ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 13ರಂದು ರಾಷ್ಟ್ರೀಯ ಲೋಕ ಅದಾಲತ್‌

6 ಸಾವಿರ ಪ್ರಕರಣ ಇತ್ಯರ್ಥದ ಗುರಿ: ನ್ಯಾಯಾಧೀಶ ಅಂಬಾದಾಸ್‌ ಕುಲಕರ್ಣಿ
Last Updated 20 ಜೂನ್ 2019, 4:18 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜುಲೈ 13ರಂದು ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ರಾಷ್ಟ್ರೀಯ ಬೃಹತ್ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಕನಿಷ್ಠ 6 ಸಾವಿರ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಅಂಬಾದಾಸ್‌ ಜಿ. ಕುಲಕರ್ಣಿ ತಿಳಿಸಿದರು.

ನ್ಯಾಯಾಲಯದಲ್ಲಿ ಯಾವುದೇ ಪ್ರಕರಣಗಳು ಇತ್ಯರ್ಥವಾಗಲು ಹಲವು ವರ್ಷಗಳು ಬೇಕಾಗುತ್ತವೆ. ಇದರಿಂದ ಸಮಯ ಮತ್ತು ಹಣ ವ್ಯರ್ಥವಾಗುತ್ತದೆ. ಕಾನೂನು ವ್ಯಾಪ್ತಿಯಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಿದರೆ ಸಮಯ, ಹಣದ ಉಳಿತಾಯದ ಜತೆಗೆ ವೈಮನಸ್ಸೂ ಕಡಿಮೆಯಾಗುತ್ತದೆ. ಶತ್ರುಗಳಂತೆ ಬಂದವರು ಮಿತ್ರರಂತೆ ಮರಳಲು ಸಾಧ್ಯ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೊಲೆ, ಲೈಂಗಿಕ ದೌರ್ಜನ್ಯ, ಪೋಕ್ಸೊ, ಜಾತಿ ನಿಂದನೆ ಮುಂತಾದ ಸಮಾಜ ವಿರೋಧಿ ಪ್ರಕರಣಗಳನ್ನು ಸಂಧಾನ ಮೂಲಕ ಇತ್ಯರ್ಥ ಮಾಡಲು ಸಾಧ್ಯವಿಲ್ಲ. ಅವುಗಳನ್ನು ಹೊರತುಪಡಿಸಿ ವಿವಾಹ ವಿಚ್ಛೇದನ, ಜೀವನಾಂಶ, ವಿವಾಹ ಪುನರುಜ್ಜೀವನ ಮುಂತಾದ ಕೌಟುಂಬಿಕ ಪ್ರಕರಣಗಳು, ಹಣಕಾಸು ವಿಚಾರಗಳು, ಕಾರ್ಮಿಕ ವಿವಾದಗಳು, ವಾಹನ ಅಪಘಾತ, ಭೂವ್ಯಾಜ್ಯ, ಸರ್ಕಾರ ಭೂಸ್ವಾಧೀನ ಮಾಡಿ ಪರಿಹಾರ ನೀಡದ ವಿಚಾರ ಮತ್ತಿತರ ಪ್ರಕರಣಗಳನ್ನು ರಾಜೀ ಸಂಧಾನದಿಂದ ವಿಲೇವಾರಿ ಮಾಡಬಹುದು ಎಂದು ತಿಳಿಸಿದರು.

ವಕೀಲರು, ಪೊಲೀಸರು, ನ್ಯಾಯಾಂಗದ ಅಧಿಕಾರಿಗಳ ಜತೆಗೆ ಈ ಬಗ್ಗೆ ಸಭೆ ನಡೆಸಲಾಗಿದೆ. ಇತ್ಯರ್ಥಗೊಳಿಸಬಲ್ಲ ಪ್ರಕರಣಗಳು ಯಾವುವು ಎಂಬುದನ್ನು ಪಟ್ಟಿ ಮಾಡಲಾಗಿದೆ. ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಸುಮಾರು 35 ಸಾವಿರ ಪ್ರಕರಣಗಳು ಇವೆ. ಅದರಲ್ಲಿ ಕನಿಷ್ಠ ಶೇ 20ರಷ್ಟಾದರೂ ಇತ್ಯರ್ಥವಾಗಬೇಕು ಎಂದರು.

ವಕೀಲರು, ಕಕ್ಷಿದಾರರು, ಇನ್ಶೂರೆನ್ಸ್ ಕಂಪನಿಗಳು ಸಹಕರಿಸಬೇಕು. ಲೋಕ ಅದಾಲತ್‌ ಮೂಲಕ ವಿಲೇವಾರಿ ಮಾಡಿಕೊಳ್ಳಲು ಬಯಸುವ ಕಕ್ಷಿದಾರರು ತಮ್ಮ ವಕೀಲರ ಮೂಲಕ ಅರ್ಜಿ ಹಾಕಿ ರಾಜೀ ಪತ್ರ ಸಲ್ಲಿಸಬಹುದು ಎಂದು ತಿಳಿಸಿದರು.

ಜುಲೈ 13 ಎರಡನೇ ಶನಿವಾರ ಆಗಿರುವುದರಿಂದ ನ್ಯಾಯಾಲಯದ ಬೇರೆ ಕಲಾಪಗಳಿರುವುದಿಲ್ಲ. ಎಲ್ಲ ನ್ಯಾಯಾಧೀಶರು ಲೋಕ ಅದಾಲತ್‌ನಲ್ಲಿ ಭಾಗವಹಿಸುವರು ಎಂದರು.

ಕಾನೂನು ಸಾಕ್ಷರತಾ ರಥ: ಹಲವು ಕಾನೂನುಗಳಿವೆ. ಅವುಗಳ ಬಗ್ಗೆ ಜನರಿಗೆ ಅರಿವು ಇರುವುದಿಲ್ಲ. ಅರಿವು ಮತ್ತು ನೆರವಿಗಾಗಿ ಕಾನೂನು ಸಾಕ್ಷರತಾ ರಥ ಜುಲೈ 6ರಿಂದ 9ರ ವರೆಗೆ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದು ಅಂಬಾದಾಸ್‌ ಕುಲಕರ್ಣಿ ಹೇಳಿದರು.

ಈ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ವಿವಿಧ ಸಂಘ ಸಂಸ್ಥೆಗಳು ಸಹಯೋಗ ನೀಡಲಿವೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶ ಪ್ರಭು ಎನ್‌. ಬಡಿಗೇರ್‌, ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ. ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT