ಸೋಮವಾರ, ಜನವರಿ 17, 2022
19 °C
ರಾಘವೇಂದ್ರ ನಾಯರಿಗೆ ಅಭಿನಂದನಾ ಸಮಾರಂಭದಲ್ಲಿ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಎಚ್‌.ಜಿ. ಉಮೇಶ್‌

ಬ್ಯಾಂಕ್‌ ಖಾಸಗೀಕರಣದ ವಿರುದ್ಧ ನಾಯರಿ ಧ್ವನಿ ಎತ್ತಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬ್ಯಾಂಕ್‌ಗಳನ್ನು ಖಾಸಗಿಯವರ ಪಾದಕ್ಕೆ ಅರ್ಪಿಸಲು ಸರ್ಕಾರಗಳು ತಯಾರಾಗಿವೆ. ಸರ್ಕಾರದ ಆರ್ಥಿಕ ನೀತಿಯೇ ಜನವಿರೋಧಿಯಾಗಿದೆ.ಬ್ಯಾಂಕ್‌ ಉದ್ಯೋಗಿಗಳ ರಾಜ್ಯ ಜಂಟಿ ಕಾರ್ಯದರ್ಶಿ ಆಗಿ ಆಯ್ಕೆಯಾಗಿರುವ ಕೆ.ರಾಘವೇಂದ್ರ ನಾಯರಿ ರಾಷ್ಟ್ರಮಟ್ಟದ ಕಾರ್ಯದರ್ಶಿಯಾಗಲಿ. ಬ್ಯಾಂಕ್‌ ಖಾಸಗೀಕರಣದ ವಿರುದ್ಧ ಹೋರಾಟ ನಡೆಸಿ ಬ್ಯಾಂಕ್‌ಗಳನ್ನು ಸಾರ್ವಜನಿಕ ಸಂಸ್ತೆಗಳನ್ನಾಗಿಯೇ ಉಳಿಸಲಿ ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಎಚ್‌.ಜಿ. ಉಮೇಶ್‌ ತಿಳಿಸಿದರು.

ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್‌ಗೆ ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಕೆ.ರಾಘವೇಂದ್ರ ನಾಯರಿ ಅವರಿಗೆ ದಾವಣಗೆರೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಘವೇಂದ್ರ ನಾಯರಿ ಬ್ಯಾಂಕ್‌ ಉದ್ಯೋಗಿಗಳ ಸಂಘಟನೆಯಲ್ಲಿ ಮಾತ್ರ ಇರುವುದಲ್ಲ. ಸಾಹಿತ್ಯ ಪರಿಷತ್ತಿನಲ್ಲಿದ್ದಾರೆ. ಯಕ್ಷಗಾನ ಸೌರಭದಲ್ಲಿದ್ದಾರೆ. ರೈಲ್ವೆ ಹೋರಾಟ ಸಮಿತಿಯಲ್ಲಿದ್ದಾರೆ. ಸಮಸಮಾಜದ ಕಲ್ಪನೆ ಇಟ್ಟುಕೊಂಡು, ನಾಯಕ ಗುಣ ಹೊಂದಿದ್ದಾರೆ ಎಂದು ಶ್ಲಾಘಿಸಿದರು.

ಕೆನರಾ ಬ್ಯಾಂಕ್‌ ಸಹಾಯಕ ಮಹಾ ಪ್ರಬಂಧಕ ಎಚ್. ರಘುರಾಜ, ‘ನಾಯರಿ ಅವರ ವ್ಯಕ್ತಿತ್ವದ ಬೆಳಕು ಬೇರೆಯವರ ಮೇಲೆ ಪ್ರಭಾವರ ಬೀರಿದೆ. ಇದು ಸಂಘಟನೆಯ ಶಕ್ತಿಗೆ ನಾಂದಿ ಹಾಡಲಿದೆ. ಎಲ್ಲರಿಗೂ ಸಹಾಯ ಮಾಡುವ ವ್ಯಕ್ತಿತ್ವ ಅವರದ್ದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಇಲ್ಲದೇ ಯಾವುದೂ ಸರಿದಾರಿಯಲ್ಲಿ ನಡೆಯದು. ಹೋರಾಟ ಇಲ್ಲದೇ ಇದ್ದರೆ ಆಳುವವರು ನಿರಂಕುಶರಾಗುತ್ತಾರೆ’ ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿ ಕೆ.ರಾಘವೇಂದ್ರ ನಾಯರಿ ಮಾತನಾಡಿ, ‘ಅಖಿಲ ಭಾರತ ಬ್ಯಾಂಕ್ ‌ನೌಕರರ ಸಂಘ ಹಾಗೂ ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ನನ್ನನ್ನು ಇಲ್ಲಿಯವರೆಗೆ ಹಲವಾರು ಅವಕಾಶಗಳನ್ನು ನೀಡಿ ಈ ಹಂತದವರೆಗೆ ಬೆಳೆಸಿದೆ. ಅನೇಕ ಹಿರಿಯ ಕಾರ್ಮಿಕ ಮುಖಂಡರು ನನಗೆ ಮಾರ್ಗದರ್ಶನ ಮಾಡಿ ಹೋರಾಟ ಮಾಡುವ ಚೈತನ್ಯವನ್ನು ತುಂಬಿದ್ದಾರೆ. ಸಮಾಜವು ನನ್ನನ್ನು ಬೆಳೆಸಿದೆ. ಮುಂದೆಯೂ ಸಾಮಾಜಿಕ ಕಾರ್ಯಗಳಿಗಾಗಿ ಸಮರ್ಪಿಸಿಕೊಂಡು ಕಾರ್ಯನಿರ್ವಹಿಸುವೆ’ ಎಂದು ತಿಳಿಸಿದರು.

ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಬಿ. ಆನಂದಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಸುಶೃತ್ ಶಾಸ್ತ್ರಿ, ಹೋಟೆಲ್ ಉದ್ಯಮಿ ಮಲ್ಯಾಡಿ ಪ್ರಭಾಕರ ಶೆಟ್ಟಿ, ದಾವಣಗೆರೆ ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ರಂಗಸ್ವಾಮಿ, ಯುಎಫ್‌ಬಿಯು ದಾವಣಗೆರೆ ಜಿಲ್ಲಾ ಸಂಚಾಲಕ ಕೆ.ಎನ್‌‌.ಗಿರಿರಾಜ್ ಭಾಗವಹಿಸಿದ್ದರು.

ಜಿಲ್ಲಾ ಖಜಾಂಚಿ ಕೆ. ವಿಶ್ವನಾಥ್ ಬಿಲ್ಲವ ಸ್ವಾಗತಿಸಿದರು. ಆರ್. ಆಂಜನೇಯ ಕಾರ್ಯಕ್ರಮ ನಿರೂಪಿಸಿದರು. ಎಚ್.ಎಸ್. ತಿಪ್ಪೇಸ್ವಾಮಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.