ದಾವಣಗೆರೆ: ‘ಛಾಯಾಗ್ರಹಣ ಒಂದು ವಿಶಿಷ್ಟ ವೃತ್ತಿ. ಅನೇಕರು ಇಂದಿಗೂ ಜೀವನಾಧಾರವಾಗಿ ಇದನ್ನು ನಡೆಸುತ್ತಿದ್ಧಾರೆ. ಕಷ್ಟ ಕಾಲದಲ್ಲೂ ಈ ವೃತ್ತಿಪರತೆ ಬಿಟ್ಟಿಲ್ಲ. ಜಿಲ್ಲಾಡಳಿತ ನಿಮ್ಮೊಂದಿಗೆ ಇದೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಜಿಲ್ಲಾ ಫೋಟೊಗ್ರಾಫರ್ಸ್ ಮತ್ತು ವಿಡಿಯೊಗ್ರಾಫರ್ಸ್ ಸಂಘ, ಫೋಟೊಗ್ರಾಫರ್ಸ್ ಯೂತ್ಸ್ ವೆಲ್‌ಫೇರ್ ಅಸೋಸಿಯೇಷನ್ ಆಶ್ರಯದಲ್ಲಿ ಇಲ್ಲಿನ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ 182ನೇ ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ‘ಛಾಯಾ ಸಂಭ್ರಮ 2021’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಎಲ್ಲರ ಜೀವನದ ಮಧುರ ಕ್ಷಣಗಳನ್ನು ಸೆರೆ ಹಿಡಿಯುವ ಛಾಯಾಗ್ರಾಹಕರು ನೆನಪಿನ ಖಜಾನೆಯ ನಿರ್ಮಾತೃಗಳು’ ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್.ಎ. ರವೀಂದ್ರನಾಥ್, ‘ರಾಮಾಯಣ, ಮಹಾಭಾರತ ಕಾಲದಿಂದಲೂ ಛಾಯಾಗ್ರಹಣ ಇದ್ದಿರಬಹುದು. ಕೋವಿಡ್‌ನಂತಹ ಸಂಕಷ್ಟ ಸಮಯದಲ್ಲೂ ಛಾಯಾಗ್ರಹಣ ಕೈಬಿಡದೆ ವೃತ್ತಿ ಗೌರವ ಕಾಪಾಡಿಕೊಂಡಿರುವುದು ಶ್ಲಾಘನೀಯ. ಮುಂದೆ ಒಳ್ಳೆಯ ದಿನಗಳು ಬರಲಿ’ ಎಂದು ಆಶಿಸಿದರು.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನೆ ಶಿವಕುಮಾರ್ ಮಾತನಾಡಿ, ‘ಛಾಯಾಗ್ರಾಹಕರ ಸಂಘಕ್ಕೆ ಧೂಡಾದಿಂದ ಸಿಎ ನಿವೇಶನ ನೀಡಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.
ಮೇಯರ್ ಎಸ್.ಟಿ. ವೀರೇಶ್, ‘ಛಾಯಾಗ್ರಾಹಕರು ಕೇಂದ್ರ ಸರ್ಕಾರ ಜಾರಿಗೊಳಿಸಿದ ಈ ಶ್ರಮ ಕಾರ್ಡ್ ಮಾಡಿಸಿ ಸೌಲಭ್ಯ ಪಡೆಯಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.
ದಾವಣಗೆರೆ ಫೋಟೊಗ್ರಾಫರ್ಸ್ ಮತ್ತು ವಿಡಿಯೊಗ್ರಾಫರ್ಸ್ ಸಂಘದ ಜಿಲ್ಲಾಧ್ಯಕ್ಷ ವಿಜಯ್ ಜಾಧವ್, ‘ಛಾಯಾಗ್ರಾಹಕರು ಸಂಕಷ್ಟದಲ್ಲಿದ್ದು, ಅವರಿಗೆ ಕಡಿಮೆ ದರದಲ್ಲಿ ನಿವೇಶನ ಒದಗಿಸಬೇಕು. 5 ಎಕರೆ ಜಾಗದಲ್ಲಿ ಛಾಯಾಗ್ರಾಹಕರ ಕಾಲೊನಿ ನಿರ್ಮಿಸಬೇಕು’ ಎಂದು ಶಾಸಕರಲ್ಲಿ ಮನವಿ ಮಾಡಿದರು.
ಫೋಟೊಗ್ರಾಫರ್ಸ್ ಯೂತ್ಸ್ ವೆಲ್‌ಫೇರ್‌ಅಸೋಸಿಯೇಷನ್ ಅಧ್ಯಕ್ಷ ಎಚ್.ಕೆ.ಸಿ. ರಾಜು, ಮಾಜಿ ಅಧ್ಯಕ್ಷ ಏಕನಾಥ್, ಕಾರ್ಯದರ್ಶಿ ದುಗ್ಗಪ್ಪ ಎಸ್. ಕಡೇಮನಿ, ದಾವಣಗೆರೆ ಛಾಯಾಗ್ರಾಹಕರ ಸಹಕಾರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.