ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಶೂಟರ್‌ಗಳು ಹೆಚ್ಚು ಪದಕ ಗೆಲ್ಲುವರು

ಅರ್ಜುನ ಪ್ರಶಸ್ತಿ ವಿಜೇತ ಶೂಟರ್‌ ಮೊರಾದ್‌ ಅಲಿ ಖಾನ್‌ ಅನಿಸಿಕೆ
Last Updated 27 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಏಪ್ರಿಲ್‌ 4ರಿಂದ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಶೂಟರ್‌ಗಳು ನಿರೀಕ್ಷೆಗಿಂತಲೂ ಹೆಚ್ಚು ಪದಕಗಳನ್ನು ಗೆಲ್ಲಲಿದ್ದಾರೆ’ ಎಂದು ಭಾರತದ ಹಿರಿಯ ಶೂಟರ್‌ ಮೊರಾದ್‌ ಅಲಿ ಖಾನ್‌ ಅಭಿಪ್ರಾಯಪಟ್ಟಿದ್ದಾರೆ.

‘ಈ ಬಾರಿ ಕೂಟದಲ್ಲಿ ಭಾಗವಹಿಸುತ್ತಿರುವವರ ಪೈಕಿ ಹಲವು ಮಂದಿ ಯುವ ಶೂಟರ್‌ಗಳಿದ್ದಾರೆ. ಅವರು ವಿಶ್ವಕಪ್‌ನಲ್ಲಿ ಅಮೋಘ ಸಾಮರ್ಥ್ಯ ತೋರುತ್ತಿದ್ದು ಕಾಮನ್‌ವೆಲ್ತ್‌ನಲ್ಲೂ ವಿಶ್ವದ ಬಲಿಷ್ಠ ಶೂಟರ್‌ಗಳ ಸವಾಲು ಮೀರಿನಿಲ್ಲಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಖಾನ್‌ ಅವರು 2002ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದಿದ್ದ ಕಾಮನ್‌ ವೆಲ್ತ್‌ ಕೂಟದ ಟ್ರ್ಯಾಪ್‌ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದ್ದರು.

‘ಭಾರತದಲ್ಲಿ ಈಗ ಶೂಟಿಂಗ್‌ಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಹೀಗಾಗಿ ಯುವಕರು ಈ ಕ್ರೀಡೆಯತ್ತ ಒಲವು ತೋರುತ್ತಿದ್ದಾರೆ. ಕಾಮನ್‌ವೆಲ್ತ್‌ ಕೂಟದಲ್ಲಿ ನಮ್ಮ ಶೂಟರ್‌ಗಳು ಇದುವರೆಗೂ 118 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 56 ಚಿನ್ನ, 40 ಬೆಳ್ಳಿ ಮತ್ತು 22 ಕಂಚು ಸೇರಿವೆ. ಇದು ನಮ್ಮವರ ಸಾಮರ್ಥ್ಯಕ್ಕೆ ನಿದರ್ಶನ’ ಎಂದಿದ್ದಾರೆ.

ಭಾರತ ತಂಡ ಆಸ್ಟ್ರೇಲಿಯಾ ಸವಾಲು ಮೀರಿನಿಲ್ಲಬಲ್ಲದು: ‘ಭಾರತ ಪುರು ಷರ ಹಾಕಿ ತಂಡ ಕಾಮನ್‌ವೆಲ್ತ್‌ ಕ್ರೀಡಾ ಕೂಟದಲ್ಲಿ ಆಸ್ಟ್ರೇಲಿಯಾದ ಸವಾಲು ಮೀರಿ ನಿಲ್ಲುವ ಸಾಮರ್ಥ್ಯ ಹೊಂದಿದೆ’ ಎಂದು ಹಿರಿಯ ಆಟಗಾರ ಜಾಫರ್‌ ಇಕ್ಬಾಲ್‌ ಹೇಳಿದ್ದಾರೆ.

‘ಹಾಕಿ ಇಂಡಿಯಾ ಲೀಗ್‌ (ಎಚ್‌ ಐಎಲ್‌) ಶುರುವಾದ ನಂತರ ಭಾರತದ ಆಟಗಾರರ ಸಾಮರ್ಥ್ಯ ವೃದ್ಧಿಸಿದೆ. ಈ ಲೀಗ್‌ನಲ್ಲಿ ಆಸ್ಟ್ರೇಲಿಯಾದ ಆಟಗಾರರೂ ವಿವಿಧ ತಂಡಗಳಲ್ಲಿ ಆಡುತ್ತಾರೆ. ಅವರು ಪಂದ್ಯಕ್ಕೆ ಹೇಗೆ ಸಜ್ಜಾಗುತ್ತಾರೆ, ಯಾವ ಬಗೆಯ ತಂತ್ರ ಗಳನ್ನು ಹೆಣೆಯುತ್ತಾರೆ, ಒತ್ತಡವನ್ನು ಹೇಗೆ ಮೀರಿ ನಿಲ್ಲುತ್ತಾರೆ ಎಂಬುದನ್ನು ನಮ್ಮ ಆಟಗಾರರು ಬಹಳ ಹತ್ತಿರದಿಂದ ನೋಡಿ ಕಲಿತಿದ್ದಾರೆ. ಜೊತೆಗೆ ಅವುಗಳನ್ನು ಮೈಗೂಡಿಸಿಕೊಂಡಿದ್ದಾರೆ. ಇದರಿಂದ ನಮ್ಮವರ ಮನೋ ಬಲ ಹೆಚ್ಚಿದೆ’ ಎಂದು ಅವರು ತಿಳಿಸಿದ್ದಾರೆ.

ಭಾರತ ತಂಡದವರು 2010ರ ಕಾಮನ್‌ವೆಲ್ತ್‌ ಕೂಟದ ಫೈನಲ್‌ನಲ್ಲಿ 0–8 ಗೋಲುಗಳಿಂದಆಸ್ಟ್ರೇಲಿಯಾಕ್ಕೆ ಮಣಿದಿದ್ದರು. 2014ರ ಕೂಟದ ಪ್ರಶಸ್ತಿ ಸುತ್ತಿನಲ್ಲೂ ಭಾರತ 0–4 ಗೋಲುಗಳಿಂದ ಕಾಂಗರೂಗಳ ನಾಡಿನ ತಂಡದ ಎದುರು ಸೋತಿತ್ತು.

‘ಆಸ್ಟ್ರೇಲಿಯಾ ವಿಶ್ವ ಶ್ರೇಷ್ಠ ತಂಡ. ತವರಿನ ಅಂಗಳದಲ್ಲಿ ಆ ತಂಡವನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಆ ತಂಡದ ವಿರುದ್ಧ ಗೆಲ್ಲುವ ಸಾಮರ್ಥ್ಯ ನಮ್ಮವರಲ್ಲಿದೆ. ನಮ್ಮ ತಂಡ ಸಮತೋಲನದಿಂದ ಕೂಡಿದೆ. ಮಹಿಳಾ ತಂಡಕ್ಕೂ ಪದಕ ಜಯಿಸುವ ಉತ್ತಮ ಅವಕಾಶ ಇದೆ. ಈ ಬಾರಿ ನಮ್ಮ ದೇಶದ ಸ್ಪರ್ಧಿಗಳು 70ಕ್ಕೂ ಹೆಚ್ಚು ಪದಕಗಳನ್ನು ಗೆಲ್ಲುತ್ತಾರೆ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

*


ಅಭ್ಯಾಸದ ಸಿಂಧುಗೆ ಗಾಯ 
ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತದ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಮಂಗಳವಾರ ಗಾಯಗೊಂಡಿದ್ದಾರೆ.

‘ಹೈದರಾಬಾದ್‌ನ ಗೋ‍ಪಿಚಂದ್‌ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುವ ವೇಳೆ ಸಿಂಧು ಬಲ ಪಾದ ಉಳುಕಿತ್ತು. ತಕ್ಷಣವೇ ಎಂ.ಆರ್‌.ಐ.ಸ್ಕ್ಯಾನಿಂಗ್‌ ಮಾಡಿಸಿದ್ದು ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಸೂಚಿಸಿದ್ದಾರೆ’ ಎಂದು ಸಿಂಧು ಅವರ ತಂದೆ ಪಿ.ವಿ.ರಮಣ ಹೇಳಿದ್ದಾರೆ.

‘ಒಂದು ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಹೇಳಿದ್ದಾರೆ. ಅನಂತರ ಮತ್ತೆ ಸಿಂಧು ಅಭ್ಯಾಸ ನಡೆಸುತ್ತಾಳೆ. ಕಾಮನ್‌ವೆಲ್ತ್‌ ಕೂಟದ ಆರಂಭಕ್ಕೆ ಇನ್ನೂ ಸಾಕಷ್ಟು ಸಮಯ ಇದೆ. ಅಷ್ಟರೊಳಗೆ ಎಲ್ಲವೂ ಸರಿಹೋಗಲಿದೆ’ ಎಂದಿದ್ದಾರೆ.

ಮಹಿಳೆಯರ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಸಿಂಧು ಮೂರನೇ ಸ್ಥಾನ ಹೊಂದಿದ್ದು ಈ ಬಾರಿ ಚಿನ್ನ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿದ್ದಾರೆ. 2014ರ ಕಾಮನ್‌ವೆಲ್ತ್‌ ಕೂಟದಲ್ಲಿ ಅವರು ಕಂಚಿನ ಸಾಧನೆ ಮಾಡಿದ್ದರು. ರಿಯೊ ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದ ಹೆಗ್ಗಳಿಕೆ ಅವರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT