ನ್ಯಾಮತಿ (ದಾವಣಗೆರೆ ಜಿಲ್ಲೆ): ಮರಳು ಗಣಿಗಾರಿಕೆ ಸಂಬಂಧ ತಾಲ್ಲೂಕಿನ ಚೀಲೂರು ಕಡದಕಟ್ಟೆ ಹಾಗೂ ಮರಿಗೊಂಡನಹಳ್ಳಿ ಗ್ರಾಮಸ್ಥರ ನಡುವೆ ಬುಧವಾರ ಘರ್ಷಣೆ ನಡೆದಿದೆ. ಘಟನೆಯನ್ನು ವೀಕ್ಷಿಸುತ್ತಿದ್ದ ವ್ಯಕ್ತಿಯೊಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದ ಪರಿಣಾಮ ಮೃತಪಟ್ಟಿದ್ದು, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಚೀಲೂರು ಕಡದಕಟ್ಟೆ ಗ್ರಾಮದ ಶಿವರಾಜ ಟಿ. (33) ಮೃತ ವ್ಯಕ್ತಿ. ಭರತ್ ಆರ್. ಎಂಬುವವರು ಇದೇ ವೇಳೆ ಗಾಯಗೊಂಡಿದ್ದು, ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೀಲೂರು ಕಡದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಿಗೊಂಡನಹಳ್ಳಿ ಗ್ರಾಮದ ಬಳಿ ಹರಿದಿರುವ ತುಂಗಭದ್ರಾ ನದಿ ದಡದಲ್ಲಿ ಮರಳು ತೆಗೆಯುವುದಕ್ಕೆ ಸಂಬಂಧಿಸಿದಂತೆ ಎರಡೂ ಗ್ರಾಮಗಳ ಜನರ ಮಧ್ಯೆ ವೈಷಮ್ಯ ಇತ್ತು. ಇದೇ ವಿಷಯಕ್ಕಾಗಿ ಬುಧವಾರ ಮಧ್ಯಾಹ್ನ ಗ್ರಾಮಸ್ಥರ ನಡುವೆ ಗಲಭೆಯಾಗಿದೆ.
ಚೀಲೂರು ಕಡದಕಟ್ಟೆ ಗ್ರಾಮದ ಕೆಲವರು, ‘ಮರಿಗೊಂಡನಹಳ್ಳಿ ಬಳಿ ಮರಳು ಗಣಿಗಾರಿಕೆ ಬೇಡ. ಮರಳು ಮಾರಾಟ ಮಾಡಿದ ಹಣದಲ್ಲಿ ನಮ್ಮ ಗ್ರಾಮದ ದೇವಸ್ಥಾನದ ಅಭಿವೃದ್ಧಿಗಾಗಿ ಪಾಲು ನೀಡಬೇಕು’ ಎಂದು ಒತ್ತಾಯಿಸಿ ಮರುಳು ಗಣಿಗಾರಿಕೆ ತಡೆದು ರಸ್ತೆತಡೆ ನಡೆಸಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದು ಗಲಭೆ ಆರಂಭವಾಗಿದೆ.
ಇದೇ ವೇಳೆ ಹೊಲದಿಂದ ಮನೆಯತ್ತ ಮರಳುತ್ತಿದ್ದ ಶಿವರಾಜ ಹಾಗೂ ಭರತ್ ಅವರಿಗೆ ಗಲಭೆಕೋರರು ಚಾಕು ಇರಿದಿದ್ದಾರೆ ಎಂದು ಮೃತ ವ್ಯಕ್ತಿಯ ತಾಯಿ ತಿಳಿಸಿದ್ದಾರೆ.
‘ಚೀಲೂರು ಕಡದಕಟ್ಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ ಅವರ ಪುತ್ರ ಅಭಿಷೇಕ ಮತ್ತಿತರರು ಕೊಲೆ ಮಾಡಿದ್ದಾರೆ. ಅವರನ್ನು ಬಂಧಿಸಬೇಕು’ ಎಂದು ಗ್ರಾಮದ ಕೆಲವರು ಆಗ್ರಹಿಸಿದ್ದಾರೆ.
‘ಚಾಕು ಇರಿದವವರ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅವರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡೂ ಗ್ರಾಮಗಳಲ್ಲಿ ಬಿಗುವಿನ ವಾತಾವರಣ ಇದ್ದು, ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.