ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಇಂದು ಪತ್ರಿಕಾ ವಿತರಕರ ದಿನಾಚರಣೆ

ಅಕ್ಷರ ಪ್ರೀತಿ ಹಂಚುವ ಪತ್ರಿಕಾ ವಿತರಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬೆಳಿಗ್ಗೆ ಜನರು ಏಳುವ ಮುಂಚೆಯೇ ಮನೆ ಮನೆಗೆ ಪತ್ರಿಕೆ ಹಂಚಿ, ಬಿಸಿ ಬಿಸಿ ಚಹಾದೊಂದಿಗೆ ಪತ್ರಿಕೆ ಓದುವಂತೆ ಮಾಡುವ ಅಕ್ಷರ ಪ್ರೀತಿ ಹಂಚುವವರು ಇವರು. ಓದುಗರು ಹಾಗೂ ಸುದ್ದಿ ಮನೆಯ ಕೊಂಡಿಯಂತೆ ಕೆಲಸ ಮಾಡುವ ಯೋಧರು ಪತ್ರಿಕಾ ವಿತರಕರು. 

ಇಂತಹ ಯೋಧರನ್ನು ಸ್ಮರಿಸುವ ದಿನ ಇಂದು. ಸೆಪ್ಟೆಂಬರ್ 4 ‘ಪತ್ರಿಕಾ ವಿತರಕರ’ ದಿನ. ಮಳೆ, ಚಳಿ ಎನ್ನದೇ ಮನೆ ಮನೆಗೆ ಪತ್ರಿಕೆ ಹಂಚುವ ಪತ್ರಿಕಾ ವಿತರಕರ ಸಂಕಷ್ಟ ಹಲವು. ಕೊರೊನಾದಂತಹ ದುರಿತ ಕಾಲದಲ್ಲೂ ಧೃತಿಗೆಡದೇ ಕೆಲಸ ಮಾಡಿದ ‘ವಾರಿಯರ್‌ಗಳು’. 

ಪತ್ರಿಕಾ ವಿತರಕರ ಕಾಯಕ ಆರಂಭವಾಗುವುದು ಬೆಳಿಗ್ಗೆ 4ರ ಸುಮಾರಿಗೆ. ಪತ್ರಿಕೆಯ ವಿತರಣಾ ಏಜೆಂಟರ ಬಳಿಗೆ ಹೋಗಿ ಪತ್ರಿಕೆಯನ್ನು ತರುವ ಇವರು ಯಾವುದೋ ಬೀದಿಯ ಮೂಲೆಯಲ್ಲಿ ಕೂತು ಪತ್ರಿಕೆಗಳು ಹಾಗೂ ಅದರ ಪುರವಣಿಗಳನ್ನು ಜೋಡಿಸುತ್ತಾರೆ. ಬ್ಯಾಗುಗಳಲ್ಲಿ ತುಂಬಿಕೊಂಡು ಸ್ಕೂಟರ್‌, ಸೈಕಲ್‌ಗಳಲ್ಲಿ ಓದುಗರ ಮನೆಮನೆಗೆ ತಲುಪಿಸುವ ಕಾರ್ಯ ಶುರು ಮಾಡುತ್ತಾರೆ.

ಲಾಕ್‌ಡೌನ್‌ ವೇಳೆ ಅಗತ್ಯ ವಸ್ತುಗಳನ್ನು ಖರೀದಿಸಲು ಮನೆಯಿಂದ ಹೊರಬರಲು ಜನರು ಯೋಚಿಸುತ್ತಿದ್ದರು. ‘ಪತ್ರಿಕೆಗಳಿಂದ ಸೋಂಕು ಹರಡುತ್ತದೆ’ ಎಂಬ ಗಾಳಿಸುದ್ದಿ‌ ಹಬ್ಬಿತ್ತು. ‘ಗಾಳಿ ಸುದ್ದಿಗಳನ್ನು ನಂಬಬೇಡಿ’ ಎನ್ನುತ್ತಾ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡ ವಿತರಕರು ಮಾಸ್ಕ್‌ ಧರಿಸಿ, ಸ್ಯಾನಿಟೈಸ್‌ ಹಾಕಿಕೊಂಡು ಓದುಗರಿಗೆ ಪತ್ರಿಕೆ ತಲುಪಿಸಿ ಉದ್ಯಮಕ್ಕೂ ಬೆನ್ನೆಲುಬಾಗಿ ನಿಂತಿದ್ದರು.

ಕೆಲಸದ ಮಧ್ಯೆ ಹಲವು ಅಡೆತಡೆ ಎದುರಾದರೂ ಕುಟುಂಬದ ಸದಸ್ಯರಿಗೆ ಅವಘಡ ಉಂಟಾದರೂ ಇವರ ಕೆಲಸ ನಿಲ್ಲುವುದಿಲ್ಲ. ಸಂಕಷ್ಟದಲ್ಲೂ ಪ್ರೀತಿಯಿಂದ ಪತ್ರಿಕೆ ಹಂಚುವ ಇವರಿಗೆ ಪತ್ರಿಕಾ ದಿನದ ಶುಭಾಶಯಗಳು.

‘ಪತ್ರಿಕೆ ಜೋಡಣೆಗೆ ಸೂರು ಸಿಗಲಿ’

ಮಳೆ, ಚಳಿ ಎನ್ನದೇ ಬೆಳಿಗ್ಗೆಯೇ ಪತ್ರಿಕೆ ಹಂಚಬೇಕು. ನಮಗೆ ಒಂದೆಡೆ ಕುಳಿತು ಪತ್ರಿಕೆ ಜೋಡಿಸಲು ವ್ಯವಸ್ಥಿತವಾದ ಜಾಗ ಇಲ್ಲ. ಮಹಾನಗರ ಪಾಲಿಕೆ, ಜಿಲ್ಲಾಡಳಿತದಿಂದ ಪತ್ರಿಕಾ ವಿತರಕರಿಗೆ ಒಂದು ಸೂರು ನಿರ್ಮಾಣ ಮಾಡಿಕೊಟ್ಟರೆ ಸಾಕು. ಕೊರೊನಾ ಸಂದರ್ಭದಲ್ಲಿ ಓದುಗರು ಪತ್ರಿಕೆಯಿಂದ ಕೊರೊನಾ ಬರುತ್ತದೆ ಎಂದು ಭಾವಿಸಿ ಪತ್ರಿಕೆ ನಿಲ್ಲಿಸಿದ್ದರು. ಕೋವಿಡ್‌ನಲ್ಲೂ ಕೆಲಸ ಮಾಡಿದ ನಮಗೆ ಏನೂ ಆಗಿಲ್ಲ. ಓದುಗರು ಇಂತಹ ಗಾಳಿಸುದ್ದಿಗೆ ಕಿವಿಗೊಡಬಾರದು ಎಂಬುದು ನಮ್ಮ ಮನವಿ. ಸರ್ಕಾರ ಎಲ್ಲರಂತೆ ನಮ್ಮನ್ನೂ ಗುರುತಿಸಿ ಸೌಲಭ್ಯ ನೀಡಬೇಕು. ಸಂಕಷ್ಟದಲ್ಲೂ ಓದುಗರು ಪತ್ರಿಕೆ ಓದುತ್ತಾ ನಮಗೆ ಸಹಕಾರ ನೀಡಿದ್ದಾರೆ. ಅವರಿಗೂ ಧನ್ಯವಾದಗಳು.

– ಬಿ.ಮಂಜುನಾಥ, ಪತ್ರಿಕಾ ವಿತರಕರು, ದಾವಣಗೆರೆ

‘ಸಂಕಷ್ಟಕ್ಕೆ ಸ್ಪಂದಿಸಲಿ’

15 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನಮ್ಮ ಸಮಸ್ಯೆಗಳನ್ನು ಯಾರೂ ಕೇಳುತ್ತಿಲ್ಲ. ಕೊರೊನಾ ಸಂದರ್ಭದಲ್ಲಿ ಎಲ್ಲರಿಗೂ ಸರ್ಕಾರ ಪ್ಯಾಕೇಜ್ ನೀಡಿತು. ನಮಗೆ ನೀಡಲಿಲ್ಲ. ಕೊರೊನಾದಲ್ಲಿ ಪತ್ರಿಕೆ ಹಾಕುವ ಕೆಲ ಹುಡುಗರು ಬರಲಿಲ್ಲ. ಅವರ ಪೋಷಕರು ಕಳುಹಿಸಲಿಲ್ಲ. ಇದರಿಂದ ಸಮಸ್ಯೆಯಾಯಿತು. ಆದರೂ ಪತ್ರಿಕೆಯನ್ನು ಮನೆ ಮನೆಗೆ ಹಂಚುವ ಕೆಲಸ ನಿಲ್ಲಿಸಲಿಲ್ಲ. ಪತ್ರಿಕಾ ವಿತರಕರಿಗೂ ಸರ್ಕಾರ ಸೌಲಭ್ಯ ನೀಡಿ ಸ್ಪಂದಿಸಿದರೆ ಅನುಕೂಲ.

–ಪ್ರಕಾಶ್‌ ಎ., ಪತ್ರಿಕಾ ವಿತರಕರು

‘ನಮ್ಮನ್ನೂ ಗುರುತಿಸಿ’

24 ವರ್ಷಗಳಿಂದ ಈ ವೃತ್ತಿಯಲ್ಲಿದ್ದೇನೆ. ಇದುವರೆಗೆ ನಮ್ಮನ್ನು ಗುರುತಿಸುವ ಕೆಲಸ ಆಗಿಲ್ಲ. ಮಳೆ ಬಂದರೆ ನಮ್ಮ ಪಾಡು ಹೇಳತೀರದು. ಪತ್ರಿಕೆ ಜೋಡಿಸುವ ಕೆಲಸಕ್ಕೆ ಸಮರ್ಪಕ ಜಾಗ ಇಲ್ಲ. ಪತ್ರಿಕೆಯ ಬಿಲ್‌ ಕೇಳಲು ಹೋದಾಗ ಓದುಗರು ನಾಳೆ ಬಾ, ನಾಡಿದ್ದು ಬಾ ಎನ್ನುತ್ತಾರೆ. ಎಲ್ಲರೂ ಸಹಕಾರ ನೀಡಬೇಕು. ಎಲ್ಲ ಪತ್ರಿಕೆಯವರು ಸೇರಿ ಸಮಾರಂಭ ಆಯೋಜಿಸಿ ಕಷ್ಟ–ಸುಖ ಹಂಚಿಕೊಳ್ಳಲು ಒಮ್ಮೆಯಾದರೂ ವೇದಿಕೆ ಕಲ್ಪಿಸಿಲ್ಲ. ಇದು ಆದರೆ ಪತ್ರಿಕೆ ಹಾಕುವ ಹುಡುಗರೂ ಸಂತಸ ಪಡುತ್ತಾರೆ.

– ಸಂತೋಷ್‌, ಪತ್ರಿಕಾ ವಿತರಕರು

‘ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಿ’

ಬೆಳಿಗ್ಗೆಯೇ ಎದ್ದು ಪತ್ರಿಕೆ ಹಂಚುತ್ತೇವೆ. ಹಲವರು ಅಪಘಾತ, ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೀಡಾಗಿದ್ದರು. ನಮಗೂ ಆರೋಗ್ಯ ವಿಮೆ ನೀಡಬೇಕು. ಕೊರೊನಾದಲ್ಲಿ ಎಲ್ಲರನ್ನೂ ಕೊರೊನಾ ವಾರಿಯರ್‌ಗಳೆಂದು ಗುರುತಿಸಿದ ಸರ್ಕಾರ ನಮ್ಮನ್ನು ಕಡೆಗಣಿಸಿತು. ಆಶ್ವಾಸನೆ ನೀಡಿದರೇ ಹೊರತು ಸೌಲಭ್ಯ ಸಿಗಲಿಲ್ಲ. ಎಲ್ಲರಂತೆ ನಮಗೂ ಸೌಲಭ್ಯ, ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು.

– ರಘುರಾಮ್‌ ಎಚ್‌., ಪತ್ರಿಕಾ ವಿತರಕರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.