ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನ ಪೂರೈಸಿದ ಶಾಲೆಗೆ ಕಾಯಕಲ್ಪ

ಎಸ್‌ಡಿಎಂಸಿಗೆ ಗುಣಮಟ್ಟದ ಕಾಮಗಾರಿ ಅನುಷ್ಠಾನದ ಜವಾಬ್ದಾರಿ
Last Updated 19 ಜೂನ್ 2021, 3:11 IST
ಅಕ್ಷರ ಗಾತ್ರ

ತ್ಯಾವಣಿಗೆ: ಸಮೀಪದ ಬೆಳಲಗರೆ ಗ್ರಾಮದಲ್ಲಿ ಶತಮಾನ ಪೂರೈಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಗುಣಮಟ್ಟದ ಕಾಮಗಾರಿಯ ಕಾರಣ ಜಿಲ್ಲೆಯಲ್ಲಿಯೇ ಮಾದರಿ ಶಾಲೆಯಾಗಿ ರೂಪುಗೊಳ್ಳಲಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಶಾಲೆಯ 100ನೇ ವರ್ಷ ಕಾಲಿಟ್ಟ 2018ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ವಿ. ಪಟೇಲ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಶಿಥಿಲಗೊಂಡಿರುವ ಶಾಲೆಯ ಕಟ್ಟಡವನ್ನು ನೆಲಸಮ ಮಾಡಿ ನೂತನ ಕಟ್ಟಡ ನಿರ್ಮಿಸಲು ₹ 1 ಕೋಟಿ ಅನುದಾನ ನೀಡಬೇಕು ಎಂದು ಕೋರಿದ್ದರು. ಕಟ್ಟಡದ ಗುಣಮಟ್ಟ ಕಾಮಗಾರಿ ಅನುಷ್ಠಾನದ ಜವಬ್ದಾರಿಯನ್ನು ಶಾಲಾಭಿವೃದ್ಧಿ ಸಮಿತಿ (ಎಸ್‌ಡಿಎಂಸಿ)ಗೆ ವಹಿಸಬೇಕು ಎಂದೂ ಕೋರಿದ್ದರು.

‘ಸತತ ಪ್ರಯತ್ನದ ಫಲವಾಗಿ ಅನುದಾನವೂ ಬಿಡುಗಡೆಯಾಯಿತು. ಆದರೆ, ಟೆಂಡರ್‌ ಮೂಲಕ ಕಟ್ಟಡ ಕಾಮಗಾರಿ ನಡೆಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರು ಆದೇಶ ನೀಡಿದ್ದರು. ಇದಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ತೇಜಸ್ವಿ ಪಟೇಲ್‌ ಅವರು ಮಾದರಿ ಕಟ್ಟಡ ನಿರ್ಮಿಸುವ ಯೋಜನೆಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಮನವರಿಕೆ ಮಾಡಿಕೊಟ್ಟರು. ಎಸ್‌ಡಿಎಂಸಿ ವತಿಯಿಂದಲೇ ಕಾಮಗಾರಿ ಅನುಷ್ಠಾನಗೊಳಿಸುವ ಆದೇಶ ಪಡೆಯವಲ್ಲಿ ಯಶಸ್ವಿಯಾಗಿದ್ದರು’ ಎಂದು ಗ್ರಾಮದ ಎನ್. ಎಸ್. ರುದ್ರೇಶ್ ತಿಳಿಸಿದರು.

‘ಕೋವಿಡ್‌ ನಡುವೆಯೇ ಶಾಲಾ ಕಟ್ಟಡದ ಕಾಮಗಾರಿ ಭರದಿಂದ ಸಾಗಿದೆ. ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕಚ್ಚಾವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದ್ದರೂ ಕಾಮಗಾರಿ ಮುಂದುವರಿದಿದೆ. ಪಿಆರ್‌ಡಿ ಎಂಜಿನಿಯರ್ ಅಶೋಕ್ ಮತ್ತು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಅನುಭವಿ ನಾರಾಯಣಪ್ಪ ಅವರ ಉಪಸ್ಥಿತಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿದೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸ್ಮಾರ್ಟ್ ಕ್ಲಾಸ್‌ ನಿರ್ಮಾಣ, ಶಾಲೆಯ ವಿವಿಧ ಅಂತಸ್ತುಗಳಲ್ಲಿ ವಿದ್ಯತ್‌ ಸಂಪರ್ಕ ಅಳವಡಿಕೆಯ ಜವಾಬ್ದಾರಿಯನ್ನು ಮರಬನಹಳ್ಳಿಯ ಎಲೆಕ್ಟ್ರಾನಿಕ್ ಎಂಜಿನಿಯರ್ ರವಿ ಅವರಿಗೆ ನೀಡಲಾಗಿದೆ. ಶಾಲೆಯ ಶಿಕ್ಷಕರು ಕಾಮಗಾರಿಗೆ ಬಳಸುವ ಸಾಮಗ್ರಿಗಳನ್ನು ಪರಿಶೀಲಿಸುತ್ತಾರೆ. ಒಬ್ಬೊಬ್ಬರು ಒಂದೊಂದು ಜವಾಬ್ದಾರಿ ವಹಿಸುವ ಮೂಲಕ ಒಂದು ತಂಡವಾಗಿ ಮಾದರಿ ಕಟ್ಟಡ ನಿರ್ಮಾಣ ಮಾಡಲು ಕಂಕಣಬದ್ಧರಾಗಿ ಶ್ರಮಿಸುತ್ತಿದ್ದಾರೆ’ ಎಂದು ಹಾಲೇಶಪ್ಪ, ಬಿ.ಎಂ. ಹರ್ಷ ಸಂತಸ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿಯೇ ಮಾದರಿ ಶಾಲೆಯಾಗಿ ನಿರ್ಮಾಣ ಮಾಡುವಲ್ಲಿ ಎಸ್‌ಡಿಎಂಸಿ ಶ್ರಮ ವಹಿಸುತ್ತಿದ್ದು, ವಿಷಯವಾರು ಸ್ಮಾರ್ಟ್ ಕ್ಲಾಸ್ ನಿರ್ಮಾಣಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಸರ್ಕಾರ ಈ ಬಗ್ಗೆ ಕಾಳಜಿ ವಹಿಸಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ಶಾಲೆ ಕಾಮಗಾರಿ ಪೂರ್ಣವಾಗಲು ಸಹಕರಿಸಬೇಕು’ ಎಂದು ಪೋಷಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT