ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಸಿದ್ದು ಕಾಂಗ್ರೆಸ್‌ ಟಿಕೆಟ್‌; ಒಲಿದಿದ್ದು ಬಿಜೆಪಿ ಟಿಕೆಟ್!

ದೆಹಲಿಗೆ ಹೋಗಿದ್ದ ಬಸವರಾಜ ನಾಯ್ಕ್‌ಗೆ ಸಿಕ್ಕಿತ್ತು ‘ಗುಡ್‌ಲಕ್‌’ ವಾಚ್
Last Updated 17 ಮಾರ್ಚ್ 2023, 6:09 IST
ಅಕ್ಷರ ಗಾತ್ರ

ದಾವಣಗೆರೆ: ಕಾಂಗ್ರೆಸ್‌ ಟಿಕೆಟ್‌ಗಾಗಿ ಕಾಂಗ್ರೆಸ್‌ ನಾಯಕರ ಜತೆಗೆ ದೆಹಲಿಗೆ ಹೋದವರು ಬಂದು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಶಾಸಕರೂ ಆದರು.

ಮಾಯಕೊಂಡದ ಬಸವರಾಜ ನಾಯ್ಕ್‌ 2008ರಲ್ಲಿ ಶಾಸಕರಾದ ಕಥೆ ಇದು. ಕ್ಷೇತ್ರಗಳ ಪುನರ್‌ವಿಂಗಡೆಯಾದ ಮೇಲೆ ಮಾಯಕೊಂಡ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಯಿತು. ಕಾಂಗ್ರೆಸ್‌ನ ಬಸವರಾಜ ನಾಯ್ಕ್‌ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದರು. ಅವರು ಮಾಯಕೊಂಡದಿಂದ ವಿಧಾನಸಭೆಗೆ ಸ್ಪರ್ಧಿಸಲು ಬಯಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ.ವೈ. ರಾಮಪ್ಪ, ನಗರಸಭೆ ಮಾಜಿ ಅಧ್ಯಕ್ಷ ಡಿ. ಬಸವರಾಜ್‌ ಸಹಿತ ಅನೇಕರು ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳಾಗಿದ್ದರು. ಬಸವರಾಜ ನಾಯ್ಕ್‌ ಅವರಿಗೇ ಟಿಕೆಟ್‌ ಎಂದು ಕಾಂಗ್ರೆಸ್‌ ನಾಯಕರು ಭರವಸೆ ನೀಡಿದ್ದರು.

ದಾವಣಗೆರೆ ಉತ್ತರದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಬಸವರಾಜ ನಾಯ್ಕ್‌ ಅವರನ್ನು ಕರೆದುಕೊಂಡು ದೆಹಲಿಗೆ ಹೋಗಿದ್ದರು. ಅಲ್ಲಿ ಟಿಕೆಟ್‌ ಸಿಗುವುದಿಲ್ಲ ಎಂಬುದು ಖಾತ್ರಿಯಾಯಿತು. ಹೋಗುವಾಗ ಒಂದೇ ವಿಮಾನದಲ್ಲಿ ಹೋಗಿದ್ದವರು ಬರುವಾಗ ಬೇರೆಬೇರೆಯಾದರು. ಬಸವರಾಜ ಒಬ್ಬಂಟಿಯಾಗಿ ದಾವಣಗೆರೆ ತಲುಪಿದ್ದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್‌.ಎ. ರವೀಂದ್ರನಾಥ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಎ.ಎಚ್‌. ಶಿವಯೋಗಿಸ್ವಾಮಿ ಮತ್ತಿತರರನ್ನು ಸಂಪರ್ಕಿಸಿ ಮಾತುಕತೆ ನಡೆಸಿ ಟಿಕೆಟ್‌ ಖಚಿತಪಡಿಸಿಕೊಂಡರು. ಬಿಜೆಪಿಯ ಟಿಕೆಟ್‌ ಘೋಷಣೆಯಾಯಿತು. ಬಸವರಾಜ ನಾಯ್ಕ್‌ ಅಭ್ಯರ್ಥಿಯಾದರು.

ಕಾಂಗ್ರೆಸ್‌ನಿಂದ ಡಾ.ವೈ.ರಾಮಪ್ಪ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಚುನಾವಣೆ ಮುಗಿದು ಫಲಿತಾಂಶ ಪ್ರಕಟಗೊಂಡಾಗ ಬಸವರಾಜ ನಾಯ್ಕ್‌ 16,657 ಮತಗಳ ಅಂತರದಿಂದ ಜಯಗಳಿಸಿದ್ದರು.

‘ಗುಡ್‌ಲಕ್‌’ ತಂದ ಬೆಳ್ಳಿ ವಾಚು

‘ನನಗೆ ಟಿಕೆಟ್‌ ಸಿಗುವುದಿಲ್ಲ ಎಂದು ಖಚಿತವಾಗುತ್ತಿದ್ದಂತೆಯೇ ಮಲ್ಲಿಕಾರ್ಜುನ ಅವರನ್ನು ಬಿಟ್ಟು ನಾನು ಬೆಂಗಳೂರಿಗೆ ಬಂದೆ. ವಿಮಾನ ಟಿಕೆಟ್‌ನಲ್ಲಿ ನನಗೊಂದು ಕೂಪನ್‌ ಬಂದಿತ್ತು. ಅದನ್ನು ಸ್ಕ್ರಾಚ್‌ ಮಾಡಿದಾಗ ಅದರಲ್ಲಿ ‘ಗುಡ್‌ಲಕ್‌’ ಎಂದು ಬರೆದಿತ್ತು. ಅದಕ್ಕೆ ವಿಮಾನ ಕಂಪನಿಯವರು ಒಂದು ಬೆಳ್ಳಿ ವಾಚ್‌ ನೀಡಿದರು. ಟಿಕೆಟ್‌ ಸಿಗದೇ ಇದ್ದ ನಿರಾಸೆಯಿಂದ ಹೊರಬರಲು ವಿಮಾನ ಟಿಕೆಟ್‌ ಜತೆ ಸಿಕ್ಕಿದ ‘ಗುಡ್‌ಲಕ್‌’ ಸಂದೇಶ ನೆರವಾಯಿತು’ ಎಂದು ಬಸವರಾಜ ನಾಯ್ಕ್‌ ಆ ಕ್ಷಣವನ್ನು ಮೆಲುಕು ಹಾಕಿದರು.

‘ಬೆಂಗಳೂರಿನಲ್ಲಿ ಇಳಿದು ಅಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡೆ. ಏನು ಮಾಡಿದರೂ ನಿದ್ದೆ ಬರಲಿಲ್ಲ. ಎದ್ದು ದಾವಣಗೆರೆಗೆ ಬಂದೆ. ಬಿಜೆಪಿ ನಾಯಕರನ್ನು ಸಂಪರ್ಕಿಸಿದೆ. ಟಿಕೆಟ್‌ ಸಿಕ್ಕಿತು. ಸ್ಪರ್ಧಿಸಿ ಶಾಸಕನಾದೆ. ‘ಗುಡ್‌ಲಕ್‌’ ನಿಜವಾಗಿಯೂ ನನಗೆ ಲಕ್‌ ತಂದಿತು’ ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT