ಗುರುವಾರ , ಅಕ್ಟೋಬರ್ 21, 2021
27 °C
ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ತಪ್ಪದ ಗೋಳು

ನಿಯಮಿತವಾಗಿ ನಡೆಯದ ಬಗರ್‌ಹುಕುಂ ಸಮಿತಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಿ.ಎಂ. ಹಾಲಾರಾಧ್ಯ

ನ್ಯಾಮತಿ: ಹೊನ್ನಾಳಿಯಿಂದ ವಿಭಜನೆಗೊಂಡು ನ್ಯಾಮತಿ ತಾಲ್ಲೂಕು ರಚನೆಯಾದ ನಂತರದಲ್ಲಿ ಬಗರ್‌ಹುಕುಂ ಭೂಮಿ ಸಕ್ರಮೀಕರಣ ಸಮಿತಿಯ ಕೇವಲ ಒಂದು ಸಭೆ ನಡೆದಿದ್ದು, ಅರ್ಜಿಗಳ ವಿಲೇವಾರಿಗೆ ಸಂಬಂಧಪಟ್ಟವರು ಆಸಕ್ತಿ ತೋರುತ್ತಿಲ್ಲ ಎಂದು ರೈತರು ದೂರಿದ್ದಾರೆ.

ನ್ಯಾಮತಿ ತಾಲ್ಲೂಕಿನಲ್ಲಿ ಬಗರ್‌ಹುಕುಂ ಸಾಗುವಳಿದಾರರ ದೊಡ್ಡ ಸಂಖ್ಯೆಯೇ ಇದೆ. ವಿವಿಧ ಗ್ರಾಮಗಳ ಗೋಮಾಳ,
ಕಂದಾಯ ಭೂಮಿ, ಅರಣ್ಯಭೂಮಿ ಹಾಗೂ ಖರಾಬು ಜಮೀನುಗಳಲ್ಲಿ ಸಾಗುವಳಿ ಮಾಡಿದ್ದಾರೆ. ಅಲ್ಲದೇ ಭದ್ರಾವತಿಯ ಎಂಪಿಎಂ
ಕಾರ್ಖಾನೆಗೆ ನೀಡಿದ್ದ ಮೀಸಲು
ಅರಣ್ಯ ಭೂಮಿಯಲ್ಲೂ ಕೆಲವರು ಸಾಗುವಳಿ ಮಾಡುತ್ತಿರುವುದು ಕಂಡುಬಂದಿದೆ.

ತಾಲ್ಲೂಕಿನ ಗುಡ್ಡಗಾಡು ಪ್ರದೇಶಗಳಾದ ಹೊಸಕೊಪ್ಪ, ನರಗಿನಕೆರೆ, ಬೆಳಗುತ್ತಿ ತೀರ್ಥರಾಂಪುರ, ಕುಳ್ಳಲ್ಲಿ, ಬಿದರಹಳ್ಳಿ, ಚಿನ್ನಿಕಟ್ಟೆ, ಸೂರಗೊಂಡನಕೊಪ್ಪ, ಯರಗನಾಳ್, ಕುದುರೆಕೊಂಡ, ಜೋಗ, ಜಯನಗರ, ಮುಸ್ಸೇನಾಳ ಒಳಗೊಂಡಂತೆ ಕೆಲವು ಗ್ರಾಮಗಳಲ್ಲಿ ನೂರಾರು ಎಕರೆ ಬಗರ್‌ಹುಕುಂ ಸಾಗುವಳಿ ನಡೆದಿದೆ. ಇದರಲ್ಲಿ ಹೊಸಕೊಪ್ಪ ಸರ್ವೆ ನಂ.18ರಲ್ಲಿ ಸುಮಾರು 280 ಎಕರೆ ಕಂದಾಯ ಮತ್ತು ಗೋಮಾಳ ಜಮೀನು ಹೊಂದಿದೆ. ಹೊಸಕೊಪ್ಪ ಗ್ರಾಮದವರೇ ಆಗಿದ್ದ, ಅರಣ್ಯ ಮತ್ತು ಕೃಷಿ ಮಂತ್ರಿಯಾಗಿದ್ದ ದಿವಂಗತ ಎಚ್.ಎಸ್. ರುದ್ರಪ್ಪ ಅವರು ಹೊಸಕೊಪ್ಪ, ಗುಡ್ಡೇಹಳ್ಳಿ, ಬೆಳಗುತ್ತಿ, ಮಲ್ಲಿಗೇನಹಳ್ಳಿ ಮತ್ತು ನರಗಿನ ಕೆರೆ ರೈತರ ಹಿತದೃಷ್ಟಿಯಿಂದ ದನ, ಕರುಗಳ ಮೇವಿಗಾಗಿ ಗೋಮಾಳ ಮೀಸಲಿಟ್ಟಿದ್ದರು. ಇಂದು ಈ ಗೋಮಾಳವನ್ನು ಸಾಗುವಳಿ ಮಾಡಲಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ‘ಕಂದಾಯ ಭೂಮಿ, ಗೋಮಾಳ ಸಾಗುವಳಿ ಮಾಡುತ್ತಿರುವವರಿಗೆ ಭೂಮಿ ಮಂಜೂರು ಮಾಡಲು ಅವಕಾಶ ಇದೆ. ಮೀಸಲು ಅರಣ್ಯಭೂಮಿ ಮಂಜೂರಾತಿಗೆ ಕಾನೂನು
ತೊಡಕು ಇದೆ. ಇಲಾಖೆಗಳ ಮಧ್ಯೆ ಸಮನ್ವಯ ಕೊರತೆಯಿಂದ ಬಗರ್‌ಹುಕುಂ ಸಾಗುವಳಿದಾರರಿಗೆ ಮಂಜೂರಾತಿ ನೀಡುವುದು ವಿಳಂಬವಾಗುತ್ತಿದೆ. ಪರಿಣಾಮವಾಗಿ ಅತಿವೃಷ್ಟಿ, ಅನಾವೃಷ್ಟಿ ಸಮಯದಲ್ಲಿ ಸರ್ಕಾರದ ಪರಿಹಾರ ಧನ ಸಿಗುತ್ತಿಲ್ಲ. ‘ಗೌಡರ ಹಕ್ಕಿನಲ್ಲಿ ಇಲ್ಲ. ಶ್ಯಾನುಭೋಗರ ಬುಕ್ಕಿನಲ್ಲಿ ಇಲ್ಲ’ ಎಂಬಂತಾಗಿದೆ ರೈತರ ಸ್ಥಿತಿ ಎಂದು ತಾಲ್ಲೂಕು ಬಗರ್‌ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ಮುಖಂಡ ಹೊಸಕೊಪ್ಪ ಗ್ರಾಮದ ಎಚ್.ಎಸ್. ಮಲ್ಲಪ್ಪ ಮತ್ತು ಜಿಲ್ಲಾ ಬಗರ್‌ಹುಕುಂ ಸಾಗುವಳಿ ಹೋರಾಟ ಸಮಿತಿ
ಅಧ್ಯಕ್ಷ ಮಲ್ಲಿಗೇನಹಳ್ಳಿ ಮಳಲಿ ಹನುಮಂತಪ್ಪ ಹೇಳುತ್ತಾರೆ.

ಅರ್ಜಿಗಳು ಪರಿಶೀಲನೆಯಲ್ಲಿವೆ

ನ್ಯಾಮತಿ ತಾಲ್ಲೂಕಿನಲ್ಲಿ ಅನಧಿಕೃತ ಸಾಗುವಳಿ ಸಕ್ರಮೀಕರಣಕ್ಕಾಗಿ ಅರ್ಜಿ ನಮೂನೆ 57ರ ಅಡಿ 2,156 ಅರ್ಜಿಗಳು ಸಲ್ಲಿಕೆಯಾಗಿವೆ. ಅದರಲ್ಲಿ 450 ಗೋವಿನಕೋವಿ ಹೋಬಳಿ ವ್ಯಾಪ್ತಿಯ ಅರ್ಜಿಗಳು. ಉಳಿದವು ಬೆಳಗುತ್ತಿ ಹೋಬಳಿಗೆ ಸೇರಿದವು. ಪರಿಶೀಲನೆಗಾಗಿ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗೆ ಕಳುಹಿಸಲಾಗಿದೆ. ಅರ್ಜಿ ನಮೂನೆ 50 ಮತ್ತು 53ರ ಅಡಿ ಸಲ್ಲಿಕೆಯಾದ ಅರ್ಜಿಗಳ ಪರಿಶೀಲನೆ ಹೊನ್ನಾಳಿ ತಾಲ್ಲೂಕಿನಲ್ಲಿ ಪರಿಶೀಲನೆ ನಡೆಯುತ್ತಿದೆ. ಪರಿಶೀಲನಾ ವರದಿ ಬಂದ ನಂತರ ಬಗರ್‌ಹುಕುಂ ಸಮಿತಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ.

ತನುಜಾ ಟಿ. ಸವದತ್ತಿ, ತಹಶೀಲ್ದಾರ್ ನ್ಯಾಮತಿ ತಾಲ್ಲೂಕು

ಕೋಟ್‌

2007ರಿಂದ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವೆ. ಪಹಣಿಯಲ್ಲಿ ಸರ್ಕಾರದ ಭೂಮಿ ಎಂದಿದೆ. ಆದರೆ, ಅಧಿಕಾರಿಗಳು ಸಾಗುವಳಿ ಪತ್ರ ನೀಡಲು ಸತಾಯಿಸುತ್ತಿದ್ದಾರೆ. 24 ವರ್ಷ ಗಡಿಯಲ್ಲಿ ಯೋಧನಾಗಿ ಕಾರ್ಯನಿರ್ವಹಿಸಿದ್ದಕ್ಕೆ ಬೆಲೆಯೇ ಇಲ್ಲದಾಗಿದೆ.

ಜಿ. ಶಿವಪ್ಪ, ಮಾಜಿ ಸೈನಿಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.