ಶನಿವಾರ, ಸೆಪ್ಟೆಂಬರ್ 25, 2021
25 °C

ರೈಲ್ವೆ ಪ್ಲಾಟ್‌ಫಾರ್ಂ ಕೆಳಗೆ ಪ್ರಾಚೀನ ಬಾವಿ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರದ ರೈಲುನಿಲ್ದಾಣದ ಎರಡನೇ ಪ್ಲಾಟ್‌ಫಾರ್ಂ ಕೆಳಗಡೆ ಗುರುವಾರ ಸುಮಾರು 100 ಅಡಿ ಆಳದ ಪ್ರಾಚೀನ ಬಾವಿ ಪತ್ತೆಯಾಗಿದ್ದು, ನಾಗರಿಕರಲ್ಲಿ ಅಚ್ಚರಿ ಮೂಡಿಸಿದೆ.

ಚಿಕ್ಕಜಾಜೂರು–ಹುಬ್ಬಳ್ಳಿ ನಡುವೆ ಜೋಡಿ ಮಾರ್ಗ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಸಲುವಾಗಿ ರೈಲು ನಿಲ್ದಾಣದಲ್ಲಿ ಇನ್ನೊಂದು ರೈಲು ಮಾರ್ಗ ನಿರ್ಮಿಸಲು ಜೆಸಿಬಿಯಿಂದ ಪ್ಲಾಟ್‌ಫಾರ್ಂ ಅಗೆದಾಗ ಆಳದ ಹಳೆಯ ಬಾವಿ ಇರುವುದು ಬೆಳಕಿಗೆ ಬಂದಿದೆ. ಬಾವಿಯಲ್ಲಿ ನೀರು ಇರಲಿಲ್ಲ. ಬಾವಿಯ ಮೇಲ್ಭಾಗದಲ್ಲಿ ವಿದ್ಯುತ್‌ ಕಂಬಗಳನ್ನು ಇಟ್ಟು ಮುಚ್ಚಿ ಅದರ ಮೇಲೆ ಪ್ಲಾಟ್‌ಫಾರ್ಂ ನಿರ್ಮಿಸಲಾಗಿತ್ತು.

ಬಾವಿಯನ್ನು ಕಲ್ಲುಗಳಿಂದ ನಿರ್ಮಿಸಲಾಗಿದೆ. ಕೆಳಗೆ ಇಳಿಯಲು ನಾಲ್ಕು ಕಡೆ ಕಲ್ಲುಗಳನ್ನು ಜೋಡಿಸಿಡಲಾಗಿದೆ. ಈ ಸುದ್ದಿ ಹರಡುತ್ತಿದ್ದಂತೆ ಸುತ್ತಲಿನ ಜನ ಬಂದಿ ಬಾವಿಯನ್ನು ವೀಕ್ಷಿಸಿದರು. ಬಳಿಕ ರೈಲ್ವೆ ಇಲಾಖೆ ಸಿಬ್ಬಂದಿ ಬಾವಿಯತ್ತ ಸುಳಿಯಲು ಅವಕಾಶ ನೀಡಲಿಲ್ಲ.

ಜೋಡಿ ಮಾರ್ಗ ನಿರ್ಮಿಸಲು ಜೆಸಿಬಿಯಲ್ಲಿ ಪ್ಲಾಟ್‌ಫಾರ್ಂ ಅಗೆದಾಗ ಬೆಳಿಗ್ಗೆ 11 ಗಂಟೆ ಹೊತ್ತಿಗೆ ಬಾವಿ ಇರುವುದು ಕಂಡು ಬಂತು. ಜೋಡಿ ಮಾರ್ಗ ನಿರ್ಮಿಸಲು ಈ ಜಾಗದಲ್ಲಿ ನಾಲ್ಕನೇ ಟ್ರ್ಯಾಕ್‌ ನಿರ್ಮಿಸಬೇಕಾಗಿದೆ. ಎರಡನೇ ಪ್ಲಾಟ್‌ಫಾರ್ಂ ಪಕ್ಕದಲ್ಲೇ ಬರಲಿದೆ. ಈ ಜಾಗದಲ್ಲಿ ಟ್ರ್ಯಾಕ್‌ ನಿರ್ಮಿಸಿದಾಗ ಭಾರವಾದ ರೈಲಿನ ಎಂಜಿನ್‌ ಹಾಗೂ ಗೂಡ್ಸ್‌ ರೈಲು ಸಂಚರಿಸುತ್ತವೆ. ಹೀಗಾಗಿ ಬಾವಿಯನ್ನು ಮುಚ್ಚುವುದು ಅನಿವಾರ್ಯವಾಗಲಿದೆ. ಹೆಚ್ಚಿನ ಭಾರ ಬೀಳುವುದಿಲ್ಲ ಎಂಬ ಕಾರಣಕ್ಕೆ ಸುಮಾರು ನಲವತ್ತು ವರ್ಷಗಳ ಹಿಂದೆ ಬಾವಿಯ ಮೇಲ್ಭಾಗವನ್ನಷ್ಟೇ ಮುಚ್ಚಿ ಪ್ಲಾಟ್‌ಫಾರ್ಂ ನಿರ್ಮಿಸಿರಬೇಕು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.

ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಪ್ರಹ್ಲಾದ್‌, ‘ಇದು ಐತಿಹಾಸಿಕ ಹಿನ್ನೆಲೆ ಇರುವ ಬಾವಿಯಂತೆ ಕಂಡು ಬರುತ್ತಿಲ್ಲ. ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಿರುವ ಸಾಮಾನ್ಯ ಬಾವಿಯಾಗಿರಬೇಕು. ಪುಷ್ಕರಣಿ ಮಾದರಿಯಲ್ಲಿ ಇದು ಇಲ್ಲ’ ಎಂದು ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು