ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗಳಲ್ಲಿ ಮರುಕಳಿಸಿತು ಮಕ್ಕಳ ಕಲರವ

ಕೊರೊನಾ ಕಾರಣ ಬಂದ್‌ ಆಗಿದ್ದ ಶಾಲೆ l ಒಂದೂವರೆ ವರ್ಷದ ನಂತರ ಶಾಲೆಗಳತ್ತ ಹೆಜ್ಜೆ ಹಾಕಿದ ಚಿಣ್ಣರು
Last Updated 26 ಅಕ್ಟೋಬರ್ 2021, 4:39 IST
ಅಕ್ಷರ ಗಾತ್ರ

ದಾವಣಗೆರೆ: ಒಂದೂವರೆ ವರ್ಷದಿಂದ ಆನ್‌ಲೈನ್‌ ಮೂಲಕವೇ ಪಾಠ ಕೇಳುತ್ತಿದ್ದ 1ರಿಂದ 5ನೇ ತರಗತಿವರೆಗಿನ ಮಕ್ಕಳು ಸೋಮವಾರ ಖುಷಿಯಿಂದಲೇ ಶಾಲೆಗೆ ಮರಳಿದರು.

ಮಕ್ಕಳು ಬ್ಯಾಗ್ ಹೆಗಲಿಗೇರಿಸಿಕೊಂಡು ಶಾಲೆಗೆ ಬಂದು ಸಹಪಾಠಿಗಳ ಜತೆಗೆ ಬೆರೆತರು. ಶಿಕ್ಷಕರ ಮಾರ್ಗದರ್ಶನದಲ್ಲಿ ಮತ್ತೆ ತರಗತಿ ಸಂಸ್ಕೃತಿಗೆ ಒಗ್ಗಿಕೊಂಡರು. ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ ಎಂಬ ಚಿಂತೆಯಲ್ಲಿದ್ದ ಪಾಲಕರಿಗೆ ಶಾಲೆ ಆರಂಭವಾಗಿದ್ದರಿಂದ ನಿರಾಳ ಭಾವನೆ ಕಂಡುಬಂದಿತು. ಶಿಕ್ಷಕರು ಪಾಠದ ತಯಾರಿಯೊಂದಿಗೆ ಆಗಮಿಸಿದ್ದರು.

ಶಾಲೆಗಳ ದ್ವಾರಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ನಗರದ ಬಾಪೂಜಿ (ಸಿಬಿಎಸ್ಇ) ಶಾಲೆಯ ಗೇಟ್ ಅನ್ನು ಬಲೂನಿನಿಂದ ಸಿಂಗರಿಸಿ ಮಕ್ಕಳ ಸ್ವಾಗತಕ್ಕೆ ಸಿದ್ಧಗೊಳಿಸಲಾಗಿತ್ತು. ಶಿಕ್ಷಕರು ಮಕ್ಕಳಿಗೆ ಗುಲಾಬಿ ಹೂವು, ಚಾಕೊಲೇಟ್ ನೀಡಿ ಸ್ವಾಗತಿಸಿದರು. ಪ್ರತಿ ಮಗುವಿನ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಶಾಲೆಯೊಳಗೆ ಬಿಡಲಾಯಿತು. ಇಲ್ಲಿನ ನಿಟುವಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯಾಂಡ್ ವಾದನದ ಮೂಲಕ ಮಕ್ಕಳನ್ನು ಸ್ವಾಗತಿಸಲಾಯಿತು. ಒಂದನೇ ತರಗತಿಯ ಮಕ್ಕಳು ತರಗತಿಗೆ ಹಾಜರಾಗಿದ್ದುದರಿಂದ ಶಾಲೆಗಳು ಕಳೆಗಟ್ಟಿದ್ದವು.

ಪಾಲಕರ ಜತೆಗೆ ಶಾಲೆಯ ಆವರಣಕ್ಕೆ ಬಂದ ಮಕ್ಕಳಿಗೆ ಕರೊನಾ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಸಲಾಯಿತು. ಮಾಸ್ಕ್, ಸ್ಯಾನಿಟೈಸರ್ ಉಪಯೋಗಿಸುವಂತೆ ಶಿಕ್ಷಕರು ಸೂಚನೆ ನೀಡಿದರು. ಬಹುತೇಕ ಮಕ್ಕಳು ಮಾಸ್ಕ್ ಜತೆಗೆ ಬಂದಿದ್ದರು.ಕೆಲವರು ಧರಿಸಿರಲಿಲ್ಲ.

ಭಾನುವಾರ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು. ಅಂತರ ಕಾಯ್ದುಕೊಳ್ಳಲು ವೃತ್ತಾಕಾರದಲ್ಲಿ ಗುರುತುಗಳನ್ನು ಮಾಡಲಾಗಿತ್ತು. ಜಿಲ್ಲೆಯಲ್ಲಿ 1ರಿಂದ 5ನೇ ತರಗತಿವರೆಗೆ 1,34,421 ಮಕ್ಕಳು ನೋಂದಣಿ ಮಾಡಿಸಿದ್ದು, ಶಾಲೆಗೆ ಬಾರದ ಮಕ್ಕಳಿಗೆ ಅಭ್ಯಾಸ ಹಾಳೆಗಳನ್ನು ನೀಡಲಾಗುತ್ತದೆ.

‘ಶಾಲೆಯಲ್ಲಿ 15 ವಿದ್ಯಾರ್ಥಿಗಳಂತೆ ತಂಡವನ್ನು ರಚನೆ ಮಾಡಿದ್ದು, ತಂಡವಾರು ತರಗತಿಯನ್ನು ನಿರ್ವಹಿಸಲಾಗುವುದು. ನಾವೂ ಇಲಾಖೆಯ ನಿರ್ದೇಶನದಂತೆ ಪಾಠ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. 1ರಿಂದ 5ನೇ ತರಗತಿ ಮಕ್ಕಳಿಗೆ ಅಕ್ಟೋಬರ್‌ 30ರವರೆಗೆ ಮಧ್ಯಾಹ್ನ 12.30ರವರೆಗೆ ತರಗತಿ ನಡೆಯಲಿದೆ. ನ.2ರಿಂದ ಪೂರ್ಣ ಅವಧಿಗೆ ಶಾಲೆ ಆರಂಭವಾಗಲಿದ್ದು, ಅಂದಿನಿಂದ ಮಧ್ಯಾಹ್ನ ಬಿಸಿಯೂಟ ನೀಡಲು ವ್ಯವಸ್ಥೆ ಮಾಡಲಾಗುವುದು’ ಎಂದು ಶಿಕ್ಷಕ ಜಯಣ್ಣ ತಿಳಿಸಿದರು.

ನಿಟುವಳ್ಳಿ ಶಾಲೆಯಲ್ಲಿ ನಡೆದ ಆರಂಭೋತ್ಸವದಲ್ಲಿ ಎಚ್.ಎಂ.ಚಂದ್ರಪ್ಪ, ತಿಪ್ಪೇಸ್ವಾಮಿ, ಬಸವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT