ಗುರುವಾರ , ಸೆಪ್ಟೆಂಬರ್ 19, 2019
26 °C
ವೈದ್ಯರಾಗುವ ಕನಸು ಹೊತ್ತು ಪರೀಕ್ಷೆ ಬರೆದ ವಿದ್ಯಾರ್ಥಿಗಳು

ದಾವಣಗೆರೆಯಲ್ಲಿ ನೀಟಾಗಿ ನಡೆದ ‘ನೀಟ್‌’

Published:
Updated:
Prajavani

ದಾವಣಗೆರೆ: ಯಾವುದೇ ರೀತಿಯ ಅಹಿತರಕ ಘಟನೆಗಳಿಗೆ ಆಸ್ಪದ ಇಲ್ಲದಂತೆ ನಗರದ 13 ಕೇಂದ್ರಗಳಲ್ಲಿ ವೈದ್ಯಕೀಯ ಕೋರ್ಸ್‌ಗಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್‌) ಭಾನುವಾರ ಸುಗಮವಾಗಿ ನಡೆಯಿತು.

ವೈದ್ಯಕೀಯ ಪದವಿ ಪಡೆದು ಭವಿಷ್ಯವನ್ನು ಕಟ್ಟಿಕೊಳ್ಳುವ ಕನಸು ಹೊತ್ತು ಸುತ್ತಲಿನ ನಾಲ್ಕೈದು ಜಿಲ್ಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು, ತಮ್ಮ ಪ್ರತಿಭೆಯನ್ನು ‘ನೀಟ್‌’ನಲ್ಲಿ ಒರೆಗೆ ಹಚ್ಚಿದರು. ಮೂರು ಗಂಟೆ ನಡೆದ ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ತಮ್ಮ ಕನಸಿಗೆ ನೀರೆರೆದರು.

ನಗರದ ಸಿದ್ಧಗಂಗಾ ಪಿ.ಯು. ಕಾಲೇಜು, ತರಳಬಾಳು ಅನುಭವ ಮಂಟಪ ಸೇರಿ ಹದಿಮೂರು ಕಡೆ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಬಳ್ಳಾರಿ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ನಗರಕ್ಕೆ ಬಂದು ತಮ್ಮನ್ನು ಅದೃಷ್ಟ ಪರೀಕ್ಷೆಗೆ ಒಳಪಡಿಸಿಕೊಂಡರು.

ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಪರೀಕ್ಷೆ ಸಮಯ ನಿಗದಿಯಾಗಿತ್ತು. ಮಧ್ಯಾಹ್ನ 1.15ರೊಳಗೆ ಪರೀಕ್ಷಾ ಕೇಂದ್ರಗೊಳಗೆ ವಿದ್ಯಾರ್ಥಿಗಳು ಇರಬೇಕಾಗಿತ್ತು. ಹೀಗಾಗಿ ಹೆಚ್ಚಿನ ವಿದ್ಯಾರ್ಥಿಗಳು ಮಧ್ಯಾಹ್ನ 12 ಗಂಟೆಗೆಲ್ಲ ಪೋಷಕರು, ಸಂಬಂಧಿಕರೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದು ತಮ್ಮ ರೋಲ್‌ ನಂಬರ್‌ ಯಾವ ಕೊಠಡಿಯಲ್ಲಿದೆ ಎಂಬುದನ್ನು ಪರಿಶೀಲಿಸುತ್ತಿದ್ದ ದೃಶ್ಯ ಕಂಡುಬಂತು.

ಬಿಗಿ ಭದ್ರತೆ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ‘ನೀಟ್‌’ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದಿರಲಿ ಎಂಬ ಕಾರಣಕ್ಕೆ ಪರೀಕ್ಷಾ ಕೇಂದ್ರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಪರೀಕ್ಷೆ ಕೇಂದ್ರಗಳ ಪ್ರವೇಶ ದ್ವಾರದೊಳಗೆ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿ ಹೊರತುಪಡಿಸಿ ಉಳಿದವರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಪ್ರವೇಶ ದ್ವಾರದಲ್ಲಿದ್ದ ಸಿಬ್ಬಂದಿ ಪ್ರವೇಶ ಪತ್ರ ಹಾಗೂ ಗುರುತಿನ ಚೀಟಿ ಇರುವುದನ್ನು ಖಾತ್ರಿ ಪಡಿಸಿಕೊಂಡ ಬಳಿಕವೇ ವಿದ್ಯಾರ್ಥಿಗಳನ್ನು ಒಳಗೆ ಕಳುಹಿಸುತ್ತಿದ್ದರು.

ಒಳಗೆ ಬಂದ ವಿದ್ಯಾರ್ಥಿಗಳನ್ನು ಲೋಹಶೋಧಕ ಉಪಕರಣಗಳಿಂದ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ತುಂಬು ತೋಳಿನ ಅಂಗಿ, ಶೂ, ವಾಚು, ರಿಂಗ್‌, ಮೂಗುತಿ, ಚೈನ್‌ ಹಾಕಿಕೊಳ್ಳುವುದನ್ನು ನಿರ್ಬಂಧಿಸಲಾಗಿತ್ತು. ಪರದೆಯ ಮರೆಯಲ್ಲಿ ಮಹಿಳಾ ಸಿಬ್ಬಂದಿ ವಿದ್ಯಾರ್ಥಿನಿಯರನ್ನು ತಪಾಸಣೆಗೊಳಪಡಿಸಿ, ನಿಷೇಧಿತ ವಸ್ತುಗಳನ್ನು ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದರು.

ಪರೀಕ್ಷಾ ಕೇಂದ್ರದ ಹೊರಗೆ ಪೋಷಕರು ಹಾಗೂ ಸಂಬಂಧಿಕರು ಮಕ್ಕಳ ಬರುವಿಕೆಗಾಗಿ ಕಾಯುತ್ತಿದ್ದರು. ಪರಸ್ಪರ ಚರ್ಚಿಸುತ್ತ ಪರೀಕ್ಷೆಯ ಬಿಸಿ ಹೇಗಿರಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದರು.

‘ಅಕ್ಕನ ಮಗಳು ಪರೀಕ್ಷೆ ಬರೆಯಲು ಹೋಗಿದ್ದಾಳೆ. ನೀಟ್‌ನಲ್ಲಿ ಒಳ್ಳೆಯ ರ‍್ಯಾಂಕ್‌ ಬಂದು ಸರ್ಕಾರಿ ಸೀಟು ಸಿಕ್ಕರೆ ಎಂ.ಬಿ.ಬಿ.ಎಸ್‌. ಮಾಡಿಸುತ್ತೇವೆ. ಇಲ್ಲದಿದ್ದರೆ ಸಿಇಟಿ ರ‍್ಯಾಂಕಿಂಗ್‌ ನೋಡಿಕೊಂಡು ವೆಟನರಿ ಕೋರ್ಸ್‌ಗೆ ಸೇರಿಸುತ್ತೇವೆ’ ಎಂದು ಅನುಭವ ಮಂಟಪದ ಹೊರಗೆ ಕಾಯುತ್ತಿದ್ದ ಕುಣೆಬೇಳಕೆರೆ ಗ್ರಾಮದ ರೈತ ಆಂಜನೇಯ ‘ಪ್ರಜಾವಾಣಿ’ಗೆ ತಿಳಿಸಿದರು.

ಹರಿಹರದ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡುವ ಕೆ. ಕರಿಬಸಪ್ಪ, ‘ಮಗಳು ಸಿಇಟಿ ಚೆನ್ನಾಗಿ ಮಾಡಿದ್ದಾಳೆ. ‘ನೀಟ್‌’ ರ‍್ಯಾಂಕಿಂಗ್‌ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತೇವೆ. ಸರ್ಕಾರಿ ಸೀಟು ಸಿಕ್ಕರೆ ಆಯುರ್ವೇದ ವೈದ್ಯಕೀಯ ಪದವಿ ಮಾಡಿಸಬೇಕು ಎಂದುಕೊಂಡಿದ್ದೇನೆ. ಇಲ್ಲದಿದ್ದರೆ ಬಿಎಸ್ಸಿ ಎಗ್ರಿ ಕೋರ್ಸ್‌ ಓದಿಸುತ್ತೇನೆ’ ಎಂದು ತಮ್ಮ ಕನಸನ್ನು ಹಂಚಿಕೊಂಡರು.

ಹೂವಿನಮಡು ಗ್ರಾಮದ ರೈತ ಓಂಕಾರಪ್ಪ ಅವರು ಮಗನನ್ನು ಪಶು ವೈದ್ಯರನ್ನಾಗಿ ಮಾಡುವ ಕನಸು ಕಾಣುತ್ತಿದ್ದರು. ‘ಸರ್ಕಾರಿ ಸೀಟು ಸಿಕ್ಕರೆ ವೆಟನರಿ ಕೋರ್ಸ್‌ಗೆ ಸೇರಿಸುತ್ತೇನೆ. ಇಲ್ಲದಿದ್ದರೆ ಬಿಎಸ್ಸಿ ಮಾಡಿಸುತ್ತೇನೆ’ ಎಂದರು. ಎಂಜಿನಿಯರಿಂಗ್‌ ಮಾಡಿಸುವ ಆಲೋಚನೆ ಇಲ್ಲವೇ ಎಂದು ಮಾತಿಗೆಳೆದಾಗ, ‘ಇಂದು ಐಟಿಐ ಓದಿದ ಕೆಲವರೂ ತಿಂಗಳಿಗೆ ₹ 50 ಸಾವಿರ ಸಂಬಳ ಪಡೆಯುತ್ತಿದ್ದಾರೆ. ಆದರೆ, ಎಂಜಿನಿಯರಿಂಗ್‌ ಓದಿದ ಎಷ್ಟೋ ವಿದ್ಯಾರ್ಥಿಗಳು ಕೇವಲ ₹ 20 ಸಾವಿರಕ್ಕೆ ಕೆಲಸ ಮಾಡಬೇಕಾಗುತ್ತಿದೆ. ಹೀಗಾಗಿ ನಂಬರ್‌ ಒನ್‌ ಕಾಲೇಜಿನಲ್ಲಿ ಸೀಟು ಸಿಕ್ಕರೂ ಎಂಜಿನಿಯರಿಂಗ್‌ ಮಾಡಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

13 ಕೇಂದ್ರಗಳಲ್ಲಿ ಪರೀಕ್ಷೆ

‘8,220 ವಿದ್ಯಾರ್ಥಿಗಳು ‘ನೀಟ್‌’ಗೆ ನೋಂದಣಿ ಮಾಡಿಕೊಂಡಿದ್ದರು. ನಗರದ 13 ಕೇಂದ್ರಗಳಲ್ಲೂ ಯಾವುದೇ ಗೊಂದಲಗಳಿಲ್ಲದೇ ಪರೀಕ್ಷೆ ಸುವ್ಯವಸ್ಥಿತವಾಗಿ ನಡೆದಿದೆ’ ಎಂದು ‘ನೀಟ್‌’ ನಗರ ಸಂಯೋಜಕರಾದ ಮಾಗನೂರು ಬಸಪ್ಪ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎನ್‌.ಎಚ್‌. ಕುಮಾರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮಾಗನೂರು ಬಸಪ್ಪ ಕಾಲೇಜು, ತರಳಬಾಳು ಶಾಲೆ, ಸಿದ್ಧಗಂಗಾ ಪದವಿ ಪೂರ್ವ ಕಾಲೇಜು, ತೋಳಹುಣಸೆ ಪಿಎಸ್‌ಎಸ್‌ಆರ್‌, ಜೈನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿ, ಶಶಿ ಇಂಟರ್‌ನ್ಯಾಶನಲ್‌ ಸ್ಕೂಲ್‌, ಬಾಪೂಜಿ ಪಾಲಿಟೆಕ್ನಿಕ್‌, ಬಾಪೂಜಿ ಎಂಜಿನಿಯರಿಂಗ್‌ ಕಾಲೇಜು, ಅಥಣಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಮಾತಾ ಅಮೃತಾನಂದಮಯಿ, ಜಿಎಂಐಟಿ, ಜಿ.ಎಂ. ಹಾಲಮ್ಮ ಪಿ.ಯು. ಕಾಲೇಜು, ಕೊಂಡಜ್ಜಿ ರಸ್ತೆಯ ಕೇಂದ್ರೀಯ ವಿದ್ಯಾಲಯದ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಎಲ್ಲಾ ಕೇಂದ್ರಗಳಲ್ಲೂ ಪರೀಕ್ಷೆ ಸುಗಮವಾಗಿ ನಡೆಯಿತು. ಮುಂದಿನ ಬಾರಿ ನಗರದಲ್ಲಿ ಇನ್ನೂ ಹೆಚ್ಚಿನ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಮಾತಾ ಅಮೃತಾನಂದಮಯಿ ಶಾಲೆಯ ಪ್ರಾಂಶುಪಾಲೆ ಗೀತಾ ಅವರು ‘ನೀಟ್‌’ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು. ಸಿದ್ಧಗಂಗಾ ಕಾಲೇಜಿನ ಪ್ರಾಚಾರ್ಯ ಪ್ರಸಾದ್‌ ಬಂಗೇರ ಸಹಕಾರ ನೀಡಿದ್ದರು.

ಅಂಕಿ–ಅಂಶ

8,220 ಜಿಲ್ಲೆಯಲ್ಲಿ ‘ನೀಟ್‌’ ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳು

7,341 ‘ನೀಟ್‌’ ಬರೆದ ಒಟ್ಟು ವಿದ್ಯಾರ್ಥಿಗಳು

879 ‘ನೀಟ್‌’ಗೆ ಗೈರಾದ ವಿದ್ಯಾರ್ಥಿಗಳು

 

ಪರೀಕ್ಷೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಆಗಲಿಲ್ಲ. 180 ಪ್ರಶ್ನೆಗಳ ಪೈಕಿ 140 ಅಷ್ಟನ್ನೇ ಉತ್ತರಿಸಲು ಸಾಧ್ಯವಾಯಿತು. ಭೌತವಿಜ್ಞಾನದ ಪ್ರಶ್ನೆಗಳು ಕಠಿಣವಾಗಿದ್ದವು ಎನಿಸಿತು.
– ಕೆ.ಪಿ. ಪ್ರಣವ್‌, ವಿದ್ಯಾರ್ಥಿ, ಶಿವಮೊಗ್ಗ

ಜೀವವಿಜ್ಞಾನದಲ್ಲಿ ಆರು ಪ್ರಶ್ನೆಗಳ ಉತ್ತರಗಳು ಏಕರೂಪದಲ್ಲಿರುವಂತೆ ಕಂಡುಬಂತು. ಹೀಗಾಗಿ ಇದನ್ನು ಉತ್ತರಿಸುವಾಗ ಗೊಂದಲ ಆಗಿತ್ತು.
– ದಿವಾಕರ, ವಿದ್ಯಾರ್ಥಿ, ದಾವಣಗೆರೆ

ಒಟ್ಟಾರೆ ಪರೀಕ್ಷೆ ಸುಲಭವಾಗಿಯೇ ಇತ್ತು. ಭೌತವಿಜ್ಞಾನದ ಕೆಲ ಪ್ರಶ್ನೆಗಳನ್ನು ಉತ್ತರಿಸುವಾಗ ಗೊಂದಲ ಉಂಟಾಯಿತು.
– ಸ್ಫೂರ್ತಿ, ವಿದ್ಯಾರ್ಥಿನಿ, ದಾವಣಗೆರೆ

ಪರೀಕ್ಷೆ ಸಿಇಟಿಗಿಂತಲೂ ಕಠಿಣವಾಗಿದ್ದರೂ ಹೇಳಿಕೊಳ್ಳುವಷ್ಟೇನೂ ಟಫ್‌ ಆಗಿರಲಿಲ್ಲ. ಕೆಲ ಪ್ರಶ್ನೆಗಳಿಗೆ ನಿಖರ ಉತ್ತರ ಸಿಗದೇ ಗೊಂದಲವಾಗಿತ್ತು.
– ಶ್ರಾವಣಿ, ವಿದ್ಯಾರ್ಥಿನಿ, ಕೊಟ್ಟೂರು

Post Comments (+)