ಭಾನುವಾರ, ಸೆಪ್ಟೆಂಬರ್ 19, 2021
31 °C

ಸಂಚಾರಿ ಕುರುಬರಿಗೆ ಅರಣ್ಯ ಇಲಾಖೆಯಿಂದ ತೊಂದರೆ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಸಂಚಾರಿ ಕುರುಬರಿಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ತೊಂದರೆ ಆಗುತ್ತಿದೆ ಎಂದು ಕುರುಬ ಸಮಾಜದ ಮುಖಂಡ ಮುಕುಡಪ್ಪ ಆರೋಪಿಸಿದರು.

ನಗರದಲ್ಲಿ ಗುರುವಾರ ನಡೆದ ಕರ್ನಾಟಕ ರಾಜ್ಯ ಸಂಚಾರ ಕುರುಬರ ಸಂಘದ ಸಮಾಲೋಚನಾ ಸಭೆ ಬಳಿಕ ಮಾತನಾಡಿದರು.

ರಾಜ್ಯದಲ್ಲಿ 18 ಲಕ್ಷ ಸಂಚಾರಿ ಕುರಿಗಾಹಿಗಳಿದ್ದು, ಅವರು ಕಾಡುಮೇಡುಗಳಲ್ಲಿಯೇ ಟೆಂಟು ಹಾಕಿ ವಾಸ್ತವ್ಯ ಹೂಡುತ್ತಿದ್ದಾರೆ. ಆದರೆ, ಕೆಲವು ದಿನಗಳಿಂದ ಹೊಸಪೇಟೆ, ಉಜ್ಜಯಿನಿಯಲ್ಲಿ ಬೀಡುಬಿಟ್ಟಿದ್ದ ಅವರಿಂದ ಬೆಳೆಗಳಿಗೆ ಹಾನಿಯಾಗಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅವರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ದೂರಿದರು.

ಗಣಿಗಾರಿಕೆ ಮಾಡುತ್ತಿರುವುದರಿಂದ ಅರಣ್ಯ ನಾಶ ಆಗುತ್ತಿದೆ ಹೊರತು ಸಂಚಾರಿ ಕುರಿಗಾಹಿಗಳಿಂದಲ್ಲ. ಸಂಚಾರ ಮಾಡುವ ಕುರಿಗಾಹಿಗಳಿಗೆ ತೊಂದರೆ ಕೊಡಬಾರದು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆ ಹೊಂದಿರುವ ಕುರುಬ ಸಮಾಜದಲ್ಲಿ ಶೇ 30ರಷ್ಟು ಸಂಚಾರಿ ಕುರುಬರಿದ್ದಾರೆ. ಆದರೆ, ಅವರಿಗೆ ಸರ್ಕಾರದ ಯಾವ ಸೌಲಭ್ಯಗಳು ಸಿಗುತ್ತಿಲ್ಲ. ಕುರಿಗಳು ಸಾವು ಕಂಡರೂ ಪರಿಹಾರ ಸಿಗುತ್ತಿಲ್ಲ. ಯಾವ ಬ್ಯಾಂಕೂ ಸಾಲ ಕೊಡುವುದಿಲ್ಲ. ಅವರೆಲ್ಲರೂ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ರಾಜ್ಯದಲ್ಲಿ 1.50 ಕೋಟಿ ಕುರಿಗಳಿದ್ದು, ಅದರಲ್ಲಿ 1.20 ಕೋಟಿ ಕುರಿಗಳು ಸಂಚಾರಿ ಕುರುಬರ ಹತ್ತಿರ ಇವೆ. ಬೆಳಗಾವಿ, ಆಂಧ್ರ, ಮಹಾರಾಷ್ಟ್ರದಿಂದ ಬಂದಿದ್ದಾರೆ. ಸ್ಥಳೀಯರು ಅವರ ಟೆಂಟ್ ಕಿತ್ತುಹಾಕಿ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

‘ಸಂಚಾರಿ ಕುರಿಗಾಹಿಗಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ 2009ರಿಂದ ಹಲವು ಬಾರಿ ಕುರಿಗಾಹಿ ಸಮಾವೇಶ ಮಾಡಿದ್ದೆವು. ಪ್ರವರ್ಗ–1ರಲ್ಲಿ ಅವರನ್ನು ಸೇರಿಸುವಂತೆ ಒತ್ತಾಯಿಸಲಾಗಿತ್ತು. ಆದರೆ, ಇದುವರೆಗೂ ಸರ್ಕಾರ  ಗಮನಹರಿಸಿಲ್ಲ’ ಎಂದು ದೂರಿದರು.

ಗಿರೀಶ್, ಲಕ್ಕಪ್ಪ, ಮಾರ್ತಾಂಡಪ್ಪ, ದೀಪಕ್, ಸಿದ್ದರಾಮಪ್ಪ, ಜಯಮ್ಮ, ಮುರಾರಿ, ಸಿದ್ಧಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು