ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಅಭಿವೃದ್ಧಿ ಕಾಮಗಾರಿ ಅವ್ಯವಹಾರ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ

ಶಾಸಕ ಎಂ.ಪಿ. ರೇಣುಕಾಚಾರ್ಯ ಘೋಷಣೆ
Last Updated 31 ಜನವರಿ 2022, 4:31 IST
ಅಕ್ಷರ ಗಾತ್ರ

ಹೊನ್ನಾಳಿ: ‘ತಾಲ್ಲೂಕಿನ ನೇರಲಗುಂಡಿ ಗ್ರಾಮಸ್ಥರ ಅಪೇಕ್ಷೆಯ ಮೇರೆಗೆ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು, ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಒಂದು ವೇಳೆ ಅವ್ಯವಹಾರ ನಡೆದಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ’ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಘೋಷಿಸಿದರು.

ನೇರಲಗುಂಡಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಗೆ ₹ 50 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, ಅದಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಸರ್ಕಾರದ ಅನುದಾನ ಬಳಸಿಕೊಂಡು ನನ್ನ ಜಮೀನಿಗೆ ಕೆರೆಮಣ್ಣು ಸಾಗಿಸಿದ್ದೇನೆ ಎಂದು ಕಳೆದ ವರ್ಷ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಆರೋಪಿಸಿದ್ದರು. ಇದು ಸತ್ಯಕ್ಕೆ ದೂರವಾದ ಸಂಗತಿ. ಗ್ರಾಮಸ್ಥರ ಮನವಿ ಮೇರೆಗೆ ಸ್ವಂತ ಖರ್ಚಿನಲ್ಲಿ ಕೆರೆ ಹೂಳು ತೆಗೆಸಿ ನನ್ನ ಜಮೀನಿಗೆ ಸಾಗಿಸಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದರು.

‘ನೇರಲಗುಂಡಿ ಕೆರೆ ಅಭಿವೃದ್ಧಿ ವಿಚಾರವಾಗಿ ಮಾಜಿ ಶಾಸಕರು ಏನೇ ಆರೋಪ ಮಾಡಿದರೂ, ಅದಕ್ಕೆ ಪ್ರತಿಕ್ರಿಯಿಸಿರಲಿಲ್ಲ. ಆದರೆ, ಇಂದು ನೇರಲಗುಂಡಿ ಗ್ರಾಮಕ್ಕೆ ಭೇಟಿ ನೀಡಿದ್ದರಿಂದ ಮಾಜಿ ಶಾಸಕರ ಆರೋಪಕ್ಕೆ ಪ್ರತಿಕ್ರಿಯೆ ಕೊಡುತ್ತಿದ್ದೇನೆ’ ಎಂದು ಹೇಳಿದರು.

ನೇರಲಗುಂಡಿ ಕೆರೆಯು 4.20 ಎಕರೆ ವಿಸ್ತೀರ್ಣ ಹೊಂದಿದ್ದು, ₹ 50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆನಕನಹಳ್ಳಿ ಏತ ನೀರಾವರಿ ಮೂಲಕ ಕೆರೆ ತುಂಬಿಸಲಾಗುವುದು. ಕೆರೆ ತುಂಬಿದರೆ ಸುತ್ತಮುತ್ತಲಿನ ಬೋರ್‌ವೆಲ್‍ಗಳಲ್ಲಿ ಅಂತರ್ಜಲಮಟ್ಟವೂ ಹೆಚ್ಚಲಿದೆ. ಕೆರೆಯಲ್ಲಿ ನೀರು ತುಂಬಿದರೆ ರೈತರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು.

ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಗುದ್ದಲಿಪೂಜೆ: ತಾಲ್ಲೂಕಿನ ನೇರಲಗುಂಡಿ ತಾಂಡಾದ ಸೇವಾಲಾಲ್ ಸಮುದಾಯ ಭವನದ ಮುಂಭಾಗ ₹ 2.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಫೇವರ್ ಬ್ಲಾಕ್ ಉದ್ಘಾಟನೆ, ನೆಲಹೊನ್ನೆ ತಾಂಡಾದಲ್ಲಿ ₹ 14 ಲಕ್ಷ ವೆಚ್ಚದಲ್ಲಿ ಜಲ ಜೀವನ್ ಮೀಷನ್ ಕಾಮಗಾರಿ ಉದ್ಘಾಟಿಸಿದರು. ₹ 5 ಲಕ್ಷ ವೆಚ್ಚದಲ್ಲಿ ಬಾಕ್ಸ್ ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು. ನೆಲಹೊನ್ನೆ ಗ್ರಾಮದಲ್ಲಿ ₹ 11.45 ಲಕ್ಷ ವೆಚ್ಚದಲ್ಲಿ ಬಾಕ್ಸ್ ಚರಂಡಿ, ₹ 5 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು. ₹ 15 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ, ನೆಲಹೊನ್ನೆ ಆಂಧ್ರಕ್ಯಾಂಪ್‍ನಲ್ಲಿ ₹ 18 ಲಕ್ಷ ವೆಚ್ಚದ ಜಲಜೀವನ್ ಮೀಷನ್ ಕಾಮಗಾರಿ, ₹ 16 ಲಕ್ಷ ವೆಚ್ಚದ ನೂತನ ಅಂಗನವಾಡಿ ಉದ್ಘಾಟಿಸಿದರು. ಕುಂಬಳೂರು ಗ್ರಾಮದಲ್ಲಿ ₹ 14 ಲಕ್ಷ ವೆಚ್ಚದಲ್ಲಿ ಬಾಕ್ಸ್ ಚರಂಡಿ ಹಾಗೂ ₹ 2.50 ಲಕ್ಷ ವೆಚ್ಚದಲ್ಲಿ ಬಸ್ ನಿಲ್ದಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಒಟ್ಟು ₹ 41.29 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದೇವರಾಜ್ ನೆಲಹೊನ್ನೆ, ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್, ಕುಂಬಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷೆ ಹಳದಮ್ಮ ಮೋಹನ್, ಸದಸ್ಯರಾದ ರೇಖಾ ರಾಜಪ್ಪ, ಪವನ್ ಸತೀಶ್, ಎಸ್.ಆರ್. ಈಶ್ವರಪ್ಪ, ಎ.ಕೆ. ಮಹೇಶ್, ಎ.ಕೆ. ಜಯಪ್ಪ, ಅನುಸೂಯಮ್ಮ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ನಿದೇರ್ಶಕ ಮಾರುತಿನಾಯ್ಕ, ಮುಖಂಡರಾದ ಸೋಮಣ್ಣ, ಕುಬೇರ, ಶ್ರೀಕಂಠಪ್ಪ, ಶಾಂತರಾಜಪ್ಪ, ಕುಮಾರ್, ಸಂತೋಷ್, ತೇರಪ್ಪ, ರುದ್ರೇಶ್ ಎಚ್.ಜಿ, ಚಂದ್ರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT