ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ: ಜಿ.ಎಂ. ಸಿದ್ದೇಶ್ವರ ಅಸಮಾಧಾನ

Last Updated 24 ಜೂನ್ 2020, 16:04 IST
ಅಕ್ಷರ ಗಾತ್ರ

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ 4 ಅನ್ನು ಆರುಪಥಗಳನ್ನಾಗಿಸುವ ಕಾಮಗಾರಿಗೆ ನೀಡಿದ್ದ ಅವಧಿ ಮೀರಿದರೂ ಮುಕ್ತಾಯಗೊಂಡಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ಡಿಸೆಂಬರ್‌ ಒಳಗೆ ಮುಗಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಹೆದ್ದಾರಿ 4ರ ಆರು ಪಥ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ದಾವಣಗೆರೆ ತಾಲ್ಲೂಕಿನ 14 ಮತ್ತು ಹರಿಹರ ತಾಲ್ಲೂಕಿನ 4 ಗ್ರಾಮಗಳು ಜಿಲ್ಲೆಯಲ್ಲಿ ಈ ಯೋಜನೆಯಡಿ ಬರುತ್ತವೆ. 46.5 ಕಿ.ಮೀ ರಸ್ತೆ ಹಾದು ಹೋಗುತ್ತದೆ. 28.68 ಹೆಕ್ಟೇರ್ ಭೂಸ್ವಾಧೀನಪಡಿಸಬೇಕು. ಅದರಲ್ಲಿ ಸ್ವಾಧೀನ ಪ್ರಕ್ರಿಯೆ ಶೇ 98ರಷ್ಟು ಮುಗಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಶಾಮನೂರು ಮತ್ತು ಎಚ್ ಕಲಪನಹಳ್ಳಿಯಲ್ಲಿ 1 ಹೆಕ್ಟೇರ್ ಜಮೀನು ಅನುಮೋದನೆಗೆ ಬಾಕಿ ಇದೆ. ಯಾಕೆ ಭೂಸ್ವಾಧೀನ ಮಾಡುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಯೋಜನೆ ತರುವ ಕೆಲಸ ನಮ್ಮದು. ಅದನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಜನ ಪ್ರಶ್ನಿಸಿದರೆ ಅಧಿಕಾರಿಗಳನ್ನೇ ಅವರ ಮುಂದೆ ನಿಲ್ಲಿಸುತ್ತೇನೆ’ ಎಂದು ಸಂಸದರು ಎಚ್ಚರಿಸಿದರು.

ಅಂಡರ್‌ಪಾಸ್‌ಗಳಲ್ಲಿ ರಸ್ತೆ ಸರಿಪಡಿಸಬೇಕು. ಅವಶ್ಯಕತೆ ಇರುವಲ್ಲಿ ಅಂಡರ್‌ಪಾಸ್ ನಿರ್ಮಿಸಬೇಕು. ಬನಶಂಕರಿ ಬಡಾವಣೆ ಮತ್ತು ವಿದ್ಯಾನಗರದಲ್ಲಿ ಸರ್ವಿಸ್ ರಸ್ತೆ ಆಗಿಲ್ಲ. ಹೈಟೆನ್ಶನ್ ಲೈನ್‌ಗಳ ಶಿಫ್ಟಿಂಗ್ ಆಗಬೇಕು. 3 ವರ್ಷಗಳ ಹಿಂದೆ ಅನುಮೋದನೆಗೊಂಡ ಈ ಕಾಮಗಾರಿ ಈ ವರ್ಷ ಜೂನ್‌ಗೆ ಮುಗಿಯಬೇಕಿತ್ತು. ಕೊರೊನಾ ಕಾರಣಕ್ಕಾಗಿ ಕೇಂದ್ರ ಸರ್ಕಾರ 6 ತಿಂಗಳು ಹೆಚ್ಚಿನ ಅವಧಿ ನೀಡಿದೆ. ಅದರೊಳಗೆ ಮುಗಿಸಿ ಎಂದು ತಿಳಿಸಿದರು.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಶೇ 65ರಷ್ಟು ಮಂದಿಗೆ ಪರಿಹಾರ ನೀಡಲಾಗಿದೆ. ಉಳಿದ ಶೇ 35 ಮಂದಿಗೆ ಕೂಡಲೇ ನೀಡಬೇಕು. ಇಲ್ಲದೇ ಇದ್ದರೆ ಕಾಮಗಾರಿ ತಡವಾಗುತ್ತದೆ ಎಂದರು.

‘ಇನ್ನು ಎರಡು ವಾರಗಳ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು’ ಎಂದು ವಿಶೇಷ ಭೂಸ್ವಾಧೀನಾಧಿಕಾರಿ ಬಾಲಕೃಷ್ಣ ಪ್ರತಿಕ್ರಿಯಿಸಿದರು

ಹಲವೆಡೆ ತಾಂತ್ರಿಕ ತೊಂದರೆಗಳಿಂದ ರಸ್ತೆ ವಿಸ್ತರಣೆ ಮತ್ತು ಅಂಡರ್‌ಪಾಸ್ ಕೆಲಸಗಳಿಗೆ ಹಿನ್ನಡೆಯಾಗಿದೆ. ಮತ್ತೆ ಕೆಲವೆಡೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇವನ್ನೆಲ್ಲ ಸರಿಪಡಿಸಿಕೊಂಡು ಕೆಲಸ ನಿರ್ವಹಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾದೇಶಿಕ ಅಧಿಕಾರಿ ಸೂರ್ಯವಂಶಿ ಭರವಸೆ ನೀಡಿದರು.

ಲಕ್ಕಮುತ್ತೇನಹಳ್ಳಿ ಸೇರಿದಂತೆ ಹಲವೆಡೆ ಸರ್ವಿಸ್ ರಸ್ತೆ ಆಗದೇ ತೊಂದರೆ ಆಗಿದೆ. ಡೈವರ್ಶನ್ ರಸ್ತೆಗಳ ಅಗಲ ಹೆಚ್ಚಿಸಬೇಕು. ಹೈಟೆನ್ಶನ್ ಲೈನ್‌ಗಳನ್ನು ಸ್ಥಳಾಂತರಿಸಬೇಕು. ಜಿಲ್ಲಾ ಕೇಂದ್ರಕ್ಕೆ ಪ್ರವೇಶಿಸುವಲ್ಲಿ ದ್ವಾರ ನಿರ್ಮಿಸಬೇಕು ಎಂದು ಸಂಸದರು ಸೂಚಿಸಿದರು.

‘ಎಲ್ಲ ವ್ಯವಸ್ಥೆ ಸರಿಯಾಗಿದೆ ಎಂದು ತಿಳಿಸಿದ ಎಂಜಿನಿಯರ್‌ಗಳ ಮಾತು ನಂಬಿ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಜೂನ್‌ 22ರಂದು ಸ್ವಿಚ್‌ ಆನ್‌ ಮಾಡಿದ್ದೆ. ಅವತ್ತೇ ಒಂದು ಕಡೆ ಒಡೆದು ಹೋಯಿತು. ಅಲ್ಲಿ ಸರಿ ಮಾಡಿದಾಗ ಇನ್ನೊಂದು ಕಡೆ ಒಡೆದಿದೆ’ ಎಂದು ಸಂಸದರು ಬೇಸರ ವ್ಯಕ್ತಪಡಿಸಿದರು.

ಶಾಸಕ ಪ್ರೊ.ಲಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ರಾಷ್ಟ್ರೀಯ ಹೆದ್ದಾರಿ ಯೋಜನೆಯ ಯೋಜನಾ ನಿರ್ದೇಶಕ ಶ್ರೀನಿವಾಸ ನಾಯ್ಡು, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ರಾಷ್ಟ್ರೀಯ ಹೆದ್ದಾರಿ ಟೆಕ್ನಿಕಲ್ ಮ್ಯಾನೇಜರ್ ಮಲ್ಲಿಕಾರ್ಜುನ್, ಇರ್ಕಾನ್ ಕಂಪನಿಯ ನಾಗರಾಜ್ ಪಾಟಿಲ್, ದೊಡ್ಡಯ್ಯ, ಪಿಎನ್‌ಸಿ ಏಜೆನ್ಸಿಯ ಕಂಟ್ರಾಕ್ಟರ್ ಬ್ಯಾನರ್ಜಿ, ಈರಪ್ಪ ಮೇಟಿ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ತಹಶೀಲ್ದಾರ್ ಗಿರೀಶ್ ಇದ್ದರು.

‘ಬಿಎಸ್‌ಎನ್‌ಎಲ್‌ಗೆ ಕೇಂದ್ರ ಸರ್ಕಾರ ಹೂಡಿಕೆ ಮಾಡಲ್ಲ’

ಬಿಎಸ್‌ಎನ್‌ಎಲ್‌ಗೆ ಕೇಂದ್ರ ಸರ್ಕಾರ ಹೂಡಿಕೆ ಮಾಡಲ್ಲ. ಆದರೆ ರಾಷ್ಟ್ರೀಯ ಹೆದ್ದಾರಿಗೆ ಅನುದಾನ ನೀಡುತ್ತದೆ. ಹಾಗಾಗಿ ಬಿಎಸ್‌ಎನ್‌ಎಲ್‌ ನಿರ್ವಹಣೆಗೆ ಹೆದ್ದಾರಿಯವರು ಸಹಕಾರ ನೀಡಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ನೆಟ್‌ವರ್ಕ್‌ ಯಾಕೆ ಸರಿ ಇಲ್ಲ ಎಂದರೆ ರಾಷ್ಟ್ರೀಯ ಹೆದ್ದಾರಿಯವರು ಅಗೆದಿದ್ದಾರೆ ಎನ್ನುತ್ತಾರೆ. ನಾನು ಕಮಿಷನ್‌ ಪಡೆಯುವುದಿಲ್ಲ. ಆ ಹಣವನ್ನಾದರೂ ಬಿಎಸ್‌ಎನ್‌ಎಲ್‌ಗೆ ನೀಡಿ ಎಂದು ಸಲಹೆ ನೀಡಿದರು.

ಸಿಬ್ಬಂದಿಗೆ ವೇತನ ನೀಡದೆ 9 ತಿಂಗಳಾಯಿತು. ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಹಕಾರ ನೀಡಿದರೆ ಕೇಬಲ್‌ನಲ್ಲಿ ಉಂಟಾಗುವ ಸಣ್ಣ ತೊಂದರೆಗಳನ್ನು ನಿರ್ವಹಿಸಲು ಸಾಧ್ಯ ಎಂದು ಬಿಎಎಸ್‌ಎನ್‌ಎಲ್‌ ಡಿಜಿಎಂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT