ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಡ್‌ ಖಾಲಿ ಇಲ್ಲ’ ಚಿಕಿತ್ಸೆ ಸಿಗದೇ ಪೌರಕಾರ್ಮಿಕ ಸಾವು

ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ರೋಗಿಯ ಸಂಬಂಧಿಕರ ಅಲೆದಾಟ
Last Updated 26 ಜುಲೈ 2020, 10:51 IST
ಅಕ್ಷರ ಗಾತ್ರ

ದಾವಣಗೆರೆ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಪೌರಕಾರ್ಮಿಕರೊಬ್ಬರಿಗೆ ಚಿಕಿತ್ಸೆ ಕೊಡಿಸಲು ಅವರ ಸಂಬಂಧಿಕರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂ ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾರೆ.

ಗಾಂಧಿನಗರದ ಕುಮಾರ್ (35) ಸಾವಿಗೀಡಾದವರು. ವಾರದ ಹಿಂದೆ ಇವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಚಿಕಿತ್ಸೆ ಪಡೆದು ಮನೆಯಲ್ಲಿ ಇದ್ದರು. ಆದರೆ ಶನಿವಾರ ಉಸಿರಾಟದ ಸಮಸ್ಯೆ ತೀವ್ರವಾದ ಹಿನ್ನೆಲೆಯಲ್ಲಿ ಒಂದಾದ ಮೇಲೆ ಒಂದರಂತೆ ನಗರದ ಮೂರು ಖಾಸಗಿ ಆಸ್ಪತ್ರೆಗೆ ಹೋಗಿದ್ದಾರೆ. ಆದರೆ, ‘ಬೆಡ್‌ ಖಾಲಿ ಇಲ್ಲ’ ಎಂದು ಆಸ್ಪತ್ರೆಯ ಸಿಬ್ಬಂದಿ ಉತ್ತರಿಸಿದ್ದಾರೆ.

ಕೊನೆಗೆ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಬಂದಾಗ ಅಲ್ಲಿಯೂ ಬೆಡ್‌ಗಳು ಖಾಲಿ ಇರಲಿಲ್ಲ. ಪೌರಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮೃತರ ಮಾವ ಉಚ್ಚೆಂಗೆಪ್ಪ ಅವರು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ದೂರವಾಣಿ ಮೂಲಕ ಮನವಿ ಮಾಡಿದ್ದಾಗ, ಜಿಲ್ಲಾಧಿಕಾರಿ ಬೆಡ್ ವ್ಯವಸ್ಥೆ ಮಾಡಿಸಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

‘ಮುಂಜಾನೆಯಿಂದಲೇ ಆಸ್ಪತ್ರೆಗೆ ಅಲೆದಾಡಿದರೂ ಯಾವ ಆಸ್ಪತ್ರೆಗಳಲ್ಲೂ ದಾಖಲಿಸಿಕೊಳ್ಳಲಿಲ್ಲ. ಆಸ್ಪತ್ರೆಯವರು ‘ಬೆಡ್ ಖಾಲಿ ಇಲ್ಲ’ ವೈದ್ಯರು ಇಲ್ಲ ಎಂದು ಹೇಳಿದರು. ಆಸ್ಪತ್ರೆಗೆ ಸೇರಿಸಿಕೊಂಡಿದ್ದರೆ ನಮ್ಮ ಮಾವ ಉಳಿಯುತ್ತಿದ್ದರು. ಕೋವಿಡ್–19 ಪರೀಕ್ಷೆಯ ಫಲಿತಾಂಶ ನೆಗಟಿವ್ ಬಂದಿದೆ’ ಎಂದು ಮೃತರ ಅಳಿಯ ನವೀನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮೃತರ ಸಂಬಂಧಿಕರ ಕಾಲಿಗೆ ಬೀಳಲು ಮುಂದಾದ ಡಿ.ಸಿ

ನಾನ್ ಕೋವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭಾನುವಾರ ಕೋವಿಡ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದರು.

ಈ ವೇಳೆ ಮೃತ ಕುಮಾರ್ ಅವರ ಮಾವ ಉಚ್ಚೆಂಗಪ್ಪ ಅವರು ‘ಹೇಗಾದರೂ ಮಾಡಿ ಅಳಿಯನನ್ನು ಉಳಿಸಿಕೊಡಿ’ ಜಿಲ್ಲಾಧಿಕಾರಿ ಅವರ ಕಾಲಿಗೆ ನಮಸ್ಕರಿಸಲು ಹೋದಾಗ ಸ್ವತಃ ಜಿಲ್ಲಾಧಿಕಾರಿಯವರೇ ಆ ವ್ಯಕ್ತಿಯ ಕಾಲಿಗೆ ಬೀಳಲು ಮುಂದಾದರು.

‘ನಿಮ್ಮ ಸಂಬಂಧಿಗೆ ಚಿಕಿತ್ಸೆ ಕೊಡಿಸುವ ಜವಾಬ್ದಾರಿ‌ ನಮ್ಮದು. ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ಆ ವ್ಯಕ್ತಿಗೆ ಜಿಲ್ಲಾಧಿಕಾರಿ ಧೈರ್ಯ ಹೇಳಿದ್ದರು. ಆದರೆ ಅವರು ಆಸ್ಪತ್ರೆಯಿಂದ ನಿರ್ಗಮಿಸಿದ ಒಂದು ಗಂಟೆಯ ನಂತರ ಆ ವ್ಯಕ್ತಿ ಮೃತಪಟ್ಟರು.

ರೋಗಿಗಳಿಗೆ ಚಿಕಿತ್ಸೆ ನೀಡದೇ ಸತಾಯಿಸಿದರೆ ಶಿಸ್ತು ಕ್ರಮ ಕೈಕೊಳ್ಳುವುದಾಗಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT