಕಳ ಆಸಕ್ತಿಯ ಕ್ಷೇತ್ರ ಗುರುತಿಸಿ, ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸಿದಾಗ ಸಾಧನೆ ಸಾಧ್ಯ ಎಂದರು.

ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಸೋಮೇಶ್ವರ ವಿದ್ಯಾ ಸಂಸ್ಥೆಯಿಂದ ₹ 1 ಲಕ್ಷ ನೀಡುವುದಾಗಿ ಧೂಡಾ ಅಧ್ಯಕ್ಷ ಕೆ.ಎಂ. ಸುರೇಶ್‌ ಘೋಷಿಸಿದರು.

ಜ್ಞಾನ, ಕೌಶಲ, ವಿನಯವಂತಿಕೆ ಸಾಧನೆಯ ಆಧಾರ ಸ್ತಂಭಗಳು. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ಶಿವಶಂಕರ್‌ ಕೆ. ಸಲಹೆ ನೀಡಿದರು.

ವಿವಿಧ ಕ್ಷೇತ್ರಗಳ ಸಾಧಕರಾದ ಡಾ. ಬಿ.ಎಚ್‌. ವೀರಪ್ಪ, ನಾಗರಾಜ್‌ ಎಸ್‌. ಬಡದಾಳ್‌, ಸರಸ್ವತಿ ವೀರಪ್ಪ, ಬಿ.ಟಿ. ಪ್ರಕಾಶ್‌, ಮಾಲಾ ಮುರುಗೇಶ್‌, ಡಾ. ಚಿಕ್ಕಗೌಡ್ರು ಕೊಟ್ರೇಶ್‌ ಪ್ರಸಾದ್‌, ಬಾದಾಮಿ ಜಯಣ್ಣ ಸಹಿತ ಹಲವರನ್ನು ಗೌರವಿಸಲಾಯಿತು. ದಾಸೋಹ ನಿಧಿ ದಾನಿಗಳನ್ನು ಸನ್ಮಾನಿಸಲಾಯಿತು.

ಪಂಚಮಸಾಲಿ ಸಂಘದ ಜಿಲ್ಲಾಧ್ಯಕ್ಷ ಬಿ.ಸಿ. ಉಮಾಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT