ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ವಿಶ್ವವಿದ್ಯಾಲಯ: ಮತ್ತೆ ಸಿಕ್ಕೀತೇ ಮಹಿಳಾ ಸಾರಥ್ಯ?

ನೂತನ ಕುಲಪತಿ ಆಯ್ಕೆಗೆ ಶೋಧನಾ ಸಮಿತಿಯಿಂದ ಮೂವರ ಹೆಸರು ಶಿಫಾರಸು
Last Updated 26 ಮೇ 2022, 5:57 IST
ಅಕ್ಷರ ಗಾತ್ರ

ದಾವಣಗೆರೆ: ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ. ತುಳಸಿಮಾಲಾ ನೇತೃತ್ವದ ನಾಲ್ವರು ಸದಸ್ಯರನ್ನು ಒಳಗೊಂಡ ಶೋಧನಾ ಸಮಿತಿಯು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಯನ್ನು ಆಯ್ಕೆ ಮಾಡಲು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವೆ ಡಾ.ಎಚ್‌.ಎಸ್‌. ಅನಿತಾ ಸೇರಿ ಮೂವರ ಹೆಸರನ್ನು ಸರ್ಕಾರಕ್ಕೆ ಶಿಫಾರಸು ಮಾಡಿದೆ.

ದಾವಣಗೆರೆ ವಿಶ್ವವಿದ್ಯಾಲಯದ ಮೊದಲ ಕುಲಪತಿಯಾಗಿ ಪ್ರೊ.ಎಸ್‌.ಇಂದುಮತಿ ಅವರು 2009ರಿಂದ 2014ರ ವರೆಗೆ ಸೇವೆ ಸಲ್ಲಿಸಿದ ಬಳಿಕ ಇದೀಗ ವಿಶ್ವವಿದ್ಯಾಲಯದ ಸಾರಥ್ಯವನ್ನು ವಹಿಸಿಕೊಳ್ಳಲು ಎರಡನೇ ಬಾರಿಗೆ ಮಹಿಳೆಗೆ ಅವಕಾಶ ಸಿಗಲಿದೆಯೇ ಎಂಬ ಕುತೂಹಲವೂ ಮೂಡಿದೆ.

ಡಾ.ಎಚ್‌.ಎಸ್‌. ಅನಿತಾ ಜೊತೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಟಿ.ಸಿ. ತಾರಾನಾಥ್‌ ಹಾಗೂ ಅದೇ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಡಿ. ಕುಂಬಾರ್‌ ಅವರ ಹೆಸರನ್ನು ಶೋಧನಾ ಸಮಿತಿಯು ಶಿಫಾರಸು ಮಾಡಿದೆ. ರಾಜ್ಯ ಸರ್ಕಾರವು ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಂದ ಈ ತಿಂಗಳ ಅಂತ್ಯದೊಳಗೆ ಅನುಮೋದನೆ ಪಡೆದುಕೊಂಡು, ನೂತನ ಕುಲಪತಿಯ ಹೆಸರನ್ನು ಘೋಷಿಸುವ ನಿರೀಕ್ಷೆ ಇದೆ. ವಿಶ್ವವಿದ್ಯಾಲಯದ ಉನ್ನತ ಹುದ್ದೆಯನ್ನು ಅಲಂಕರಿಸಲು ಈ ಮೂವರೂ ಅಭ್ಯರ್ಥಿಗಳು ಸಾಧ್ಯತೆ ಇರುವ ಎಲ್ಲಾ ಕಸರತ್ತುಗಳನ್ನೂ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಮೂವರ ಪೈಕಿ ಎಚ್‌.ಎಸ್‌. ಅನಿತಾ ಅವರು ಹಲವು ವರ್ಷಗಳಿಂದ ಇದೇ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಇಲ್ಲಿನ ಸಕಾರಾತ್ಮಕ ಅಂಶಗಳು ಹಾಗೂ ಸವಾಲುಗಳನ್ನು ಅರಿತುಕೊಂಡಿದ್ದಾರೆ. ಹೀಗಿರುವಾಗ ಅವರನ್ನೇ ವಿಶ್ವವಿದ್ಯಾಲಯದ ಮುಖ್ಯಸ್ಥರನ್ನಾಗಿ ನೇಮಕ ಮಾಡಿದರೆ ಗುರಿ ಸಾಧಿಸುವುದು ಸುಲಭವಾಗಲಿದೆ’ ಎಂದು ವಿಶ್ವವಿದ್ಯಾಲಯದ ಸಿಬ್ಬಂದಿ ಅಭಿಪ್ರಾಯಪಡುತ್ತಾರೆ.

‘ಉನ್ನತ ಹುದ್ದೆಯನ್ನು ಅಲಂಕರಿಸಲು ಮೂವರೂ ಅಭ್ಯರ್ಥಿಗಳೂ ರಾಜಕೀಯ ಪ್ರಭಾವವನ್ನು ಬೀರುತ್ತಿದ್ದಾರೆ. ಒಬ್ಬರು ಆರ್‌.ಎಸ್‌.ಎಸ್‌. ಮುಖಂಡರನ್ನು ನೆಚ್ಚಿಕೊಂಡಿದ್ದರೆ, ಮತ್ತೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವಲಂಬಿಸಿದ್ದಾರೆ. ಇನ್ನೊಬ್ಬರು ಹೆಸರಿಗೆ ಅನುಮೋದನೆ ನೀಡಬೇಕಾಗಿರುವ ರಾಜ್ಯಪಾಲರನ್ನೇ ಓಲೈಸಲು ಯತ್ನಿಸುತ್ತಿದ್ದಾರೆ. ಮೂವರು ಅಭ್ಯರ್ಥಿಗಳೂ ತಮ್ಮ ಗುರಿಯನ್ನು ಸಾಧಿಸಲು ಎಲ್ಲಾ ಬಗೆಯ ಕಸರತ್ತನ್ನೂ ಮಾಡುತ್ತಿದ್ದಾರೆ. ಇವರಲ್ಲಿ ಯಾರಿಗೆ ‘ಫಲ’ ಸಿಗಲಿದೆ ಎಂಬುದನ್ನು ಕಾದು ನೋಡಬೇಕು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಮಾಹಿತಿ
ನೀಡಿದರು.

ಬಿ.ಡಿ. ಕುಂಬಾರ್‌ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಲೈಬ್ರೆರಿ ಮತ್ತು ಇನ್ಫರ್ಮೇಷನ್‌ ಸೈನ್ಸ್‌ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕುಲಪತಿ ಹುದ್ದೆಗೆ 65 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. ಹೀಗಾಗಿ ಕುಂಬಾರ್‌ ಅವರೂಸ್ಪರ್ಧೆಯಲ್ಲಿದ್ದಾರೆ.

ಕುಲಪತಿ ಹುದ್ದೆಯನ್ನು ಬಯಸಿ ಒಟ್ಟು 88 ಅರ್ಜಿಗಳು ಶೋಧನಾ ಸಮಿತಿ ಎದುರಿಗೆ ಬಂದಿದ್ದವು. ಅವುಗಳನ್ನು ಪರಿಶೀಲಿಸಿ, ಮೂವರ ಹೆಸರನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ.

ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್‌ನಿಂದ ನಾಮನಿರ್ದೇಶನ ಗೊಂಡಿದ್ದ ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ವಿ. ಕಟ್ಟಿಮನಿ, ರಾಜ್ಯಪಾಲರಿಂದ ನಾಮನಿರ್ದೇಶನಗೊಂಡಿದ್ದ ಮಧ್ಯ ಪ್ರದೇಶ ಸರ್ಕಾರದ ಶಾಲಾ ಪ್ರವೇಶ ಹಾಗೂ ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷ ರವೀಂದ್ರ ರಾಮಚಂದ್ರ ಕನ್ಹರೆ ಹಾಗೂ ಯುಜಿಸಿಯಿಂದ ನಾಮನಿರ್ದೇಶನ ಗೊಂಡಿದ್ದ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ನಾಗೇಶ್ವರ ರಾವ್‌ ಅವರು ಶೋಧನಾ ಸಮಿತಿಯಲ್ಲಿದ್ದರು.

ಸೇವೆ ಸಲ್ಲಿಸಿದ ಮೂವರು ಕುಲಪತಿಗಳು
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಿಂದ ಬೇರ್ಪಟ್ಟು 2009ರಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಸ್ಥಾಪನೆಗೊಂಡ ಬಳಿಕ ಇದುವರೆಗೆ ಮೂವರು ಕುಲಪತಿಗಳು ಸೇವೆ ಸಲ್ಲಿಸಿದ್ದಾರೆ.

ಎಸ್‌.ಇಂದುಮತಿ ಅವರು ಮೊದಲ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಬಿ.ಬಿ. ಕಲಿವಾಳ್‌ ಅವರು ಎರಡನೇ ಕುಲಪತಿಯಾಗಿ ನೇಮಕಗೊಂಡಿದ್ದರು. ಆ ಬಳಿಕ ಪ್ರೊ.ಶರಣಪ್ಪ ವಿ. ಹಲಸೆ ಅವರು ಕುಲಪತಿಯಾಗಿ ನೇಮಕಗೊಂಡಿದ್ದು, ಮಾರ್ಚ್‌ನಲ್ಲಿ ಅವಧಿ ಪೂರ್ಣಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT