ಭಾನುವಾರ, ಸೆಪ್ಟೆಂಬರ್ 26, 2021
22 °C
ಕ್ವಿಂಟಲ್‌ಗೆ ₹ 15,000 ಬೆಲೆ, ಮಾರುಕಟ್ಟೆಯಲ್ಲಿ ಕಡಿಮೆಯಾದ ಆವಕ

ದಾವಣಗೆರೆ: ಗಗನಕ್ಕೇರಿದ ಈರುಳ್ಳಿ ದರ, ಹರಾಜಿಗೂ ಪೈಪೋಟಿ

ಚಂದ್ರಶೇಖರ ಆರ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಈರುಳ್ಳಿ ದರ ಗಗನಕ್ಕೇರಿದೆ. ಮಾರುಕಟ್ಟೆಯಲ್ಲೀಗ ಈರುಳ್ಳಿ ಖರೀದಿಗೂ ಪೈಪೋಟಿ ಶುರುವಾಗಿದೆ. 

ಆವಕ ಕಡಿಮೆಯಾದ ಕಾರಣ ಈರುಳ್ಳಿಗೆ ದಾಖಲೆಯ ಬೆಲೆ ಬಂದಿದೆ. ಇದರಿಂದ ಮಾರುಕಟ್ಟೆಯಲ್ಲಿ ದಿನವೂ ಹರಾಜು ಪ್ರಕ್ರಿಯೆಗೆ ವ್ಯಾಪಾರಿಗಳು ಮುಗಿಬೀಳುತ್ತಿದ್ದಾರೆ. ಕೆಲವೇ ನಿಮಿಷಗಳಲ್ಲಿ ಈರುಳ್ಳಿ ಹರಾಜು ಮುಗಿಯುತ್ತಿದ್ದು, ಜವಾರಿ, ದೊಡ್ಡ, ಚಿಕ್ಕ ಸೇರಿ ಎಲ್ಲ ರೀತಿಯ ಬೆಳೆಯೂ ಹರಾಜಾಗುತ್ತಿದೆ.

ಶುಕ್ರವಾರ ಸ್ವಲ್ಪ ಉತ್ತಮವಾದ ಈರುಳ್ಳಿಗೆ ಕ್ವಿಂಟಲ್‌ಗೆ ₹ 15,000 ದರ ಇತ್ತು. ಗುರುವಾರವಷ್ಟೇ ₹ 12,000 ದರ ಇತ್ತು. ದಿನಕ್ಕೆ 2ರಿಂದ 3 ಸಾವಿರ ಪಾಕೆಟ್ ಬರುತ್ತಿದ್ದ ಈರುಳ್ಳಿ ಸದ್ಯ 100 ಪಾಕೆಟ್‌ ಮಾತ್ರ ಬರುತ್ತಿದೆ. ಜಿಲ್ಲೆಯಲ್ಲಿ ಬೆಳೆ ಇಲ್ಲದ ಕಾರಣ ಗದಗ ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಿಂದ ಮಾತ್ರ ಸರಕು ಬರುತ್ತಿದೆ. ಇದರಿಂದ ಕೆಲವೇ ಕ್ಷಣಗಳಲ್ಲಿ ವ್ಯಾಪಾರಿಗಳು ಈರುಳ್ಳಿ ಖರೀದಿಸುತ್ತಿದ್ದಾರೆ. ಶುಕ್ರವಾರ 240 ಕ್ವಿಂಟಲ್ ಈರುಳ್ಳಿ ಆವಕವಾಗಿದ್ದು, ಗುರುವಾರ 200 ಕ್ವಿಂಟಲ್‌ ಆವಕವಾಗಿತ್ತು. 

ಹಿಂದೆ ಎಸೆಯುತ್ತಿದ್ದ ಈರುಳ್ಳಿಯೂ ಇಂದು ಕ್ವಿಂಟಲ್‌ಗೆ ₹ 2000 ರಂತೆ ಮಾರಾಟವಾಗುತ್ತಿದೆ. ಉತ್ತಮ, ಮಧ್ಯಮ, ಚಿಕ್ಕ ಗಾತ್ರದಂತೆ ಈರುಳ್ಳಿಯನ್ನು ವಿಂಗಡಿಸಿ ಮಾರಾಟ ಮಾಡಲಾಗುತ್ತಿದೆ. 

ಚೀಲದಲ್ಲಿನ ಸರಕನ್ನು ಸುರಿಯುತ್ತಿದ್ದಂತೆ ದಲ್ಲಾಳಿಗಳು ಒಂದು ದರ ಕೂಗುತ್ತಾರೆ. ಕೆಲವರು ಹೆಚ್ಚಿನ ದರ ನಿಗದಿಯಾಗುವವರೆಗೂ ಹರಾಜು ಕೂಗುತ್ತಲೇ ಇರುತ್ತಾರೆ. ಕೆಲವರು ಕೂಗುವಾಗಲೇ ಹೆಚ್ಚು ಕೂಗು ಎನ್ನುವುದು ಸಾಮಾನ್ಯ. ಮಾರುಕಟ್ಟೆಯಲ್ಲಿ ಎಲ್ಲಿಯೂ ಕಡಿಮೆ ಹರಾಜು ಕೂಗುವುದು ಕಾಣುತ್ತಿಲ್ಲ. ಕ್ವಿಂಟಲ್‌ಗೆ ₹ 2000, ₹ 3000, ₹ 6000, ₹ 8000, ₹ 10,000 ಹೀಗೆ ಸರಕಿನ ಗುಣಮಟ್ಟ ಆಧರಿಸಿ ಹರಾಜಿನಲ್ಲಿ ಬೆಲೆ ನಿಗದಿಯಾಗುತ್ತಿದೆ. ವ್ಯಾಪಾರಿಗಳು ನಿಗದಿಪಡಿಸಿದ ದರದಲ್ಲಿ ವ್ಯಾಪಾರಿಗಳು ತೂಕ ಮಾಡಿಸಿಕೊಂಡು ಹೋಗುವುದು ಸಾಮಾನ್ಯವಾಗಿದೆ.

ಬೆಳಿಗ್ಗೆಯೇ ಕೆಲ ನಿಮಿಷಗಳಲ್ಲಿ ಹರಾಜು ಪ್ರಕ್ರಿಯೆ ನಡೆದು ಈರುಳ್ಳಿ ವ್ಯಾಪಾರಿಗಳ ಗಾಡಿ ಏರುತ್ತಿದೆ. ಗ್ರಾಹಕರು ಚೌಕಾಸಿ ಮಾಡಿದರೆ ವ್ಯಾಪಾರಿಗಳು ಬೇಕಾದರೆ ತೆಗೆದುಕೊಳ್ಳಿ ಇಲ್ಲ ಅಂದರೆ ಇಲ್ಲ ಎನ್ನುವುದು ಎಲ್ಲೆಡೆ ಕಂಡು ಬರುತ್ತಿದೆ. ಇಂತಹ ಸರಕಿಗೆ ಕಡಿಮೆ ಕೊಡಲು ಸಾಧ್ಯವಿಲ್ಲ ಎಂದು ಚೌಕಾಸಿ ಮಾಡುವವರಿಗೆ ಕಡ್ಡಿ ಮುರಿದಂತೆ ಹೇಳುತ್ತಿದ್ದಾರೆ.

‘ಈರುಳ್ಳಿ ಆವಕ ಕಡಿಮೆಯಾದ ಕಾರಣ ಈರುಳ್ಳಿಗೆ ಬಂಗಾರದ ಬೆಲೆ ಬಂದಿದೆ. ಹರಾಜಿನಲ್ಲಿ ಸರಕು ತೆಗೆದುಕೊಂಡವರು ಹೆಚ್ಚಿನ ಬೆಲೆ ಮಾರುತ್ತಾರೆ. ಇವತ್ತು ಇರುವ ದರ ನಾಳೆ ಇರದು. ಸದ್ಯ 100 ಚೀಲ ಮಾತ್ರ ಬರುತ್ತಿದೆ. ನಾಳೆ ಇದೂ ಕಡಿಮೆಯಾದರೂ ಆಗಬಹುದು’ ಎಂದು ದಲ್ಲಾಳಿ ಎನ್.ಕೆ. ಶಂಭುಲಿಂಗಪ್ಪ ಹೇಳಿದರು.

‘ಮಾರುಕಟ್ಟೆಯಲ್ಲಿ ಖರೀದಿಸಿ ತಂದ ದರಕ್ಕೆ ಮಾರಲು ಆಗುವುದಿಲ್ಲ. ಕ್ವಿಂಟಲ್‌ಗೆ ₹ 15,000 ಇದ್ದರೆ ನಮಗೆ ₹ 17,000 ಬೀಳುತ್ತದೆ. ಎಲ್ಲ ಖರ್ಚು ಕಳೆದು ನಮ್ಮ ಲಾಭ ನೋಡಿ ಮಾರಾಟ ಮಾಡಬೇಕು. ನಮಗ್ಗೆ ಲಾಭ ಅಷ್ಟಕ್ಕಷ್ಟೆ. ಉತ್ತಮವಾದುದನ್ನು ಮಾರಾಟ ಮಾಡಿ ಉಳಿದ, ಸಾಧಾರಣ ಈರುಳ್ಳಿಯನ್ನು ಒಂದು ದರಕ್ಕೆ ಮಾರಾಟ ಮಾಡಿ ಸರಿದೂಗಿಸಿಕೊಳ್ಳುತ್ತಿದ್ದೇವೆ’ ಎಂದು ವ್ಯಾಪಾರಿ ಜಗದೀಶ ಹೇಳಿದರು. 

‘ಈ ಬಾರಿ ಈರುಳ್ಳಿ ಬೆಳೆಯಲು ಬಹಳ ಕಷ್ಟಪಟ್ಟೆವು. ಈರುಳ್ಳಿ ಕೀಳುವಾಗ ಮಳೆ ಬಿಡುವು ನೀಡಲಿಲ್ಲ. ಹೀಗಾಗಿ ಅರ್ಧಕ್ಕಿಂತ ಹೆಚ್ಚು ಈರುಳ್ಳಿ ಕೊಳೆತುಹೋಯಿತು. ಇನ್ನಷ್ಟು ಕೊಳೆತು ಹೋಗುತ್ತದೆ ಎಂದು ಬಹುತೇಕ ರೈತರು ಕಡಿಮೆ ಬೆಲೆಗೆ ಮಾರಿದರು. ಈಗ ಬೆಳೆಗಾರರಲ್ಲಿ ಈರುಳ್ಳಿ ಇಲ್ಲ. ಆದರೆ ಬೆಲೆ ಮುಗಿಲುಮುಟ್ಟಿದೆ’ ಎಂದು ಸುರಹೊನ್ನೆ  ರೈತ ಬಸವರಾಜ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು