ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಾಭಾವ ತರುತ್ತಿರುವ ಹೊಸ ಸಂಶೋಧನೆಗಳು

ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಡಾ. ಉಪೇಂದ್ರ ನಾಂಗ್‌ತೊಂಬಾ
Last Updated 16 ಫೆಬ್ರುವರಿ 2020, 9:04 IST
ಅಕ್ಷರ ಗಾತ್ರ

ದಾವಣಗೆರೆ: ಆರೋಗ್ಯಯುತ ಜೀವನ ನಡೆಸಲು ಅಗತ್ಯವಾದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಲ್ಲಿನ ಹೊಸ ಆವಿಷ್ಕಾರಗಳು, ವೈಜ್ಞಾನಿಕ ಸಂಶೋಧನೆಗಳು ಹೊಸ ಹೊಳಹು ನೀಡಿದೆಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಡಾ. ಉಪೇಂದ್ರ ನಾಂಗ್‌ತೊಂಬಾ ಹೇಳಿದರು.

ಇಲ್ಲಿನ ಡಿಆರ್‌ಎಂ ವಿಜ್ಞಾನ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗದಿಂದ ಶನಿವಾರ ಹಮ್ಮಿಕೊಂಡಿದ್ದ ‘ಜೈವಿಕ ವಿಜ್ಞಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು’ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ರಸಾಯನ ಆಯುರ್ವೇದದ ಪ್ರಮುಖ ವಿಭಾಗವಾಗಿದ್ದು, ಆಯುರ್ವೇದ ಕಾರಕಗಳು ಹಾಗೂ ಇತರ ಜೀವನ ಶೈಲಿ ಬಗ್ಗೆ ಚರ್ಚಿಸುತ್ತದೆ. ಪೊಮಿಗ್ರಾನೈಟ್‌ ಹಣ್ಣಿನ ಜ್ಯೂಸ್‌ ಗಂಡು ಕೀಟದ ಶೇ 18, ಹಾಗೂ ಹೆಣ್ಣು ಕೀಟದ ಶೇ 8 ರಷ್ಟು ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಎರಡೂ ಕೀಟಗಳು ಒಟ್ಟಿಗೆ ಸೇರಿದಾಗ ಶೇ 19 ರಷ್ಟು ಜೀವಿತಾವಧಿ ಹೆಚ್ಚಳ ಸಾಧ್ಯ ಎಂದು ಸಂಶೋಧನೆಗಳು ಹೇಳುತ್ತವೆ. ಇಂತಹ ಹೊಸ ಸಂಶೋಧನೆಗಳು ಮನುಷ್ಯನ ಜೀವಿತಾವಧಿ ಹಾಗೂ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಹೊಸ ಆಶಾಭಾವನೆಗಳನ್ನು ಮೂಡಿಸಿವೆ ಎಂದು ಅಭಿಪ್ರಾಯಪಟ್ಟರು.

ಯಾರೂ ದಡ್ಡರಲ್ಲ. ಪರಿಶ್ರಮದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ತಮ್ಮ ಸ್ನೇಹಿತನ ಸಾಧನೆ ಮೂಲಕ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.

ಮುಖ್ಯ ಅತಿಥಿ ಬಾಪೂಜಿ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ, ‘ಸಮಯ ವ್ಯರ್ಥ ಮಾಡದೆ ವಿದ್ಯಾರ್ಥಿಗಳು ಶ್ರಮ ಪಡಬೇಕು. ವಿಜ್ಞಾನಿಗಳಿಗೆ ಸಮಯ ತುಂಬಾ ಮುಖ್ಯ. ಸಮಯವನ್ನು ಸದ್ಬಳಕೆ ಮಾಡಿಕೊಂಡರೆ ಜೀವನದಲ್ಲಿ ಉನ್ನತವಾದುದನ್ನು ಸಾಧಿಸಲು ಸಾಧ್ಯ’ ಎಂದು ಸಲಹೆ ನೀಡಿದರು.

ಪ್ರಪಂಚದ ಇಡೀ ಜ್ಞಾನವನ್ನು ಶಾಸ್ತ್ರ ಮತ್ತು ಕಾವ್ಯಗಳಾಗಿ ವಿಂಗಡಿಸಬಹುದು. ಶಾಸ್ತ್ರ ಎಂಬುದು ಪ್ರಜ್ಞೆಯಿಂದ ಬರುತ್ತದೆ. ಶಾಸ್ತ್ರ ಹೆಚ್ಚು ಶ್ರಮ ಬೇಡುತ್ತದೆ. ಅದೇ ರೀತಿ ವಿಜ್ಞಾನವೂ ಹೆಚ್ಚು ಶ್ರಮ ಬೇಡುತ್ತದೆ. ಪರಿಶ್ರಮದಿಂದ ಸಾಧನೆ ಸಾಧ್ಯ ಎಂದರು.

ಜೈವಿಕ ವಿಜ್ಞಾನದಲ್ಲಿ ಹೆಚ್ಚು ವಿಭಾಗಗಳು ಬಂದು ನಾಗರಿಕತೆಗೆ ಅನುಕೂಲ ಮಾಡಿಕೊಡುತ್ತಿವೆ. ಯುವಜನಾಂಗ ಇದಕ್ಕೆ ಹೆಚ್ಚು ತೆರೆದುಕೊಳ್ಳಬೇಕು. ಸಾಧನೆ ಮೂಲಕ ಹೊಸ ಸಂಶೋಧನೆಗೆ ನಾಂದಿ ಹಾಡಬೇಕು ಎಂದು ಆಶಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಬಿ.ಎಸ್‌. ನಾಗರತ್ನಮ್ಮ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಗಾಯತ್ರಿ ದೇವರಾಜ, ಮೈಸೂರು ಸಿಎಸ್ಐಆರ್‌ನ ಹಿರಿಯ ವಿಜ್ಞಾನಿ ಡಾ.ಇಬೊಯೆಮಾ ಸಿಂಗ್‌ ಉಪನ್ಯಾಸ ನೀಡಿದರು.

ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ವನಜಾ ಆರ್., ಡಾ. ಟಿ. ವಸಂತ್‌ ನಾಯ್ಕ್‌, ಬಿ.ಜಿ. ಸಿದ್ದೇಶ್‌, ಸುಜಯಕುಮಾರಿ ಡಿ.ಬಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT