ಶುಕ್ರವಾರ, ಜನವರಿ 27, 2023
18 °C
ಜಗಳೂರು ತಾಲ್ಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ

ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಜಗಳೂರು: ತಾಲ್ಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಾಂಪೌಂಡ್ ಕಾಮಗಾರಿ ಕೈಗೊಳ್ಳದೆ ಹಣ ಬಿಡುಗಡೆ ಮಾಡಿಕೊಂಡಿರುವ ನಿರ್ಮಿತಿ ಕೇಂದ್ರದ ವಿರುದ್ಧ ಜಿಲ್ಲಾ ಪಂಚಾಯಿತಿ ಸಿಇಒ ಎ. ಚನ್ನಪ್ಪ ಅವರು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಶಾಲೆಯ ಕಾಂಪೌಂಡ್ ನಿರ್ಮಾಣಕ್ಕೆ ತಾಲ್ಲೂಕು ಪಂಚಾಯಿತಿಯ ಅನಿರ್ಬಂಧಿತ ಅನುದಾನದಲ್ಲಿ ₹17 ಲಕ್ಷವನ್ನು ಮಾರ್ಚ್ 2022ರಲ್ಲಿ ಅನುದಾನ ಬಿಡುಗಡೆ ಮಾಡಿದ್ದು, 10 ತಿಂಗಳದಾರೂ ಕಾಂಪೌಂಡ್ ನಿರ್ಮಿಸದೆ ಹಣವನ್ನು ಬಳಸಿಕೊಂಡಿರುವ ನಿರ್ಮಿತಿ ಕೇಂದ್ರದ ಹಣ ದುರುಪಯೋಗ ಆರೋಪದ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಜನವರಿ 5ರಂದು ವಿಶೇಷ ವರದಿ ಪ್ರಕಟವಾಗಿತ್ತು.

ವರದಿ ಹಿನ್ನೆಲೆಯಲ್ಲಿ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ  ₹17 ಲಕ್ಷ ಅನುದಾನ ಬಳಕೆಯ ಬಗ್ಗೆ ಸಮಗ್ರವಾದ ವರದಿ ನೀಡುವಂತೆ ಚನ್ನಪ್ಪ ನೋಟಿಸ್ ಜಾರಿ ಮಾಡಿದ್ದಾರೆ.

‘ಶಾಲೆಯ ಕಾಂಪೌಂಡ್ ನಿರ್ಮಿಸದೆ ಹಣವನ್ನು ಬಳಸಿಕೊಂಡಿರುವ ಕುರಿತು “ಪ್ರಜಾವಾಣಿ” ಪತ್ರಿಕೆಯ ವರದಿ ಹಿನ್ನೆಲೆಯಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರವಿಕುಮಾರ್ ಅವರನ್ನು ಜಿಲ್ಲಾ ಪಂಚಾಯಿತಿ ಕಚೇರಿಗೆ ಕರೆಯಿಸಿಕೊಂಡು  ವರದಿಯನ್ನು ತೋರಿಸಿ ಈ ಬಗ್ಗೆ ಕೂಡಲೇ ಸ್ಪಷ್ಟನೆ ಮತ್ತು ಸಮಗ್ರ ವರದಿ ನೀಡುವಂತೆ ಸೂಚಿಸಿದ್ದೇನೆ. ಅನುದಾನ ಬಿಡುಗಡೆ ಮಾಡಿರುವ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೂ ವರದಿ ಕೇಳಿದ್ದೇನೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಚನ್ನಪ್ಪ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಅವರ ಸೂಚನೆಯ ಮೇರೆಗೆ ನಿರ್ಮಿತಿ ಕೇಂದ್ರದ ಎಂಜಿನಿಯರ್ ಚಂದ್ರಶೇಖರ್ ಅವರು ಹನುಮಂತಾಪುರ ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಶಾಲೆಗೆ ಶನಿವಾರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಎಂಜಿನಿಯರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

‘ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಕಾಮಗಾರಿ ಕೈಗೊಳ್ಳಲು ವಿಳಂಬವಾಗಿದೆ. ಸೋಮವಾರದಿಂದಲೇ ಕಾಂಪೌಂಡ್ ಕಾಮಗಾರಿ ಪ್ರಕ್ರಿಯೆ ಆರಂಭಿಸಲಾಗುವುದು. ಗ್ರಾಮಸ್ಥರ ಅಭಿಪ್ರಾಯದಂತೆ ಶಾಲಾ ಕಾಂಪೌಂಡ್ ನಿರ್ಮಿಸಲಾಗುವುದು ಎಂದು ನಿರ್ಮಿತಿ ಕೇಂದ್ರದ ಎಂಜನಿಯರ್ ಚಂದ್ರಶೇಖರ್ ಭರವಸೆ ನೀಡಿದ್ದಾರೆ’ ಎಂದು ಗ್ರಾಮದ ಮುಖಂಡ ಚಿತ್ತಪ್ಪ ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಎನ್. ರಂಗಪ್ಪ, ಬಿಸ್ತುವಳ್ಳಿ ಬಾಬು, ಗೌಡ್ರು ರಂಗಪ್ಪ ಸೇರಿದಂತೆ ಹಲವರು ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.