ಮಂಗಳವಾರ, ಸೆಪ್ಟೆಂಬರ್ 28, 2021
24 °C
ಹೊದಿಗೆರೆ ಗ್ರಾಮದ ಶಾಲೆ; ಹಳೆಯ ವಿದ್ಯಾರ್ಥಿಗಳಿಂದ ಕಾಯಕಲ್ಪ

ಚನ್ನಗಿರಿ: ಮಧುಕೇಶ್ವರ ಪ್ರೌಢಶಾಲೆಗೆ ಹೊಸ ಮೆರುಗು

ಎಚ್.ವಿ. ನಟರಾಜ್ Updated:

ಅಕ್ಷರ ಗಾತ್ರ : | |

Prajavani

ಹೊದಿಗೆರೆ (ಚನ್ನಗಿರಿ): ತಾಲ್ಲೂಕಿನ ಕಸಬಾ ಹೋಬಳಿಯ ಹೊದಿಗೆರೆ ಗ್ರಾಮದ ಮಧುಕೇಶ್ವರ ಪ್ರೌಢಶಾಲೆಗೆ ಹಳೆಯ ವಿದ್ಯಾರ್ಥಿಗಳು ಕಾಯಕಲ್ಪ ನೀಡುವ ಮೂಲಕ ಹೊಸ ಮೆರುಗು ನೀಡಿದ್ದಾರೆ.

ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಗ್ರಾಮಸ್ಥರು ಸೇರಿ 1963ರಲ್ಲಿ ಮಧುಕೇಶ್ವರ ಪ್ರೌಢಶಾಲೆಯನ್ನು ಪ್ರಾರಂಭಿಸಿದ್ದರು. ನಂತರದಲ್ಲಿ ಈ ಶಾಲೆಯನ್ನು ಸಿರಿಗೆರೆಯ ತರಳುಬಾಳು ಜಗದ್ಗುರು ವಿದ್ಯಾಸಂಸ್ಥೆಗೆ ವಹಿಸಲಾಗಿತ್ತು. ಶಾಲೆಯು 58 ವರ್ಷಗಳನ್ನು ಪೂರೈಸಿದೆ.

4.2 ಗುಂಟೆ ಶಾಲಾ ವಿಸ್ತೀರ್ಣ ಇದ್ದು, ಆಟದ ಮೈದಾನ 3.19 ಗುಂಟೆ ಇದೆ. ಈ ಶಾಲೆ ಆರಂಭಿಸಲು ಅಂದಿನ ಕಾಲದಲ್ಲಿ ದೊಡ್ಡ ಈಶ್ವರಪ್ಪ, ಶೆಟ್ಟರ್ ಚನ್ನಬಸಪ್ಪ ಹಾಗೂ ತಿಮ್ಮರಾಜ್ ಶಾನುಭೋಗ ಅವರು ಜಮೀನು ನೀಡಿದ್ದರು. ಅದರ ಫಲವಾಗಿ ಶಾಲೆಯು ಇಂದು ಹೆಮ್ಮರವಾಗಿ ಬೆಳೆದಿದೆ. ಪ್ರಸ್ತುತ 10 ಕೊಠಡಿಗಳಿದ್ದು, 1 ರಂಗ ಮಂದಿರ, 1 ಹೈಟೆಕ್ ಬಿಸಿಯೂಟ ಕೇಂದ್ರ ಹಾಗೂ ಬಾಲಕ, ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯಗಳನ್ನು ಗ್ರಾಮದ ದಾನಿಗಳಿಂದ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ. ಹೊದಿಗೆರೆ, ಬೆಂಕಿಕೆರೆ, ಮಾದಾಪುರ, ಹೆಬ್ಬಳಗೆರೆ, ಶೆಟ್ಟಿಹಳ್ಳಿ, ಯರಗಟ್ಟಿಹಳ್ಳಿ ಹಾಗೂ ರಾಮೇನಹಳ್ಳಿ ಗ್ರಾಮಗಳ ವಿದ್ಯಾರ್ಥಿಗಳಿಗೆ ಈ ಪ್ರೌಢಶಾಲೆಯೇ ವಿದ್ಯಾಭ್ಯಾಸಕ್ಕೆ ಆಧಾರವಾಗಿದೆ.

ಸ್ವಲ್ಪ ವರ್ಷಗಳ ಕಾಲ ಶಾಲೆಯು ನಿರ್ವಹಣೆ ಕೊರತೆಯಿಂದ ಬಳಲುತ್ತಿತ್ತು. ಈ ಪ್ರೌಢಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ತಾವು ಓದಿದ ಶಾಲೆಗೆ ಏನಾದರೂ ಸೇವೆಯನ್ನು ಒದಗಿಸಬೇಕು ಎಂದು ಸಭೆಯನ್ನು ನಡೆಸಿ ಕಾಯಕಲ್ಪ ನೀಡಲು ಮುಂದಾದರು. ಹಳೆಯ ವಿದ್ಯಾರ್ಥಿಗಳಾದ ಚಿತ್ರಲಿಂಗಪ್ಪ, ಸಿ.ಕೆ. ಸರ್ವೇಶ್, ಪ್ರಕಾಶ್, ಯೋಗರಾಜ್, ಲೋಕಪ್ರಕಾಶ್, ಕೋಮಲ ಹಾಗೂ ಪಾಟೀಲ್ ಅವರು ಸೇರಿ ದೇಣಿಗೆಯನ್ನು ಸಂಗ್ರಹಿಸಿ ಕಾಯಕಲ್ಪ ನೀಡಿದ್ದರ ಫಲವಾಗಿ ಇಂದು ಶಾಲೆಯು ಸುಣ್ಣ ಬಣ್ಣವನ್ನು ಹೊಂದಿ ಕಂಗೊಳಿಸುತ್ತಿದೆ.

ಹಳೆಯ ವಿದ್ಯಾರ್ಥಿಗಳು ಒಂದುಗೂಡಿ ಶಾಲೆಗೆ ಹೊಸ ಡಾಂಬರ್‌ ರಸ್ತೆ, ಕೊಠಡಿಗಳಿಗೆ ಸುಣ್ಣ ಬಣ್ಣ, ಗೇಟ್ ಸೇರಿ ಒಟ್ಟು ₹ 3.70 ಲಕ್ಷ ವೆಚ್ಚದಲ್ಲಿ ನವರೂಪ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಹಾಗೆಯೇ ಪರಿಸರ ಕಾಳಜಿಯೊಂದಿಗೆ ಶಾಲೆಯ ಆವರಣದ ಸುತ್ತಲೂ ಸಸಿಗಳನ್ನು ನೆಟ್ಟಿದ್ದಾರೆ. ಹಳೆಯ ವಿದ್ಯಾರ್ಥಿಗಳ ಸೇವಾ ಮನೋಭಾವ ಮೆಚ್ಚಿ ಸಿರಿಗೆರೆ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಅಭಿನಂದನಾ ಪತ್ರ ಬರೆದಿದ್ದಾರೆ. ಹಳೆಯ ವಿದ್ಯಾರ್ಥಿಗಳ ಕೆಲಸ ತಾಲ್ಲೂಕಿನಾದ್ಯಂತ ಮನೆಮಾತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.