ರಾಷ್ಟ್ರೀಯ ಅಗ್ನಿಶಾಮಕ ಸೇವಾ ಸಪ್ತಾಹ

ಶುಕ್ರವಾರ, ಏಪ್ರಿಲ್ 26, 2019
21 °C
ಸ್ಕೌಟ್ಸ್‌–ಗೈಡ್ಸ್‌ ಪ್ರತಿನಿಧಿಗಳಿಂದ ಜಾಗೃತಿ ಜಾಥಾ

ರಾಷ್ಟ್ರೀಯ ಅಗ್ನಿಶಾಮಕ ಸೇವಾ ಸಪ್ತಾಹ

Published:
Updated:
Prajavani

ದಾವಣಗೆರೆ: ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಆಶ್ರಯದಲ್ಲಿ ‘ರಾಷ್ಟ್ರೀಯ ಅಗ್ನಿಶಾಮಕ ಸೇವಾ ಸಪ್ತಾಹ’ದ ಅಂಗವಾಗಿ ನಗರದಲ್ಲಿ ಭಾನುವಾರ ಜಾಗೃತಿ ಜಾಥಾ ನಡೆಯಿತು.

ಏಪ್ರಿಲ್‌ 14ರಿಂದ 20ರವರೆಗೆ ಅಗ್ನಿಶಾಮಕ ಸೇವಾ ಸಪ್ತಾಹ ಆಚರಿಸಲಾಗುತ್ತಿದ್ದು, ಅಗ್ನಿ ಆಕಸ್ಮಿಕಗಳು, ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಇಲಾಖೆಯಿಂದ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ.

ನಗರದ ಹೈಸ್ಕೂಲ್‌ ಮೈದಾನದಲ್ಲಿ ನಗರ ಉಪವಿಭಾಗದ ಡಿಎಸ್‌ಪಿ ನಾಗರಾಜ್‌ ಅವರು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. 150ಕ್ಕೂ ಹೆಚ್ಚು ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಪ್ರತಿನಿಧಿಗಳು ಜಾಥಾದಲ್ಲಿ ಪಾಲ್ಗೊಂಡು ಅಗ್ನಿ ಅವಘಡಗಳ ಬಗ್ಗೆ ಜಾಗೃತಿ ಮೂಡಿಸಿದರು. ಹೈಸ್ಕೂಲ್‌ ಮೈದಾನದಿಂದ ಪಾಲಿಕೆ ಸರ್ಕಲ್‌, ರೈಲುನಿಲ್ದಾಣ, ಗಾಂಧಿ ಸರ್ಕಲ್‌, ಅಶೋಕ ರಸ್ತೆ, ಜಯದೇವ ವೃತ್ತದ ಮೂಲಕ ಸಾಗಿದ ಜಾಥಾ ಹೈಸ್ಕೂಲ್‌ ಮೈದಾನದಲ್ಲಿ ಕೊನೆಗೊಂಡಿತು. ‘ಅಗ್ನಿ ಶಮನಕ್ಕಿಂತ ಅಗ್ನಿ ನಿವಾರಣೆ ಉತ್ತಮ’, ‘ಅಗ್ನಿಶಾಮಕ ಜೀವ ಮತ್ತು ಆಸ್ತಿ ರಕ್ಷಣೆಯಲ್ಲಿ ನಿಮ್ಮ ಜೊತೆಗಾರ’, ‘ಅಗ್ನಿ ಸುರಕ್ಷಿತ ಭಾರತಕ್ಕಾಗಿ ಒಟ್ಟಾಗಿ ದುಡಿಯೋಣ’, ‘ಅಗ್ನಿ ಮುನ್ನೆಚ್ಚರಿಕೆಯನ್ನು ಪಾಲಿಸಿ ಬೆಂಕಿಯನ್ನು ತಡೆಗಟ್ಟಿ’... ಹೀಗೆ ಹಲವು ಘೋಷಣೆಗಳಿರುವ ಫಲಕಗಳನ್ನು ಹಿಡಿದು ಸಾಗಿದ ವಿದ್ಯಾರ್ಥಿಗಳು ಗಮನ ಸೆಳೆದರು.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ, ‘ಏಳು ದಿನಗಳ ಕಾಲ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಗ್ನಿ ಅವಘಡಗಳ ಬಗ್ಗೆ ಹಾಗೂ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಕರಪತ್ರಗಳನ್ನು ಹಂಚಲಾಗುವುದು. ಪ್ರಾತ್ಯಕ್ಷಿಕೆ ಮೂಲಕ ಅವಘಡ ಸಂಭವಿಸಿದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುವುದು. ಅಡುಗೆ ಅನಿಲವನ್ನು ಯಾವ ರೀತಿ ಬಳಕೆ ಮಾಡಬೇಕು ಎಂಬ ಬಗ್ಗೆ ತಿಳಿವಳಿಕೆ ನೀಡಲಾಗುವುದು’ ಎಂದು ತಿಳಿಸಿದರು.

ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಜಿಲ್ಲಾ ಕಾರ್ಯದರ್ಶಿ ಶಿವಣ್ಣ, ಅಗ್ನಿಶಾಮಕ ಹಾಗೂ ಪೊಲೀಸ್‌ ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !