ಬುಧವಾರ, ಸೆಪ್ಟೆಂಬರ್ 22, 2021
23 °C

ಮರುಕಳಿಸಿದ ಚಿರತೆ ಭಯ: ಗ್ರಾಮಸ್ಥರು ಕಂಗಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ: ತಾಲ್ಲೂಕಿನ ಚಿಕ್ಕಬಿದರಿ ಗ್ರಾಮದಲ್ಲಿ ತಿಂಗಳ ಆರಂಭದಲ್ಲಿ ಎರಡು ಕುರಿ ಮರಿಗಳನ್ನು ಬಲಿ ಪಡೆದಿದ್ದ ಚಿರತೆ, ಇದೀಗ ಶುಕ್ರವಾರ ಮುಂಜಾನೆ ಮತ್ತೆ ಪ್ರತ್ಯಕ್ಷವಾಗಿ ಎಮ್ಮೆ ಕರುವಿನ ಮೇಲೆ ದಾಳಿ ನಡೆಸಿದೆ.

ಗ್ರಾಮದ ಹೊರವಲಯದ ಕ್ಯಾಂಪ್‍ನಲ್ಲಿರುವ ಅನಸೂಯಮ್ಮ ಬ್ಯಾಡಗಿ ಅವರ ಮನೆ ಮುಂದೆ ಕಟ್ಟಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿದೆ. ಇತರೆ ದನಕರುಗಳ ಆರ್ಭಟ ಕೇಳಿ ಮನೆ ಮಂದಿ ಎದ್ದಿದ್ದಾರೆ. ಮನೆ ಹೊರಗಿನ ಲೈಟ್ ಹಾಕಿ, ಕೇಕೆ ಹಾಕಿ ಸದ್ದು ಮಾಡಿದ್ದರಿಂದ ಚಿರತೆ ಕರುವನ್ನು ಬಿಟ್ಟು ಕತ್ತಲಲ್ಲಿ ಪರಾರಿಯಾಗಿದೆ. ಘಟನೆಯಲ್ಲಿ ಕರುವಿನ ಕುತ್ತಿಗೆಗೆ ಗಾಯವಾಗಿದೆ. ಸಾರಥಿ ಪಶು ವೈದ್ಯರು ಬಂದು ಚಿಕಿತ್ಸೆ ನೀಡಿದ್ದಾರೆ. ನೋವಿನಿಂದಾಗಿ ಕರು ಮೇವು, ನೀರು ಸೇವಿಸುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ಹಿಂದೆ ಚಿರತೆ ಕುರಿಯೊಂದನ್ನು ಬಲಿ ಪಡೆದಾಗ ಅರಣ್ಯ ಇಲಾಖೆಯವರು ಸಮೀಪದ ತೋಟವೊಂದರಲ್ಲಿ ಪಂಜರವನ್ನು ಅಳವಡಿಸಿದ್ದರು. ಈ ವರೆಗೆ ಚಿರತೆ ಪಂಜರದ ಬಳಿ ಸುಳಿದಿರಲಿಲ್ಲ. ಪಂಜರ ಇಟ್ಟು ಹೋಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಬೇರೆ ತಂತ್ರಗಳನ್ನು ರೂಪಿಸಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಾರಥಿ ಸಮೀಪದ ಹಳ್ಳದ ಸೇತುವೆ ಕಾಮಗಾರಿ ಹಾಗೂ ನದಿ ಪ್ರವಾಹದಿಂದಾಗಿ ಚಿಕ್ಕಬಿದರಿ ಜನರು, ರೈತರು ಹರಿಹರದ ಕಡೆ ಬಂದು ಹೋಗಲು, ಹೊಲ, ಗದ್ದೆ, ತೋಟಗಳಿಗೆ ಸಂಚರಿಸಲು ದೂರದ ದುಗ್ಗಾವತ್ತಿ ರಸ್ತೆ ಬಳಸುತ್ತಿದ್ದಾರೆ.ಆ ಭಾಗದಲ್ಲಿ ಬಯಲು, ಕಬ್ಬಿನ ಗದ್ದೆ ಭಾಗ ಇರುವುದರಿಂದ ಜನರು ಅಲ್ಲಿಂದ ಒಬ್ಬಂಟಿಯಾಗಿ ಸಂಚರಿಸಲು ಭಯ ಪಡುತ್ತಿದ್ದಾರೆ. ಗುಂಪಾಗಿ, ಹೋಗಿ ಬರುತ್ತಿದ್ದಾರೆ. ಹೊತ್ತು ಮುಳುಗುವ ಮುನ್ನ ಗ್ರಾಮಕ್ಕೆ ಸೇರುತ್ತಿದ್ದಾರೆ. ಒಬ್ಬರೆ ಬೈಕ್, ಸೈಕಲ್‍ನಲ್ಲಿ ಸಂಚರಿಸುತ್ತಿಲ್ಲ. ಮಕ್ಕಳು ಮನೆ ಹೊರಕ್ಕೆ ಅಂಗಳದಲ್ಲಿ ಆಟವಾಡಲು ಅಂಜುತ್ತಿದ್ದಾರೆ.

ಉಪವಲಯ ಅರಣ್ಯಾಧಿಕಾರಿ ಚಂದ್ರಶೇಖರ್‍ ಮಾತನಾಡಿ, ‘ಚಿರತೆಯು ಗ್ರಾಮದಲ್ಲಿ ಕಾಣಿಸಿಕೊಂಡಿರುವ ಬಗ್ಗೆ ನಿಖರ ಮಾಹಿತಿ ಇಲ್ಲ. ಗ್ರಾಮಸ್ಥರು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಸಿಬ್ಬಂದಿ ನಿಯೋಜಿಸಲಾಗಿದೆ. ಪಂಜರ ಅಳವಡಿಸುವ ಬಗ್ಗೆ ಭಾನುವಾರ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಅರಣ್ಯ ರಕ್ಷಕ ವೆಂಕಟೇಶ ನಾಯಕ್‍, ಅರಣ್ಯ ವೀಕ್ಷಕ ಸುರೇಶ್ ಗ್ರಾಮದಲ್ಲಿ ಮಾಹಿತಿ ಸಂಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.