ಬಿಜಿನೆಸ್‌ನಲ್ಲಿ ನೈತಿಕತೆ, ಪ್ರಾಮಾಣಿಕತೆ ಇರಲಿ

ಬುಧವಾರ, ಏಪ್ರಿಲ್ 24, 2019
32 °C
‘ಆಕ್ಟಗಾನ್‌–2019’ರಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಕಣ್ಣನ್‌

ಬಿಜಿನೆಸ್‌ನಲ್ಲಿ ನೈತಿಕತೆ, ಪ್ರಾಮಾಣಿಕತೆ ಇರಲಿ

Published:
Updated:
Prajavani

ದಾವಣಗೆರೆ: ‘ಬಿಜಿನೆಸ್‌ನಲ್ಲಿ ಹಣ ಗಳಿಸುವುದು ಮುಖ್ಯ ಉದ್ದೇಶವಾಗಿದ್ದರೂ ಮೋಸದ ದಾರಿ ಹಿಡಿಯಬಾರದು. ಮಾರುಕಟ್ಟೆ ಅಧಿಕಾರಿಗಳಾಗುವವರು ನೈತಿಕತೆ ಹಾಗೂ ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಪಿ. ಕಣ್ಣನ್‌ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ಪ್ರಜಾವಾಣಿ’ ಮಾಧ್ಯಮ ಸಹಯೋಗದಲ್ಲಿ ಬಾಪೂಜಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಮತ್ತು ಬಾಪೂಜಿ ಅಕಾಡೆಮಿ ಆಫ್‌ ಮ್ಯಾನೇಜ್‌ಮೆಂಟ್‌ ಆ್ಯಂಡ್‌ ರೀಸರ್ಚ್‌ ಆಶ್ರಯದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ಎರಡು ದಿನಗಳ ‘ಆಕ್ಟಗಾನ್‌–2019’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇಂದು ಎಂಬಿಎ ಪದವೀಧರರಿಗೆ ಉದ್ಯೋಗಾವಕಾಶ ಕಡಿಮೆಯಾಗುತ್ತಿದೆ ಎಂಬುದು ಕಟ್ಟುಕತೆ. ಜನಸಂಖ್ಯೆಯಲ್ಲಿ ಎರಡನೇ ದೊಡ್ಡ ರಾಷ್ಟ್ರವಾದ ಭಾರತ ಬಿಜಿನೆಸ್‌ ಮಾಡಲು ಪ್ರಶಕ್ತ ಸ್ಥಳವಾಗಿದೆ. ಚೀನಾಕ್ಕೆ ಹೋಲಿಸಿದರೆ ಇಲ್ಲಿ ಹೆಚ್ಚು ಜನ ವ್ಯಾಪಾರ–ವಹಿವಾಟಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಚತುರ ಎಂಬಿಎ ಪದವೀಧರರು ಸುಲಭವಾಗಿ ಉದ್ಯೋಗ ಪಡೆದು ಗೌರವಯುತ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಅವಕಾಶಗಳಿವೆ’ ಎಂದು ಅಭಿಪ್ರಾಯಪಟ್ಟರು.

ಕಾರ್ಪೊರೇಟ್‌, ನೌಕರರು ಹಾಗೂ ಗ್ರಾಹಕರು ಎಂಬ ಮೂರು ವಲಯಗಳಲ್ಲಿ ಬಿಜಿನೆಸ್‌ ಅನ್ನು ವಿಂಗಡಿಸಬಹುದು. ಜಗತ್ತಿನಲ್ಲಿ ಬಹುತೇಕ ಎಲ್ಲವೂ ಇವೆ. ಹೀಗಾಗಿ ಬಂಡವಾಳ ಹೂಡುವವರು ವಿಭಿನ್ನವಾದ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಬೇಕಾಗಿದೆ. ಇದಕ್ಕೆ ಸಾಕಷ್ಟು ಸಂಶೋಧನೆ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.

‘ನೌಕರರ ವಲಯದಲ್ಲಿ ಸಂಶೋಧನೆ ಮತ್ತು ಯೋಜನೆ ವಿಭಾಗ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡು ಉತ್ಪನ್ನಗಳನ್ನು ನೀಡದಿದ್ದರೆ ಉದ್ಯಮ ನಷ್ಟ ಅನುಭವಿಸುತ್ತದೆ. ಸಂಶೋಧನೆ ಹಾಗೂ ಯೋಜನಾ ವಿಷಯದಲ್ಲಿ ಪ್ರಾವೀಣ್ಯತೆ ಪಡೆದವರಿಗೆ ವಿಪುಲ ಅವಕಾಶಗಳಿವೆ. ಉದ್ಯೋಗ ಸಿಗದಿದ್ದರೂ ಬ್ಯಾಂಕಿನಿಂದ ಸಾಲ ಪಡೆದು ಸ್ವಂತ ಸಣ್ಣ ಉದ್ಯಮವನ್ನು ಸ್ಥಾಪಿಸಬಹುದು’ ಎಂದು ಸಲಹೆ ನೀಡಿದರು.

‘ಉತ್ಪಾದನಾ ವಿಭಾಗದಲ್ಲಿ ಗುಣಮಟ್ಟ ಹಾಗೂ ಸಮಯ ಪರಿಪಾಲನೆ ಬಹಳ ಮುಖ್ಯ. ಮಾರ್ಕೆಟಿಂಗ್‌ ವಿಭಾಗದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಸಂವಹನ ಕೌಶಲ ಹೊಂದಿರಬೇಕು. ತಮ್ಮ ಉತ್ಪನ್ನ ಮಾರಾಟ ಮಾಡಬೇಕು ಎಂಬ ಏಕೈಕ ಉದ್ದೇಶದಿಂದ ಸುಳ್ಳು ಭರವಸೆಗಳನ್ನು ನೀಡಲಾಗುತ್ತಿದೆ. ಆದರೆ, ಗ್ರಾಹಕರು ನಮ್ಮ ಸಹೋದರ–ಸಹೋದರಿಯರೇ ಆಗಿದ್ದಾರೆ. ಹೀಗಾಗಿ ನೈತಿಕತೆಯಿಂದ ಮಾರ್ಕೆಟಿಂಗ್‌ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಇಡೀ ಕಂಪನಿಯ ವಹಿವಾಟು ಹಣಕಾಸು ವಿಭಾಗದ ಮೇಲೆ ನಿಂತಿರುತ್ತದೆ. ಹೆಚ್ಚು ಆದಾಯ ಬರುವಂತೆ ಮಾಡುವುದರ ಜೊತೆಗೆ, ಹಣ ಸೋರಿಕೆಯಾಗದಂತೆ ಎಚ್ಚರ ವಹಿಸುವ ಜವಾಬ್ದಾರಿ ಈ ವಿಭಾಗದ ಮೇಲಿದೆ’ ಎಂದರು.

ಗ್ರಾಹಕನೇ ಬಿಜಿನೆಸ್‌ನ ಆತ್ಮ. ಗ್ರಾಹಕರು ಇಲ್ಲದಿದ್ದರೆ ಬಿಜಿನೆಸ್‌ ನಡೆಸಲು ಸಾಧ್ಯವಿಲ್ಲ. ಗ್ರಾಹಕರನ್ನು ತಲುಪಲು ಹೋಲ್‌ಸೇಲ್‌ ಹಾಗೂ ರಿಟೇಲ್‌ ಎಂಬ ಎರಡು ಮಾರ್ಗಗಳಿವೆ. ನಮ್ಮ ಉತ್ಪನ್ನಗಳನ್ನು ಗ್ರಾಹಕರು ಖರೀದಿಸುವಂತೆ ಮಾಡಲು ವ್ಯಾಪಾರಿಗಳ ಮನವೊಲಿಸುವ ಕೌಶಲವೂ ಇರಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಬಾಪೂಜಿ ಬಿ–ಸ್ಕೂಲ್‌ನ ಅಧ್ಯಕ್ಷ ಅಥಣಿ ವೀರಣ್ಣ, ‘ಇಂದು ಅಣಬೆಗಳಂತೆ ಕಾಲೇಜುಗಳು ಹುಟ್ಟಿಕೊಳ್ಳುತ್ತಿರುವುದರಿಂದ ಎಂ.ಬಿ.ಎ ಪದವೀಧರರಿಗೆ ಉದ್ಯೋಗ ಅವಕಾಶಗಳು ಕಡಿಮೆಯಾದಂತೆ ಕಂಡುಬರುತ್ತಿದೆ. ಆದರೆ, ಉತ್ತಮ ಎಂಬಿಎ ಪದವೀಧರರಿಗೆ ಅವಕಾಶ ಇದ್ದೇ ಇದೆ’ ಎಂದು ಪ್ರತಿಪಾದಿಸಿದರು.

‘ಸುಮಾರು ಹತ್ತು ವರ್ಷಗಳ ಕಾಲ ಅಪಾರ ಪ್ರಮಾಣದಲ್ಲಿ ಹಣ ಖರ್ಚು ಮಾಡಿ ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕಿಂತ ಕಡಿಮೆ ಖರ್ಚಿನಲ್ಲಿ ಬಿಕಾಂ ಮಾಡಿ ಎಂ.ಬಿ.ಎ, ಸಿ.ಎ ಅಥವಾ ಸಿಎಸ್‌ನಂತಹ ಪ್ರೀಮಿಯಂ ಕೋರ್ಸ್‌ಗಳನ್ನು ಮಾಡಿ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ’ ಎಂದು ಹೇಳಿದರು.

ಬಾಪೂಜಿ ಬಿ–ಸ್ಕೂಲ್‌ನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಂದ ಎಚ್‌.ವಿ. ಸ್ವಾಗತಿಸಿದರು. ಪ್ರೊ. ಇಂಚರ ಮೂರ್ತಿ ಪ್ರಾರ್ಥಿಸಿದರು. ಪ್ರೊ. ಸರೋಜಾ ನಿರೂಪಿಸಿದರು. ಡಾ. ನವೀನ್‌ ನಾಗರಾಜ್‌ ವಂದಿಸಿದರು.

ಬಿಜಿನೆಸ್‌ನ ಮೂರು ಮೂಲತತ್ವ

ಬುದ್ಧಿವಂತಿಕೆ, ವಿಶ್ವಾಸಾರ್ಹತೆ ಹಾಗೂ ಗುಣಮಟ್ಟ ಇವು ಮೂರು ಬಿಜಿನೆಸ್‌ನ ಮೂರು ಮೂಲ ತತ್ವಗಳಾಗಿವೆ ಎಂದು ಪ್ರೊ. ಕಣ್ಣನ್‌ ಅಭಿಪ್ರಾಯಪಟ್ಟರು.

ಬುದ್ಧಿವಂತಿಕೆಯು ಅನುಭವದಿಂದ ಬರುತ್ತದೆ. ಯಾರೂ ಹುಟ್ಟುವಾಗಲೇ ಅನುಭವಿ ಆಗಿರುವುದಿಲ್ಲ. ಸಂದರ್ಶನಕ್ಕೆ ಹೋದಾಗ ಅನುಭವವನ್ನು ಕೇಳುತ್ತಾರೆ. ಹೀಗಾಗಿ ಕನಿಷ್ಠ 100 ಯಶಸ್ವಿ ಬಿಜೆನೆಸ್‌ಮನ್‌ಗಳ ಜೀವನಚರಿತ್ರೆಯನ್ನು ಓದಬೇಕು. ಸಾಧಕರ ಅನುಭವಗಳೂ ನಿಮ್ಮ ಅನುಭವ ಆಗಿರಬೇಕು. ಅದೇ ರೀತಿ ಗುಣಮಟ್ಟದ ಜೊತೆಗೆ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಮಾನವಸಂಪನ್ಮೂಲ ಸದ್ಬಳಕೆಯಾಗಲಿ

ಇಂದು ಬಳಕೆಯಾಗ ಹಾಗೂ ದುರ್ಬಳಕೆಯಾಗುತ್ತಿರುವ ಮಾನವಸಂಪನ್ಮೂಲಗಳೇ ಹೆಚ್ಚಾಗಿರುವುದು ದೇಶದ ದುರಂತ. ಬಿಜಿನೆಸ್‌ನಲ್ಲಿ ಮಾನವಸಂಪನ್ಮೂಲ ಅತಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ಪ್ರೊ. ಕಣ್ಣನ್‌ ಅಭಿಪ್ರಾಯಪಟ್ಟರು.

‘ನೈಸರ್ಗಿಕ ಸಂಪನ್ಮೂಲ ನಮ್ಮ ಕೈಯಲ್ಲಿ ಇರುವುದಿಲ್ಲ. ಆದರೆ, ಮಾನವಸಂಪನ್ಮೂಲಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಕೆಲಸ ಮಾಡಿಸದಿದ್ದರೆ ಕಂಪನಿ ನಷ್ಟದ ಹಾದಿ ಹಿಡಿಯುತ್ತದೆ. ಅದೇ ರೀತಿ ಕಂಪನಿಯ ನೌಕರರು ಸಂತೃಪ್ತಿಯಿಂದ ಇರುವಂತೆ ನೋಡಿಕೊಳ್ಳುವಲ್ಲಿ ಆರ್ಗನೈಜೇಷನ್‌ ಬಿಹೇವಿಯರ್‌ ಮ್ಯಾನೇಜ್‌ಮೆಂಟ್‌ ವಿಭಾಗದ ಜವಾಬ್ದಾರಿಯೂ ಬಹಳಷ್ಟು ಇರುತ್ತದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !