‘ಆನೆಯಂತೆ ತನ್ನ ಮೇಲೆ ಮಣ್ಣು ಹಾಕಿಕೊಳ್ಳುತ್ತಿರುವ ವಿಶ್ವನಾಥ್‌’

7
ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ತಿರುಗೇಟು

‘ಆನೆಯಂತೆ ತನ್ನ ಮೇಲೆ ಮಣ್ಣು ಹಾಕಿಕೊಳ್ಳುತ್ತಿರುವ ವಿಶ್ವನಾಥ್‌’

Published:
Updated:
ನಿರಂಜನಾನಂದಪುರಿ ಸ್ವಾಮೀಜಿ

ಹರಿಹರ: ‘ಆನೆ ಕೆರೆಯಲ್ಲಿ ಸ್ನಾನ ಮಾಡಿದ ಬಳಿಕ ತನ್ನ ಮೈಮೇಲೆ ತಾನೇ ಮಣ್ಣು ಹಾಕಿಕೊಳ್ಳುತ್ತದೆ. ತಮ್ಮ ಸಮುದಾಯ ಹಾಗೂ ಗುರುಪೀಠದ ವಿರುದ್ಧ ಹೇಳಿಕೆ ನೀಡುವ ಮೂಲಕ ಶಾಸಕ ಎಚ್. ವಿಶ್ವನಾಥ್‌ ಸಹ ಅಂಥ ಕೆಲಸ ಮಾಡುತ್ತಿದ್ದಾರೆ’ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ತಿರುಗೇಟು ನೀಡಿದರು.

ತಮ್ಮ ವಿರುದ್ಧ ಎಚ್‍. ವಿಶ್ವನಾಥ್‌ ನೀಡಿದ್ದ ಹೇಳಿಕೆಗೆ ತಾಲ್ಲೂಕಿನ ಬೆಳ್ಳೂಡಿ ಕನಕ ಪೀಠದ ಶಾಖಾ ಮಠದಲ್ಲಿ ಶನಿವಾರ ಸುದ್ದಿಗಾರರಿಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು. ‘ಗುರುಪೀಠ ಯಾವುದೇ ರಾಜಕೀಯ ಪಕ್ಷಗಳ ಪರ ಅಥವಾ ವಿರುದ್ಧವಿಲ್ಲ. ಆದರೆ, ನಮ್ಮ ಸಮುದಾಯದವರಿಗೆ ಮತ್ತು ಮಠದ ಭಕ್ತರಿಗೆ ತೊಂದರೆಯಾದಾಗ, ಯಾರು ಬಂದರೂ ಎದುರಿಸುತ್ತೇನೆ. ಈ ಹಿಂದೆ ಕೆ.ಎಸ್‌. ಈಶ್ವರಪ್ಪ, ವಿಶ್ವನಾಥ್‌ ಅವರಿಗೆ ನೋವಾದಾಗ ಸ್ಪಂದಿಸಿದ್ದೇನೆ. ಸಮುದಾಯಕ್ಕೆ ನೋವಾಗುತ್ತಿರುವ ಹಿನ್ನೆಲೆಯಲ್ಲಿ ಧ್ವನಿ ಎತ್ತಿದ್ದೇನೆ ಹೊರತು, ಯಾವುದೇ ವೈಯಕ್ತಿಕ ಹಿತಾಸಕ್ತಿ ಅಥವಾ ಪ್ರತಿಷ್ಠೆಗಾಗಿ ಅಲ್ಲ. ಈ ವಿಷಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ವಿಶ್ವನಾಥ ಅವರು ಕಾಂಗ್ರೆಸ್‌ನಲ್ಲಿದ್ದಾಗ ದೇವೇಗೌಡರನ್ನು ಘಟ ಸರ್ಪಕ್ಕೆ ಹಾಗೂ ಸಿದ್ದರಾಮಯ್ಯ ಅವರನ್ನು ಕಪ್ಪೆಗೆ ಹೋಲಿಸಿದ್ದರು. ಈಗ ಅವರು ಘಟ ಸರ್ಪದ ಕೆಳಗೆ ಆಶ್ರಯ ಪಡೆದಿದ್ದು, ಅವರ ಬಗ್ಗೆ ನಾನು ಇನ್ನೇನು ಹೇಳಲು ಸಾಧ್ಯ?’ ಎಂದು ಕುಟುಕಿದರು.

‘ಕಾಂಗ್ರೆಸ್‌ನಲ್ಲಿದ್ದುಕೊಂಡೇ ವಿಶ್ವನಾಥ್‌, ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡುತ್ತಿದ್ದರು. ಈ ಬಗ್ಗೆ ಸಿದ್ದರಾಮಯ್ಯ ನನ್ನೊಂದಿಗೆ ಚರ್ಚಿಸಿದ್ದರು. ಇಬ್ಬರೂ ಅನುಸರಿಸಿಕೊಂಡು ಹೋಗುವಂತೆ ಸಲಹೆ ನೀಡಿದ್ದೆ. ಆದರೆ, ಪದೇ ಪದೇ ಅಂಥ ಹೇಳಿಕೆ ನೀಡಿದರು. ಆಗ, ಹೈಕಮಾಂಡ್‌ ಸೂಚಿಸಿದಂತೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂಬುದನ್ನು ವಿಶ್ವನಾಥ್‌ಗೆ ತಿಳಿಸುವಂತೆ ಸಿದ್ದರಾಮಯ್ಯ ನನ್ನ ಬಳಿ ಹೇಳಿದ್ದರು. ನನ್ನ ಸಲಹೆಯನ್ನು ಅವರು ಪರಿಗಣಿಸದೇ ಇರುವುದರಿಂದ ಇಬ್ಬರ ಮಧ್ಯೆ ಸಮಸ್ಯೆ ಹಾಗೂ ವೈಮನಸ್ಸು ಸೃಷ್ಟಿಯಾಗಿದೆ’ ಎಂದು ಹೇಳಿದರು.

‘ವಿಶ್ವನಾಥ್‌ ಸಮುದಾಯದ ಸಂಘಟನೆ, ಮಠ ನಿರ್ಮಣಕ್ಕೆ ಹಗಲಿರುಳು ಶ್ರಮಿಸಿದ್ದಾರೆ. ಅವರ ಬಗ್ಗೆ ಅಪಾರ ಗೌರವವಿದೆ. ಅವರ ವೈಯಕ್ತಿಕ ಸಮಸ್ಯೆಗಳ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಹಾಗೂ ಮಠದ ಬಗ್ಗೆ ಏನಾದರೂ ಮಾತನಾಡುವುದರಿಂದ ಅವರಿಗೆ ಒಳ್ಳೆಯದಾಗುತ್ತದೆ ಎಂದು ಅನಿಸಿದರೆ ಮಾತನಾಡಲಿ’ ಎಂದು ಸ್ವಾಮೀಜಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !