ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ-ಬಿ.ಸಿ. ನಾಗೇಶ್

ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್
Last Updated 15 ಜೂನ್ 2022, 7:02 IST
ಅಕ್ಷರ ಗಾತ್ರ

ದಾವಣಗೆರೆ: ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಬೇಕು. ಅಲ್ಲಿನ ಸ್ಥಿತಿಗತಿಯನ್ನು ಅವಲೋಕಿಸಬೇಕು. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಏನು ಬೇಕು ಎಂಬುದನ್ನು ತಿಳಿದುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಷ್ಟು ಮಕ್ಕಳು ಶಾಲೆ ಬಿಟ್ಟಿದ್ದಾರೆ? ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳು ಎಷ್ಟು ಮಂದಿ ಸರ್ಕಾರಿ ಶಾಲೆಗೆ ಬಂದಿದ್ದಾರೆ. ಸರ್ಕಾರಿ ಶಾಲೆಯಿಂದ ಎಷ್ಟು ಮಕ್ಕಳು ಖಾಸಗಿ ಶಾಲೆಗೆ ಹೋಗಿದ್ದಾರೆ ಎಂಬ ಮಾಹಿತಿ ಇಲ್ಲ. ಕಚೇರಿಯಲ್ಲಿ ಕುಳಿತು ಮೀಟಿಂಗ್‌ ಮಾಡಿದರೆ ಆಗದು. ಶಾಲೆಗಳಿಗೆ ಭೇಟಿ ನೀಡಬೇಕು ಎಂದು ಮಾಹಿತಿ ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

5ನೇ ತರಗತಿಯಲ್ಲಿ ಇರುವ ಮಕ್ಕಳ ಸಂಖ್ಯೆಗೂ 6ನೇ ತರಗತಿಯಲ್ಲಿರುವ ಮಕ್ಕಳ ಸಂಖ್ಯೆಗೂ ಸುಮಾರು ನಾಲ್ಕು ಸಾವಿರ ವ್ಯತ್ಯಾಸ ಇದೆ. ಇಷ್ಟು ಅಂತರ ಹೇಗಾಯಿತು ಎಂದು ಪರಿಶೀಲಿಸಿ ಮಾಹಿತಿ ನೀಡಿ ಎಂದು ಸೂಚಿಸಿದರು.

ನೂರಕ್ಕಿಂತ ಕಡಿಮೆ ಮಕ್ಕಳಿರುವ ಅನುದಾನಿತ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ. ಯಾಖೆಂದರೆ ಅಲ್ಲಿನ ಶಿಕ್ಷಕರ ವೇತನ ಸಹಿತ ವಿವಿಧ ವೆಚ್ಚಗಳನ್ನು ಭರಿಸುವುದೇ ಕಷ್ಟವಾಗಿರುವಾಗ ಅಗತ್ಯಕ್ಕಿಂತ ಕಡಿಮೆ ಬೋಧಕರು, ಬೋಧಕೇತರರು ಇರುತ್ತಾರೆ. ಇವುಗಳನ್ನು ಕೂಡ ಪರಿಶೀಲಿಸಬೇಕು ಎಂದು ಹೇಳಿದರು.

ಪ್ರಗತಿಪರಿಶೀಲನಾ ಸಭೆಯಲ್ಲಿ ಒಪ್ಪಿಸಲು ನಮಗಾಗಿ ಅಂಕಿ ಅಂಶಗಳನ್ನು ಸಿದ್ಧಪಡಿಸಿ ಕೊಟ್ಟರೆ ಪ್ರಯೋಜನವಿಲ್ಲ. ಶಾಲೆಗಳಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಶುಲ್ಕ ಕಟ್ಟಿದವರು ಹಾಗೂ ಪರೀಕ್ಷೆ ಬರೆದವರ ಸಂಖ್ಯೆ ನಡುವೆಯೂ ಸಾಕಷ್ಟು ವ್ಯತ್ಯಾಸವಿದೆ. ಇದರ ಬಗ್ಗೆಯೂ ಮಾಹಿತಿ ಇರಬೇಕು ಎಂದು ತಿಳಿಸಿದರು.

ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ಸಿಇಒ ಡಾ. ಎ.ಚನ್ನಪ್ಪ, ಸಚಿವರ ಆಪ್ತ ಕಾರ್ಯದರ್ಶಿ ಎ.ಆರ್. ರವಿ, ಚಿತ್ರದುರ್ಗ ಜಂಟಿ ನಿರ್ದೇಶಕ ಎಚ್. ಮಂಜುನಾಥ್, ಡಿಡಿಪಿಐಗಳಾದ ರವಿಶಂಕರ ರೆಡ್ಡಿ, ಜಿ.ಆರ್. ತಿಪ್ಪೇಶಪ್ಪ, ಲಿಂಗರಾಜ್, ಎರಡೂ ಜಿಲ್ಲೆಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT