ಶನಿವಾರ, ಸೆಪ್ಟೆಂಬರ್ 18, 2021
21 °C
₹ 90 ಲಕ್ಷ ವೆಚ್ಚದ ಆಮ್ಲಜನಕ ಉತ್ಪಾದನಾ ಘಟಕಕ್ಕೆ ಚಾಲನೆ

ಮಳೆಹಾನಿ: ಮರು ಸಮೀಕ್ಷೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಹೊನ್ನಾಳಿ: ಇತ್ತೀಚೆಗೆ ಸುರಿದ ಮಳೆಯಿಂದ ಬೆಳೆಹಾನಿ ಹಾಗೂ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು  ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಿಸಿರುವ ₹ 90 ಲಕ್ಷ ವೆಚ್ಚದ ಆಮ್ಲಜನಕ ಉತ್ಪಾದನಾ ಘಟಕ, ₹ 34 ಲಕ್ಷ ವೆಚ್ಚದ 2 ಆಂಬುಲೆನ್ಸ್ ಮತ್ತು ₹ 33 ಲಕ್ಷ ವೆಚ್ಚದ ಒಂದು ಅಡ್ವಾನ್ಸ್ಡ್‌ ಆಂಬುಲೆನ್ಸ್‌ಗೆ ಚಾಲನೆ ನೀಡಿದ ಬಳಿಕ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಬೆಳೆ ಸಮೀಕ್ಷೆ ಹಾಗೂ ಮನೆಹಾನಿ ಕುರಿತು ಈಗಾಗಲೇ ಮಾಡಿರುವ ಸಮೀಕ್ಷೆ ಬಗ್ಗೆ ಸಂತ್ರಸ್ತರಿಂದ ಸಾಕಷ್ಟು ದೂರುಗಳಿದ್ದು, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ನನ್ನ ಗಮನಕ್ಕೆ ತಂದಿದ್ದಾರೆ. ಆದ್ದರಿಂದ ಕೂಡಲೇ ಮತ್ತೊಮ್ಮೆ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಬೇಕು’ ಎಂದು ತಾಕೀತು ಮಾಡಿದರು.

ಕೋವಿಡ್ ಮೂರನೇ ಅಲೆ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಒಂದೂವರೆ ಕೋಟಿ ಲಸಿಕೆ ನೀಡುವಂತೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ‘ಕೋವಿಡ್ 3ನೇ ಅಲೆ ತಡೆಯಲು ಜಿಲ್ಲಾಡಳಿತ ಸಿದ್ಧವಾಗಿರಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ’ ಎಂದು ಜಿಲ್ಲಾಧಿ
ಕಾರಿಗೆ ತಿಳಿಸಿದರು.

ಶಾಸಕ ಎಂ.ಪಿ. ರೇಣುಕಾಚಾರ್ಯ, ‘ತಾಲ್ಲೂಕಿನಲ್ಲಿ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಹಾಗೂ ಸಣ್ಣ ನೀರಾವರಿ ಇಲಾಖೆಗಳು ಜಂಟಿ ಸಮೀಕ್ಷೆಯನ್ನು ಸರಿಯಾಗಿ ಮಾಡಿಲ್ಲ. ಒಬ್ಬರ ಗೈರಿನಲ್ಲಿ ಮತ್ತೊಬ್ಬರು ಸಮೀಕ್ಷೆ ಮಾಡಿದ್ದೀರಿ. ಈ ಬಗ್ಗೆ ಆಯಾ ಭಾಗದ ರೈತರೇ ನನಗೆ ಮಾಹಿತಿ ನೀಡಿದ್ದಾರೆ. ಮನೆ ಹಾನಿ ಕುರಿತು ಒಂದು ಗೋಡೆಯ ಅರ್ಧದಷ್ಟನ್ನು ಲೆಕ್ಕಕ್ಕೆ ತೆಗೆದುಕೊಂಡು ವರದಿ ನೀಡಬಾರದು. ಇಡೀ ಗೋಡೆಯನ್ನು ಕುರಿತು ಲೆಕ್ಕ ಹಾಕಿ ವರದಿ ನೀಡಬೇಕು’ ಎಂದು ಸೂಚಿಸಿದರು.

ಆಮ್ಲಜನಕ ಉತ್ಪಾದನಾ ಘಟಕ ಉದ್ಘಾಟನೆ: ಕೆಆರ್‌ಡಿಎಲ್ ಅಧ್ಯಕ್ಷ ರುದ್ರೇಶ್ ಅವರು ನೀಡಿದ ₹ 90 ಲಕ್ಷ ವೆಚ್ಚದಲ್ಲಿ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣ ಮಾಡಲಾಗಿದೆ. ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ ಅವರು ₹ 50 ಲಕ್ಷ ವೆಚ್ಚದ ಅಡ್ವಾನ್ಸ್ಡ್‌ ಆಂಬುಲೆನ್ಸ್‌ಗಳನ್ನು ನೀಡಿದ್ದಾರೆ. ಶಾಸಕರ ನಿಧಿಯಲ್ಲಿ ₹ 34 ಲಕ್ಷ ವೆಚ್ಚದಲ್ಲಿ ಎರಡು ಆಂಬುಲೆನ್ಸ್‌ಗಳನ್ನು ನೀಡಲಾಗಿದೆ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದರು.

‘ಅವಳಿ ತಾಲ್ಲೂಕಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಲಸಿಕೆ ನೀಡಲಾಗಿದೆ. ಪ್ರತಿ ಹಳ್ಳಿಗಳಿಗೂ ತೆರಳಿ ಲಸಿಕೆ ನೀಡಲಾಗಿದೆ ಅಧಿಕಾರಿಗಳು ನನ್ನ ಜೊತೆಗೆ ಹೆಜ್ಜೆ ಹಾಕಬೇಕು. ಇಲ್ಲದಿದ್ದರೆ ನಾನು ಸಹಿಸಲ್ಲ. ನಿಮಗೆ ಕೆಲಸ ಮಾಡಲು ಇಷ್ಟವಿದ್ದರೆ ನನ್ನ ಜೊತೆ ಇರಿ. ಇಲ್ಲದಿದ್ದರೆ ನಿಮ್ಮ ಜಾಗ ನೋಡಿಕೊಳ್ಳಿ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಸಿಇಒ ವಿಜಯ ಮಹಾಂತೇಶ್‌ ದಾನಮ್ಮನವರ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಶೀಲ್ದಾರ್ ಬಸವನಗೌಡ ಕೋಟೂರ, ತನುಜಾ ಟಿ. ಸವದತ್ತಿ, ತಾಲ್ಲೂಕು ಪಂಚಾಯಿತಿ ಇಒ ರಾಮಭೋವಿ, ಪುರಸಭೆ ಮುಖ್ಯಾಧಿಕಾರಿ ಪಂಪಾಪತಿನಾಯ್ಕ್ ಸೇರಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು