ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದಂಬರ ಕಾಲದ ದೇವಾಲಯದ ಅವಶೇಷಗಳ ಪತ್ತೆ

ನ್ಯಾಮತಿ ತಾಲ್ಲೂಕು ಬೆಳಗುತ್ತಿ ಸಮೀಪದ ಕುಳ್ಳಹಳ್ಳಿ
Last Updated 19 ಸೆಪ್ಟೆಂಬರ್ 2021, 5:07 IST
ಅಕ್ಷರ ಗಾತ್ರ

ಹೊನ್ನಾಳಿ: ನ್ಯಾಮತಿ ತಾಲ್ಲೂಕಿನ ಬೆಳಗುತ್ತಿ ಸಮೀಪದ ಕುಳ್ಳಹಳ್ಳಿ ಗ್ರಾಮದಲ್ಲಿ ಕದಂಬರ ಕಾಲದ ದೇವಾಲಯದ ಅವಶೇಷಗಳನ್ನು ಪತ್ತೆ ಮಾಡಿರುವುದಾಗಿ ನಗರದ ಶ್ರೀಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಪ್ರವೀಣ್ ದೊಡ್ಡಗೌಡ್ರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಕದಂಬರ ಕಾಲದ ಏಳು ಶಾಸನಗಳು ಪತ್ತೆಯಾಗಿವೆ. ಅದರಲ್ಲಿ ದಾವಣಗೆರೆ ತಾಲ್ಲೂಕಿನಲ್ಲಿ 3 ಶಾಸನಗಳು, ಹೊನ್ನಾಳಿ ತಾಲ್ಲೂಕಿನಲ್ಲಿ 3, ಹರಿಹರ ತಾಲ್ಲೂಕಿನಲ್ಲಿ 1 ಶಾಸನಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿತ್ತು. ಆದರೆ, ಇದೇ ಮೊದಲ ಬಾರಿಗೆ ಹೊನ್ನಾಳಿ–ನ್ಯಾಮತಿ ಅವಳಿ ತಾಲ್ಲೂಕಿನ ಕುಳ್ಳಹಳ್ಳಿ ಗ್ರಾಮದಲ್ಲಿ ದೇವಾಲಯದ ಅವಶೇಷಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದರು.

ಬೆಳಗುತ್ತಿಯಿಂದ ಹೊಸಕೊಪ್ಪಕ್ಕೆ ಹೋಗುವ ದಾರಿಯ ಎಡಭಾಗದಲ್ಲಿ ಕುಳ್ಳಹಳ್ಳಿ ಎಂದು ಕರೆಯುವ ಬೇಚಾರು ಗ್ರಾಮವಿದೆ. ಈ ಗ್ರಾಮದ ಕೆರೆಯ ಏರಿಯ ಮೇಲೆ ಸ್ಥಳೀಯ ಜನರು ಚಿನ್ನಿಕೋಲು ದಿಬ್ಬ ಎಂದು ಕರೆಯುವ ಪ್ರದೇಶವಿದೆ. ಈ ಪ್ರದೇಶವು ಕೆರೆಯಿಂದ ಸುಮಾರು 100 ಮೀ. ದೂರದಲ್ಲಿದೆ. ಈ ದಿಬ್ಬದ ಮೇಲ್ಭಾಗದಲ್ಲಿ ಕದಂಬರ ಕಾಲದ ದೇವಾಲಯದ ತಳಪಾಯದ ರಚನೆ ಕಂಡುಬರುತ್ತದೆ. ತಳಪಾಯವನ್ನು ಇಟ್ಟಿಗೆಯಿಂದ ನಿರ್ಮಾಣ ಮಾಡಲಾಗಿದೆ. ಇಟ್ಟಿಗೆಯ ತಳಪಾಯವು ಸಂಪೂರ್ಣವಾಗಿ ಆ ದಿಬ್ಬವನ್ನು ಆವರಿಸಿದೆ. ತಳಪಾಯವನ್ನು ಗಮನಿಸಿದರೆ ಈ ಕಟ್ಟಡವು ಕದಂಬರ ಕಾಲದ ದೇವಾಲಯ ಎಂದು ಗುರುತಿಸಬಹುದು. ಕಟ್ಟಡದ ರಚನೆಯು ಗರ್ಭಗೃಹ, ಅಂತರಾಳ ಹಾಗೂ ಗೂಢಮಂಟಪದ ಭಾಗಗಳನ್ನು ಒಳಗೊಂಡಂತೆ ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅವರು ವಿವರಿಸಿದರು.

ದೇವಾಲಯವನ್ನು ಪೂರ್ವಕ್ಕೆ ಮುಖ ಮಾಡಿ ನಿರ್ಮಾಣ ಮಾಡಲಾಗಿದೆ. ಇಟ್ಟಿಗೆಗಳಿಂದ ಕೂಡಿದ ಕಟ್ಟಡದ ರಚನೆಯು ದೇವಾಲಯವೆಂದು ವಾದಿಸಲು ಕಟ್ಟಡದ ಮೇಲ್ಭಾಗದಲ್ಲಿರುವ ಅವಶೇಷಗಳು ಸಹಕಾರಿಯಾಗಿವೆ. ಪ್ರಸ್ತುತ ಕಟ್ಟಡ ಇರುವ ಉತ್ತರ ದಿಕ್ಕಿನಲ್ಲಿ ಡಾಲರೈಟ್ ಶಿಲೆಯಿಂದ ಮಾಡಿದ ಸುಮಾರು 12 ಅಡಿ ಉದ್ದದ ಭಗ್ನಗೊಂಡ ದೀಪಸ್ತಂಭವಿದೆ. ಈ ದೀಪಸ್ತಂಭವು ಬನವಾಸಿ ಮಧುಕೇಶ್ವರ ದೇವಾಲಯದ ಮುಂಭಾಗದಲ್ಲಿರುವ ದೀಪಸ್ತಂಭವನ್ನು ಹೋಲುತ್ತದೆ. ಈ ದೀಪಸ್ತಂಭದ ಮೇಲೆ ಪಟ್ಟಿಕೆಗಳಿದ್ದು, ಕಂಬವು ಮೇಲಕ್ಕೆ ಹೋದಂತೆ ಕಿರಿದಾಗುತ್ತಾತ ಹೋಗಿದೆ. ಈ ಮಾದರಿಯ ರಚನೆಯು ಕ್ರಿ.ಶ. 4ನೇ ಶತಮಾನಕ್ಕೆ ಸೇರಿದ ಸ್ತಂಭದ ರಚನೆಯಂತೆ ಕಂಡುಬರುತ್ತದೆ. ಇಷ್ಟು ಉದ್ದವಾದ ಏಕಶಿಲಾ ಕಂಬವನ್ನು ಪ್ರಾಯಶಃ ಹೊರಗಿನಿಂದ ಈ ಪ್ರದೇಶಕ್ಕೆ ತರಲಾಗಿದೆ. ದೀಪಸ್ತಂಭದ ಬಲ ಭಾಗಕ್ಕೆ ಸುಮಾರು 10 ಅಡಿ ಉದ್ದದ ಮತ್ತೊಂದು ಕಂಬ ಕಂಡುಬರುತ್ತದೆ. ಈ ಕಂಬವು ದೇವಾಲಯದ ಒಳಾಂಗಣದಲ್ಲಿ ಬಳಸುವ ಕಂಬವಾಗಿದೆ. ಈ ಕಂಬದ ಕಾಂಡ ಭಾಗವು ಪ್ರಾರಂಭದಲ್ಲಿ ಚೌಕಾಕಾರವಾಗಿದ್ದು, ಮೇಲ್ಭಾಗದಲ್ಲಿ ಮೂರು ಪಟ್ಟಿಕೆಗಳ ರೂಪವನ್ನು ಪಡೆದಿದೆ. ಈ ಕಂಬದ ಮೇಲಿನ ಅಂಚಿನಲ್ಲಿ ಅರ್ಧ ಪದ್ಮದ ರಚನೆ ಕಂಡುಬರುತ್ತದೆ ಎಂದು ಇತಿಹಾಸ ತಜ್ಞ ಪ್ರೊ.ಶ್ರೀನಿವಾಸ ಪಾಡಿಗಾರ್ ಅವರು ಅಭಿಪ್ರಾಯಪಟ್ಟಿರುವುದಾಗಿ ದೊಡ್ಡಗೌಡ್ರು ಹೇಳಿದರು.

ದೇವಾಲಯದ ಬಲ ಬದಿಯಲ್ಲೇ ಐತಿಹಾಸಿಕ ಕೆರೆ ಇದೆ. ಪ್ರಾಯಶಃ ಈ ಕೆರೆ ಕದಂಬರ ಕಾಲಾವಧಿಯಲ್ಲಿ ನಿರ್ಮಾಣಗೊಂಡು ನಂತರ ಬೆಳಗುತ್ತಿ ಸಿಂದರು ಹಾಗೂ ಬಹುಳೆ ಅರಸರು ಜೀರ್ಣೋದ್ಧಾರ ಮಾಡಿದಂತೆ ಕಾಣುತ್ತದೆ. ಇಟ್ಟಿಗೆಗಳು ದೊರೆಯುವ ಪ್ರದೇಶದಲ್ಲೇ ಕದಂಬರ ಕಾಲಕ್ಕೆ ಸೇರಿದ ಹೆಂಚಿನ ಅವಶೇಷಗಳೂ ಪತ್ತೆಯಾಗಿವೆ. ಈ ದೇವಾಲಯದ ಕಾಲಮಾನವನ್ನು ಅಲ್ಲಿ ದೊರೆಯುವ ಪ್ರಾಚ್ಯಾವಶೇಷಗಳ ಲಕ್ಷಣಗಳನ್ನು ಆದರಿಸಿ ಇತಿಹಾಸ ತಜ್ಞರಾದ ಪ್ರೊ.ಶ್ರೀನಿವಾಸ ಪಾಡಿಗಾರ್, ಪ್ರೊ.ರಾಜಾರಾಂ ಹೆಗಡೆ, ಪ್ರೊ.ಸರ್ವಮಂಗಳ ಅವರೊಂದಿಗೆ ಚರ್ಚಿಸಿ ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT