ಮಗುಚಿದ ಲಾರಿ: ತೈಲದಲ್ಲಿ ಮಿಂದೆದ್ದ ಜನ

7
ಹೆದ್ದಾರಿ ಬದಿ ಜನ ಜಾತ್ರೆ, ತೈಲಾಭಿಷೇಕ * ಸ್ಥಳೀಯರನ್ನು ಚದುರಿಸಲು ಪೊಲೀಸರ ಹರಸಾಹಸ

ಮಗುಚಿದ ಲಾರಿ: ತೈಲದಲ್ಲಿ ಮಿಂದೆದ್ದ ಜನ

Published:
Updated:
Deccan Herald

ದಾವಣಗೆರೆ: ಅವರೆಲ್ಲಾ ಹೆದ್ದಾರಿಯತ್ತ ಬಿರುಸಿನ ಹೆಜ್ಜೆ ಹಾಕುತ್ತಿದ್ದರು. ಪಾತ್ರೆ–ಪಗಡ, ಕೊಡಪಾನಗಳನ್ನು ತಂದು ಎಣ್ಣೆಯನ್ನು ಮೊಗೆ ಮೊಗೆದು ತುಂಬಿಕೊಂಡರು. ನೋಡ ನೋಡುತ್ತಿದ್ದಂತೆ ಜನ ಜಾತ್ರೆಯೇ ಸೇರಿತು.

ರಾಷ್ಟ್ರೀಯ ಹೆದ್ದಾರಿ 4ರ‌ಲ್ಲಿ ಬುಧವಾರ ಮುಂಜಾನೆ ಸಾಗುತ್ತಿದ್ದವರಿಗೆ ನಗರದ ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆ ಬಳಿ ಕಂಡ ದೃಶ್ಯಗಳಿವು. ಪೈಪೋಟಿಗೆ ಬಿದ್ದವರಂತೆ ಎಣ್ಣೆ ತುಂಬಿಕೊಳ್ಳುತ್ತಿದ್ದ ಜನರು ಪ್ರಯಾಣಿಕರಿಗೆ ಅಚ್ಚರಿ ಮೂಡಿಸಿದರು. ಮಕ್ಕಳು, ಮಹಿಳೆಯರು, ವೃದ್ಧರೂ ಎಣ್ಣೆ ತುಂಬಿ ಒಯ್ಯಲು ಮುಗಿಬಿದ್ದರು.

ನಿತ್ಯದ ಕೆಲಸಗಳಲ್ಲಿ ಮಗ್ನವಾಗಿದ್ದ ಜನರಿಗೆ ಹೆದ್ದಾರಿಯಲ್ಲಿ ಟ್ಯಾಂಕರ್‌ ಲಾರಿ ಅಪಘಾತವಾದ ಸುದ್ದಿ ಬಂತು. ಇದನ್ನು ಕೇಳಿ ಹೆದ್ದಾರಿಯತ್ತ ಹೊರಟವರಿಗೆ ಖಾದ್ಯದ ಎಣ್ಣೆ ತುಂಬಿಕೊಂಡು ಬರುತ್ತಿದ್ದ ಜನ ಎದುರಾದರು. ಅವರೆಲ್ಲಾ ಮತ್ತೆ ಮನೆಯತ್ತ ದೌಡಾಯಿಸಿ ಕೈಗೆ ಸಿಕ್ಕ ಪ್ಲಾಸ್ಟಿಕ್‌ ಕ್ಯಾನ್‌, ಸ್ಟೀಲ್‌ ಪಾತ್ರೆಗಳನ್ನು ತಂದು ಹತ್ತಾರು ಲೀಟರ್‌ ಖಾದ್ಯ ತೈಲ ತುಂಬಿಕೊಂಡು ಮನೆಗೆ ಒಯ್ದರು.

ಟ್ಯಾಂಕರ್‌ನ ಮುಚ್ಚಳಕ್ಕೆ ರಬ್ಬರ್‌ ಪೈಪ್‌ಗಳನ್ನು ತೂರಿಸಿ, ಎಣ್ಣೆಯನ್ನು ಹೀರಿಕೊಂಡು ಕ್ಯಾನ್‌ಗಳಿಗೆ ತುಂಬಿಸಿಕೊಂಡರು. ಈ ಮಧ್ಯೆ ಉಂಟಾದ ನೂಕಾಟದಿಂದಾಗಿ ಒಬ್ಬರ ಮೇಲೊಬ್ಬರು ಬಿದ್ದರು. ಎಣ್ಣೆಯನ್ನೆಲ್ಲಾ ಮೈಮೇಲೆ ಚೆಲ್ಲಿಕೊಂಡರು. ಒಂದಷ್ಟು ಮಂದಿ ಜಾರಿ ಬಿದ್ದರು. ಮತ್ತೆ ಕೆಲವರ ಮೇಲಂತೂ ತೈಲಾಭಿಷೇಕವೇ ಆಯಿತು. ಗುಂಪಿನ ಮಧ್ಯೆ ನುಸಳಿ ಲಾರಿ ಬಳಿಗೆ ಹೋಗಲಾಗದವರು, ನೆಲದಲ್ಲಿ ಚೆಲ್ಲಿದ ಎಣ್ಣೆಯನ್ನೇ ಬೊಗಸೆಯಲ್ಲಿ ಮೊಗೆದು ಪಾತ್ರೆಗಳಿಗೆ ತುಂಬಿಸಿಕೊಂಡರು.

ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದ ಲಾರಿ ಬಳಿಯೇ ಕೆಲ ಹೊತ್ತಿನಲ್ಲಿ ನೂರಾರು ಮೋಟರ್‌ ಬೈಕ್‌ಗಳು, ಆಟೊಗಳಲ್ಲಿ ಬಂದು ನೂರಾರು ಜನ ಸೇರಿದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಜನರನ್ನು ಚದುರಿಸಲು ಹರಸಾಹಸ ಪಟ್ಟರು. ಕೊನೆಗೆ ಲಾಠಿ ಬೀಸಿ, ಜನರನ್ನು ಬೆದರಿಸಿ ಓಡಿಸಿದರು.

‘ಕ್ರೇನ್‌ ತಂದು, ಲಾರಿಯನ್ನು ಸರಿಯಾಗಿ ನಿಲ್ಲಿಸಲಾಗಿದೆ. ಇನ್ನೂ ಅರ್ಧ ಟ್ಯಾಂಕರ್‌ನಷ್ಟು ಎಣ್ಣೆ ಇದೆ. ವಾರಸುದಾರರು ಇನ್ನೂ ಬಾರದ ಕಾರಣ ಭದ್ರತೆಗಾಗಿ ಇಬ್ಬರು ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ’ ಎಂದು ವಿದ್ಯಾನಗರ ಠಾಣೆ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ಗಾಯಾಳುಗಳು ಆಸ್ಪತ್ರೆಗೆ: ಲಾರಿ ಅಪಘಾತದಲ್ಲಿ ಗಾಯಗೊಂಡ ಚಾಲಕ ಹಾಗೂ ಕ್ಲೀನರ್‌ನನ್ನು ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಗೊಂಡಿರುವ ಲಾರಿ ಬೆಂಗಳೂರಿನಿಂದ ಹುಬ್ಬಳಿ ಕಡೆಗೆ ಸಾಗುತ್ತಿತ್ತು ಎಂದು ತಿಳಿದು ಬಂದಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !