ಶುಕ್ರವಾರ, ಮೇ 27, 2022
23 °C
ಮಾರುಕಟ್ಟೆಯಲ್ಲಿ ಬೆಲೆ ಕುಸಿತ

ಗಿಡದಲ್ಲೇ ಕೊಳೆಯುತ್ತಿದೆ ಟೊಮೆಟೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಗಳೂರು: ಮಾರುಕಟ್ಟೆಯಲ್ಲಿ ತೀವ್ರ ಬೆಲೆ ಕುಸಿತದಿಂದಾಗಿ ತಾಲ್ಲೂಕಿನಲ್ಲಿ ಟೊಮೆಟೊ ಬೆಳೆಗಾಗರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೊಳವೆಬಾವಿ ಆಧಾರಿತ ನೀರಾವರಿಯಲ್ಲಿ ಬೇಸಿಗೆಯ ಹಂಗಾಮಿನಲ್ಲಿ ತಾಲ್ಲೂಕಿನ ರೈತರು ಟೊಮೆಟೊ ಬೆಳೆದಿದ್ದು, ಬೆಲೆ ಪಾತಾಳಕ್ಕೆ ಕುಸಿದ ಹಿನ್ನೆಲೆಯಲ್ಲಿ ತೀವ್ರ ನಷ್ಟ ಅನುಭವಿಸುವಂತಾಗಿದೆ.

ತಾಲ್ಲೂಕಿನಲ್ಲಿ 300 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗಿದೆ. ಎಲ್ಲೆಡೆ ಅತ್ಯುತ್ತಮ
ಇಳುವರಿ ಬಂದಿದೆ. ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು, ಇದೀಗ ಕುಸಿದಿದೆ. ಪ್ರತಿ 20 ಕೆ.ಜಿ. ಟ್ರೇಗೆ ಕೇವಲ ₹ 25ರಿಂದ ₹ 30ರವರೆಗೆ ದರ ಇದೆ. ದುಬಾರಿ ಬೆಲೆಯ ಸಸಿ ಖರೀದಿ, ಗೊಬ್ಬರ ಹಾಗೂ ವ್ಯವಸಾಯದ ಖರ್ಚು ಸೇರಿ ಸಾವಿರಾರು ರೂಪಾಯಿ ಖರ್ಚು ಮಾಡಿ ತಿಂಗಳುಗಟ್ಟಲೆ ಹೊಲಕ್ಕೆ ನೀರು ಹಾಯಿಸಿ ಶ್ರಮಪಟ್ಟಿರುವ ರೈತರು ಬೆಲೆ ಕುಸಿತದಿಂದ ಸಾಲದ ಸುಳಿಗೆ ಸಿಲುಕುವಂತಾಗಿದೆ.

‘ಮಾರುಕಟ್ಟೆಯಲ್ಲಿ ಇಡೀ ದಿನ ಕಾದು ಕುಳಿತರೂ ಖರೀದಿದಾರರೇ ಬರುವುದಿಲ್ಲ. 3 ತಿಂಗಳು ಹಗಲು ರಾತ್ರಿ ಎನ್ನದೆ ನೀರು, ಗೊಬ್ಬರ ಹಾಕಿ ಕಷ್ಟಪಟ್ಟು ಟೊಮೆಟೊ ಬೆಳೆದರೂ ಪ್ರಯೋಜವಿಲ್ಲದಂತಾಗಿದೆ’ ಎಂದು ತಾಲ್ಲೂಕಿನ ಹನುಮಂತಾಪುರ ಗ್ರಾಮದ ಅಜಯ್ ಅಳಲು ತೋಡಿಕೊಂಡರು.

‘ಪ್ರತಿ ಸಸಿಗೆ 50 ಪೈಸೆಯಂತೆ 25 ಸಾವಿರ ಸಸಿ ಖರೀದಿಸಿ ತಂದು ನಂತರ ವಿವಿಧ ಹಂತಗಳಲ್ಲಿ ಗೊಬ್ಬರ, ಔಷಧ ಹಾಗೂ ಬೇಸಾಯಕ್ಕಾಗಿ ₹ 1 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದೇನೆ. ಆದರೆ, ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 10ರಿಂದ ₹ 20 ಇದ್ದ ಟೊಮೆಟೊ ದರ ಏಕಾಏಕಿ ಕುಸಿದಿದೆ. ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುವ ವೆಚ್ಚವೂ ಮೈಮೇಲೆ ಬರುವುದರಿಂದ ಎರಡು ಎಕರೆಯಲ್ಲಿ ಬೆಳೆದಿರುವ ಬೆಳೆಯನ್ನು ಕಟಾವು ಮಾಡದೆ, ಗಿಡಗಳಲ್ಲೇ ಬಿಟ್ಟಿದ್ದೇನೆ. ಅದರ ಮೇಲೆ ನೇಗಿಲು ಹೊಡೆಸುತ್ತಿದ್ದೇನೆ’ ಎಂದು ಅಜಯ್ ತಿಳಿಸಿದರು.

‘ತಾಲ್ಲೂಕಿನ ಹನುಮಂತಾಪುರ, ಭರಮಸಮುದ್ರ, ಕಸವನಹಳ್ಳಿ, ಚಿಕ್ಕಮಲ್ಲನಹೊಳೆ, ಸಿದ್ದಮ್ಮನಹಳ್ಳಿ ಸೇರಿ ತಾಲ್ಲೂಕಿನ 300 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಟೊಮೆಟೊ ಬೆಳೆದಿದ್ದಾರೆ. ಉತ್ತಮ ಇಳುವರಿ ಬಂದಿದ್ದು, ಬೆಲೆ ಕುಸಿದಿದೆ’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು