ಶುಕ್ರವಾರ, ಡಿಸೆಂಬರ್ 4, 2020
21 °C
ಹನುಮಂತ ದೇವಾಲಯ ಅಭಿವೃದ್ಧಿಗೆ ಒತ್ತಾಯ

‘ಹುಂಡಿ ಹಣ ಬೇಕು; ಅಭಿವೃದ್ಧಿ ಏಕಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲೇಬೆನ್ನೂರು: ಸಮೀಪದ ಕುಂಬಳೂರು ಗ್ರಾಮದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಹನುಮಂತ ದೇವರ ಹುಂಡಿ ತೆರೆದು ಶನಿವಾರ ಹಣ ಎಣಿಕೆ ಮಾಡುವ ವೇಳೆ ದೇವಾಲಯದ ಅಭಿವೃದ್ಧಿಗೆ ಸರ್ಕಾರದಿಂದ ಹಣ ಮಂಜೂರಾಗಿಲ್ಲ ಎಂದು ಅಧಿಕಾರಿಗಳೊಂದಿಗೆ ಗ್ರಾಮಸ್ಥರು ವಾಗ್ದಾದ ನಡೆಸಿದರು.

‘ಪ್ರತಿ ವರ್ಷ ಬಂದು ಹುಂಡಿ ಹಣ ಎಣಿಸಿ ತೆಗೆದುಕೊಂಡು ಹೋಗುತ್ತೀರಿ, ದೇವಾಲಯದ ಅಭಿವೃದ್ಧಿ ಮಾಡಿಲ್ಲ’ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ದೇವಾಲಯದ ಗೋಪುರ ಕಳಸ ಶಿಥಿಲವಾಗಿದ್ದು, ಹೊಸದಾಗಿ ನಿರ್ಮಿಸಲು ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದ ಸಿಬ್ಬಂದಿ ಒಮ್ಮೆಯೂ ದೇವಾಲಯಕ್ಕೆ ಬಂದಿಲ್ಲ. ಈಗ ಬಂದಿದ್ದೀರಿ’ ಎಂದು ಗ್ರಾಮಸ್ಥರು ವಾಗ್ದಾದ ನಡೆಸಿದರು.

ಮಧ್ಯೆ ಪ್ರವೇಶಿಸಿದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ‘ದೇವಾಲಯದ ಅಭಿವೃದ್ಧಿ ಕೆಲಸ ಕುರಿತು ಕಚೇರಿಗೆ ಬಂದು  ಮಾತನಾಡಿ ಸಮಸ್ಯೆ ಪರಿಹರಿಸೋಣ’ ಎಂದು ಭರವಸೆ ನೀಡಿದರು.

ದೇವಾಲಯದ ಅರ್ಚಕರಿಬ್ಬರು ದೇವಾಲಯಕ್ಕೆ ಬರುವ ಚಿನ್ನಾಭರಣ, ಹಣದ ಲೆಕ್ಕ ಸರಿಯಾಗಿಲ್ಲ ಎಂದು ಪರಸ್ಪರ ವಾಗ್ವಾದ ನಡೆಸಿದರು. ಕಂದಾಯ ಇಲಾಖೆ ಸಿಬ್ಬಂದಿ ಪೊಲೀಸರನ್ನು ಕರೆಸಿ ಪರಿಸ್ಥಿತಿ ನಿಯಂತ್ರಿಸಿದರು.

ಎರಡು ವರ್ಷಗಳಿಂದ ಹುಂಡಿ ತೆರೆಯದ ಕಾರಣ ಬೀಗ ತೆಗೆಯಲು ಆಗಲಿಲ್ಲ. ಆಗ ಬೀಗ ಸರಿ ಮಾಡುವವರನ್ನು ಕರೆಸಿ ತೆರೆಯಲಾಯಿತು.  ಹುಂಡಿಯಲ್ಲಿ ₹ 5,93,416 ಸಂಗ್ರಹವಾಗಿದೆ ಎಂದು ಉಪ ತಹಶೀಲ್ದಾರ್‌ ಆರ್.ರವಿ ತಿಳಿಸಿದರು.

ಕೊರೊನಾ ಕಾರಣ ಹೆಚ್ಚಿನ ಭಕ್ತರು ಬಂದಿಲ್ಲ. ಇಲ್ಲದಿದ್ದರೆ ಹೆಚ್ಚಿನ ಹಣ ಸಂಗ್ರಹವಾಗುತ್ತಿತ್ತು ಎಂದು ಗ್ರಾಮಸ್ಥರು ಹೇಳಿದರು.

ರಾಜಸ್ವ ನಿರೀಕ್ಷಕ ಸಮೀರ್ ಅಹ್ಮದ್, ವಿಎ ಶ್ರೀಧರ ಮೂರ್ತಿ, ಮುಜರಾಯಿ ವಿಷಯ ನಿರ್ವಾಹಕಿ ಸಂಗೀತಾ, ಎಎಸ್ಐ ಮಲ್ಲಿಕಾರ್ಜುನ, ಅರ್ಚಕ ಶ್ರೀನಿವಾಸ, ಭೀಮಯ್ಯ, ಗ್ರಾಮದ ಮುಖಂಡರಾದ ಬಸವರಾಜ್, ಗೌಡ್ರ ಪರಮೇಶ್ವರಪ್ಪ, ಲಿಂಗರಾಜ್, ರೇವಣಸಿದ್ದಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.