ತೈಲ ಉತ್ಪನ್ನ ದರ: ‘ಮನ್ ಕೀ ಬಾತ್’ ಹೊರಬರಲಿ– ಡಿ.ಬಸವರಾಜ ಒತ್ತಾಯ

7

ತೈಲ ಉತ್ಪನ್ನ ದರ: ‘ಮನ್ ಕೀ ಬಾತ್’ ಹೊರಬರಲಿ– ಡಿ.ಬಸವರಾಜ ಒತ್ತಾಯ

Published:
Updated:
Deccan Herald

ಹರಪನಹಳ್ಳಿ: ‘ತೈಲ ಉತ್ಪನ್ನಗಳ ದರ ಅಧಿಕಗೊಂಡು ಜನಜೀವನಕ್ಕೆ ತೊಂದರೆ ಆಗಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪೆಟ್ರೋಲ್, ಡಿಸೇಲ್ ಉತ್ಪನ್ನಗಳ ಕುರಿತು ಮಾತನಾಡಲಿ’ ಎಂದು ಕಾಂಗ್ರೆಸ್ ಮುಖಂಡ ಡಿ. ಬಸವರಾಜ ಒತ್ತಾಯಿಸಿದರು.

ಕಾಂಗ್ರೆಸ್ ಕರೆ ನೀಡಿರುವ ಭಾರತ ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಮನಮೋಹನ್‌ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 130-140 ಡಾಲರ್ ಇತ್ತು. ಆದರೂ ಅವರು ಪೆಟ್ರೋಲ್, ಡಿಸೇಲ್ ದರ ₹ 60 ದಾಟದಂತೆ ನೋಡಿಕೊಂಡಿದ್ದರು. ಸದ್ಯ ಕಚ್ಚಾ ತೈಲಗಳ ಒಂದು ಬ್ಯಾರಲ್ ದರ ₹ 70 ಇದ್ದರೂ ದರ ಇಳಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿದರು.

ಪ್ರಧಾನಿ ಮೋದಿ ಆಡಳಿತದಲ್ಲಿ ಆಗಿರುವ ರೇಫಲ್ ಹಗರಣ ಶತಮಾನ ಕಂಡ ಅತ್ಯಂತ ದೊಡ್ಡ ಹಗರಣ. ಬೋಫರ್ಸ್, 2ಜಿ ಹಗರಣವನ್ನು ಯುಪಿಎ ಸರ್ಕಾರ ಜೆಪಿಸಿ ತನಿಖೆಗೆ ನೀಡಿದಂತೆ ಬಿಜೆಪಿ ಸರ್ಕಾರ ಕೂಡ ಜೆಪಿಸಿ ತನಿಖೆಗೆ ಈ ಹಗರಣ ನೀಡಬೇಕು ಎಂದು ಆಗ್ರಹಿಸಿದರು.

‘ಬೆಳಿಗ್ಗೆಯಿಂದ ಮಧ್ಯಾಹ್ನ ಮೂರು ಗಂಟೆಯವರಿಗೆ ಬಂದ್ ಆಚರಣೆ ನಡೆಯಲಿದೆ. ಜನಸಾಮಾನ್ಯರಿಗೆ ತೊಂದರೆ ಆಗದಂತೆ ಶಾಂತಿಯುತ ಬಂದ್ ಆಚರಿಸಲಾಗುವುದು. ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಗುಲಾಬಿ ಹೂವು ನೀಡಿ ಸ್ವಯಂಪ್ರೇರಣೆಯಿಂದ ಭಾಗವಹಿಸಿ ಎಂದು ಮನವರಿಕೆ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಸಿಪಿಐ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ಎಚ್.ಎಂ. ಸಂತೋಷ್ ಮಾತನಾಡಿ, ‘ಕೇಂದ್ರ ಸರ್ಕಾರದ ದುರಾಡಳಿತದಿಂದ ಬಡವರು, ಕಾರ್ಮಿಕರು, ಜನಸಾಮಾನ್ಯರಿಗೆ ತೀವ್ರ ತೊಂದರೆ ಆಗಿದೆ. ಸೋಮವಾರ ನಡೆಯುವ ಬಂದ್‌ಗೆ ಸಿಪಿಐ ಹಾಗೂ ಅಂಗ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಲಿವೆ’ ಎಂದು ಹೇಳಿದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಕಾಂಗ್ರೆಸ್ ಹಿರಿಯ ಮುಖಂಡ ಟಿ.ಎಚ್.ಎಂ. ವಿರೂಪಾಕ್ಷಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ. ಪರಶುರಾಮಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ವಿ. ಅಂಜಿನಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪೋಮ್ಯಾನಾಯ್ಕ, ವಕೀಲರಾದ ವೆಂಕಟೇಶ್, ಡಿ.ಅಬ್ದುಲ್ ರೇಹಮಾನಸಾಬ್, ಮುಖಂಡರಾದ ಬಾಣದ ಅಂಜಿನಪ್ಪ, ತೆಲಿಗಿ ಉಮಾಕಾಂತ, ವಾಗೀಶ, ಜೀಸಾನ್, ಜಾಕೀರ್‌ ಹುಸೇನ್, ಇರ್ಷಾದ, ಶಿವಕುಮಾರ, ಅಬ್ದುಲ್ ಜಬ್ಬಾರ್, ಗಾಜಿಖಾನ್, ಮಂಜ್ಯನಾಯ್ಕ, ಸಿ. ಪರಶುರಾಮ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !