ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿಯಿಂದ ಹಾನಿಯಾದ ಅಷ್ಟು ಹಣವನ್ನು ಯಾವ ಸರ್ಕಾರವೂ ನೀಡಿಲ್ಲ: ಸಿದ್ದೇಶ್ವರ

Last Updated 5 ಅಕ್ಟೋಬರ್ 2019, 12:28 IST
ಅಕ್ಷರ ಗಾತ್ರ

ದಾವಣಗೆರೆ: ಕೇಂದ್ರ ಸರ್ಕಾರವು ನೆರೆಪೀಡಿತ ಪ್ರದೇಶಗಳಲ್ಲಿ ಹಾನಿಯಾದ ಶೇ 10ರಷ್ಟು ಪರಿಹಾರ ಮಾತ್ರವನ್ನು ನೀಡಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ದಾವಣಗೆರೆ ಸ್ಮಾರ್ಟ್‌ ಸಿಟಿ ಲಿಮಿಟೆಡ್ ವತಿಯಿಂದ ನಗರದ ವಿವಿಧ ಪಾರ್ಕ್‌ಗಳಲ್ಲಿ ಅಳವಡಿಸಿರುವ ವ್ಯಾಯಾಮ ಮತ್ತು ಮಕ್ಕಳ ಆಟದ ಸಾಮಗ್ರಿಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಬಂದ ಕಾಲದಿಂದಲೂ ಯಾವ ಸರ್ಕಾರವೂ ಅತಿವೃಷ್ಟಿಯಿಂದ ನಷ್ಟವಾದ ಅಷ್ಟು ಪ್ರಮಾಣದ ಹಣವನ್ನು ನೀಡಿಲ್ಲ. ₹ 38,000 ಕೋಟಿ ನಷ್ಟವಾಗಿದ್ದರೆ ಶೇ 10ರಷ್ಟು ಅಂದರೆ ₹ 3,800 ಕೋಟಿಯನ್ನು ನೀಡುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಣವನ್ನು ನೀಡುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರ ನೆರೆ ಸಂತ್ರಸ್ತರಿಗೆ ಮಧ್ಯಂತರ ಪರಿಹಾರವಾಗಿ ₹ 1200 ಕೋಟಿ ಹಾಗೂ ರಾಜ್ಯ ಸರ್ಕಾರವೂ ₹ 3 ಸಾವಿರ ಕೋಟಿ ಬಿಡುಗಡೆ ಮಾಡಿವೆ. ಅತಿವೃಷ್ಟಿ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರವಾಸ ಮಾಡಿ ನೆರೆ ಸಂತ್ರಸ್ತರಿಗೆ ಆಗಿರುವ ಕೊರತೆಯನ್ನು ತುಂಬುವ ಕೆಲಸ ಮಾಡಿದ್ದಾರೆ’ ಎಂದರು.

‘ಅತಿವೃಷ್ಟಿ ನಷ್ಟವನ್ನು ಪರಿಶೀಲಿಸಲು ಕೇಂದ್ರದಿಂದ ತಂಡಗಳು ಬಂದಿವೆ. ಮಳೆಗಾಲ ಇನ್ನೂ ಮುಗಿದಿಲ್ಲ. ಆದ್ದರಿಂದ ಮುಂಗಾರು ಮಳೆಯಿಂದ ಉತ್ತರ ಕರ್ನಾಟಕ ಭಾಗಗಳಲ್ಲಿ ಹಾನಿಯಾಗಿದೆ. ಹಿಂಗಾರಿನಲ್ಲಿ ಮಧ್ಯ ಕರ್ನಾಟಕ ಅಥವಾ ಇನ್ನಿತರೆ ಭಾಗಗಳಲ್ಲಿ ಹಾನಿಯಾಗಿದ್ದು, ಇವೆಲ್ಲವನ್ನು ಪರಿಗಣನೆಗೆ ತೆಗೆದುಕೊಂಡು ಎಷ್ಟು ನಷ್ಟವಾಗಿದೆಯೋ ಆದರಲ್ಲಿ ಶೇ 10ರಷ್ಟು ಭಾಗವನ್ನು ಕೇಂದ್ರ ಸರ್ಕಾರ ನೀಡಲಿದೆ’ ಎಂದರು.

‘ವಿರೋಧ ಪಕ್ಷಗಳು ಪರಿಹಾರದ ಮೊತ್ತವನ್ನು ಅರೆ ಕಾಸಿನ ಗಂಜಿ ಎಂದು ಟೀಕಿಸುತ್ತಿವೆಯಲ್ಲಾ ಎಂಬ ಪ್ರಶ್ನೆಗೆ ‘ಮನಮೋಹನ್ ಸಿಂಗ್ ಸರ್ಕಾರದಲ್ಲಿ ರಾಜ್ಯದಲ್ಲಿ ಅತಿವೃಷ್ಟಿ, ಬರಗಾಲ ಬಂದಿದ್ದವು. ಆಗ ಎಷ್ಟು ಬಿಡುಗಡೆ ಮಾಡಿದ್ದಾರೆ ಎಂಬುದನ್ನು ಲೆಕ್ಕ ಕೊಟ್ಟು ಮಾತನಾಡಲಿ’ ಎಂದು ತಿರುಗೇಟು ನೀಡಿದರು.

ಸ್ಮಾರ್ಟ್ ಸಿಟಿಯಿಂದ 8 ಪಾರ್ಕ್‌ಗಳಲ್ಲಿ ವ್ಯಾಯಾಮ ಹಾಗೂ ಮಕ್ಕಳ ಆಟದ ಸಲಕರಣೆಯನ್ನು ಉದ್ಘಾಟಿಸುತ್ತಿದ್ದು, ಅತ್ಯಾಧುನಿಕ ಸಾಮಗ್ರಿಗಳನ್ನು ಚೈನಾದಿಂದ ತರಿಸಲಾಗಿದೆ. ಮಕ್ಕಳ ಆಟದ ಸಾಮಗ್ರಿಗಳನ್ನು ದೊಡ್ಡವರು ಬಳಸದೇ ಮಕ್ಕಳಿಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ ಆರ್.ಬಳ್ಳಾರಿ, ಸ್ಮಾರ್ಟ್‌ ಸಿಟಿ ಎಂ.ಡಿ. ರವೀಂದ್ರ ಮಲ್ಲಾಪುರ, ಬಿಜೆಪಿ ಮುಖಂಡರಾದ ಸಿದ್ದೇಶ್‌, ಜ್ಯೋತಿ ಸಿದ್ದೇಶ್‌, ಮೋಹನರಾವ್, ಶಿವರಾಜ್ ಪಾಟೀಲ್‌, ಮುಕುಂದಪ್ಪ, ಅಂದನೂರು ಮುಪ್ಪಣ್ಣ, ಎಂಜಿನಿಯರ್‌ಗಳಾದ ಸತೀಶ್, ಹೇಮಂತ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT