ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯಕ್ಕಿಲ್ಲಿ ಬೀಗ...ಬಯಲಿಗೆ ಓಡು ಬೇಗ: ಇದು ದಾವಣೆಗೆರೆಯ ದುಸ್ಥಿತಿ

Last Updated 30 ಸೆಪ್ಟೆಂಬರ್ 2019, 16:29 IST
ಅಕ್ಷರ ಗಾತ್ರ

ದಾವಣಗೆರೆ: ಜವಳಿ ಉದ್ಯಮದ ಕೇಂದ್ರ ಎಂದೇ ಕರೆಸಿಕೊಳ್ಳುವ ದಾವಣೆಗೆರೆಯಲ್ಲಿಕೊಳೆಗೇರಿಗಳು ಹಾಗೂ ಗಡಿಯಂಚಿನ ಜನ ನಿತ್ಯಕರ್ಮ ಮುಗಿಸಲು ಪೊದೆ, ಪಾಳು ಹೊಂಡ, ಹೊಲ–ಗದ್ದೆ, ಮೈದಾನಪ್ರದೇಶ ಹಾಗೂ ಚರಂಡಿಯನ್ನೇ ಅವಲಂಬಿಸಿದ್ದಾರೆ. ಬೆಳಗಾಗುವ ಮುಂಚೆ ಇಲ್ಲವೇ ಕತ್ತಲಾದ ನಂತರದಲ್ಲಿ ಚೊಂಬುಗಳನ್ನು ಹಿಡಿದು ತೆರಳುವ ದೃಶ್ಯಗಳು ಸಾಮಾನ್ಯವಾಗಿವೆ.

ಬಯಲು ಬಹಿರ್ದೆಸೆಗೆ ತೆರಳುವ ಹೆಣ್ಣಮಕ್ಕಳ ಪರಿಸ್ಥಿತಿಯಂತೂ ಹೇಳತೀರದು. ಯಾರಿಗೂ ಕಾಣದ ಜಾಗಕ್ಕೆ ತೆರಳಿದರೂ, ಅಕಸ್ಮಾತಾಗಿ ಪುರುಷರು ಯಾರಾದರೂ ಆ ದಾರಿಯಲ್ಲಿ ಬಂದರೆ ಮುಜುಗರಕ್ಕೆ ಒಳಗಾಗುವ ಸ್ಥಿತಿ. ಅಲ್ಲಿಂದ ಎದ್ದು ಮತ್ತೆ ಸುರಕ್ಷಿತ ಸ್ಥಳವನ್ನು ಹುಡುಕಿ ಸಾಗಬೇಕು. ಹೀಗೆ ತೆರಳಿದಾಗ ಅಪಾಯಕ್ಕೆ ತುತ್ತಾಗಿ, ತಪ್ಪಿಸಿಕೊಂಡು ಬಂದ ಪ್ರಸಂಗಗಳಿವೆ. ತಮ್ಮ ಆತ್ಮರಕ್ಷಣೆಗಾಗಿ ಹತಾರಗಳನ್ನು ಜತೆಗೆ ಕೊಂಡೊಯ್ಯುವ ಮಹಿಳೆಯರೂ ಇದ್ದಾರೆ. ಇಲ್ಲಿನ ಮಂಡಕ್ಕಿಭಟ್ಟಿ ಪ್ರದೇಶದಲ್ಲಿ ಮಹಿಳೆಯರ ಮೇಲೆ ಬಿಸಿ ಬೂದಿ ಎರಚಿದ್ದು ಇದೆ. ಗರ್ಭಿಣಿಯರು, ಬಾಣಂತಿಯರಿಗಂತೂ ಮನೆಯ ಹಿತ್ತಲು ಇಲ್ಲವೇ ರಾಜಕಾಲುವೆಗಳೇ ಗತಿ.

ಇದು ‘ಬಯಲು ಶೌಚಾಲಯ ಮುಕ್ತ’ ಜಿಲ್ಲೆಗಳ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿರುವ, ‘ಸ್ಮಾರ್ಟ್‌ ಸಿಟಿ’ಯತ್ತ ದಾಪುಗಾಲಿಡುತ್ತಿರುವ ದೇವನಗರಿಯ ಚಿತ್ರಣ. ನಗರದ ಕೊಳೆಗೇರಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಮುದಾಯ ಶೌಚಾಲಯ ಹಾಗೂ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಕೊರತೆಯಿಂದಾಗಿ ಗಬ್ಬೆದ್ದು ನಾರುತ್ತಿವೆ. ಕೊಂಡಜ್ಜಿ ರಸ್ತೆ, ಮುದ್ದಾಭೋವಿ ಕಾಲೊನಿ, ಭಾರತ್‌ ಕಾಲೊನಿಗಳಲ್ಲಿ ಸಮುದಾಯ ಶೌಚಾಲಯವಿದೆ. ಆದರೆ ನೀರಿನ ವ್ಯವಸ್ಥೆ ಇಲ್ಲ. ಮನೆಯಿಂದಲೇ ನೀರು ಕೊಂಡೊಯ್ಯಬೇಕು. ಕೊರಚರ ಕಾಲೊನಿಯಲ್ಲಿ ರಾಜಕಾಲುವೆ ನಿರ್ಮಾಣಕ್ಕಾಗಿ ಮತ್ತು ಬಸಾಪುರದಲ್ಲಿ ನಿರ್ವಹಣೆ ಕೊರತೆಯಿಂದಾಗಿ ಒಡೆದು ಹಾಕಲಾಗಿದೆ. ಎಚ್‌.ಕೆ. ನಗರ ಹಾಗೂ ಶೇಖರಪ್ಪ ನಗರದ ‘ಬಿ’ ಬ್ಲಾಕ್‌ನಲ್ಲಿ ಹೊಸದಾಗಿ ಸಮುದಾಯ ಶೌಚಾಲಯ ನಿರ್ಮಿಸಿದ್ದರೂ ಸಾರ್ವಜನಿಕರ ಉಪಯೋಗಕ್ಕೆ ನೀಡದೆ ಬೀಗ ಜಡಿಯಲಾಗಿದೆ.

ಶೌಚಾಲಯವೀಗ ಜಿಮ್‌: ‘ಇಲ್ಲಿನ ಹೊಸ ಖಬರ್‌ಸ್ತಾನ್‌ ರಸ್ತೆಯಲ್ಲಿರುವ ಶಿವಾನಗರದವರಿಗೆ ಶಿವರಾಮ್‌ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಮನೆಗಳನ್ನು ಕಟ್ಟಿಸಿಕೊಟ್ಟಿದ್ದರು. ಜತೆಗೆ ಸಮುದಾಯ ಶೌಚಾಲಯವನ್ನೂ ಕಟ್ಟಿಸಿದ್ದರು. ಆದರೆ, ಸ್ಥಳೀಯರೊಬ್ಬರು ಶೌಚಾಲಯವನ್ನು ಜಿಮ್‌ ಮಾಡಿದ್ದಾರೆ. ರಸ್ತೆ ಅಗಲೀಕರಣಕ್ಕಾಗಿ ಮನೆಗಳ ಮುಂದಿನ ಶೌಚಾಲಯಗಳನ್ನು ಒಡೆದುಹಾಕಲಾಗಿದ್ದು, ಬಹಳಷ್ಟು ಜನ ಬಯಲಿಗೆ ತೆರಳುವಂತಾಗಿದೆ’ ಎಂದು ದೂರುತ್ತಾರೆ ಸ್ಲಂ ಕರ್ನಾಟಕ ಜನಾಂದೋಲನ ಜಿಲ್ಲಾ ಅಧ್ಯಕ್ಷ ಎಂ. ಶಬ್ಬೀರ್‌ ಸಾಬ್‌.

ತಾರತಮ್ಯವೇಕೆ?: ನಗರದ ಎಪಿಎಂಸಿ ಆವರಣ, ಕೆ.ಆರ್‌. ಮಾರುಕಟ್ಟೆ, ಸರ್ಕಾರಿ ಹಾಗೂ ಖಾಸಗಿ ಬಸ್‌ ನಿಲ್ದಾಣ, ಜಗಳೂರು ಬಸ್‌ ನಿಲ್ದಾಣ, ಅಶೋಕ ಟಾಕೀಸ್‌ ರಸ್ತೆ, ಹೈಸ್ಕೂಲ್‌ ಮೈದಾನ, ಎವಿಕೆ ಕಾಲೇಜು ರಸ್ತೆ, ರೈಲು ನಿಲ್ದಾಣದ ಆವರಣ ಮುಂತಾದೆಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳಿವೆಯಾದರೂ ಸ್ವಚ್ಛತೆ ಇಲ್ಲ. ಕುಂದುವಾಡ ಕೆರೆ ಬಳಿಯ ಶೌಚಾಲಯಕ್ಕೆ ಬೀಗ ಹಾಕಿದ್ದು, ಕೆರೆ ವೀಕ್ಷಣೆಗೆ ತೆರಳುವವರು ಶೌಚಕ್ಕೆ ಎಲ್ಲಿ ಹೋಗಬೇಕು? ಸಾರ್ವಜನಿಕ ಶೌಚಾಲಯಗಳಲ್ಲಿ ಪುರುಷರಿಗಾದರೆ ಮೂತ್ರ ವಿಸರ್ಜನೆ ಉಚಿತ. ಹೆಣ್ಣುಮಕ್ಕಳಿಗಾದರೆ ಮೂತ್ರ ಅಥವಾ ಮಲ ವಿಸರ್ಜನೆ ಯಾವುದಕ್ಕೆ ಹೋದರೂ ₹5 ಕಡ್ಡಾಯ. ಇದು ಯಾವ ನ್ಯಾಯ ಎಂದು ಪ್ರಶ್ನಿಸುತ್ತಾರೆ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಕಾರ್ಯದರ್ಶಿ ರೇಣುಕಾ ಎಲ್ಲಮ್ಮ ಜಿ. ಹಾವೇರಿ.

ಮನೆಗೆ ನೆಂಟರು ಬರುವುದಿಲ್ಲ: ‘ತ್ರಿಶೂಲ್‌ ಟಾಕೀಸ್‌ ಜಾಗದ ಕೊಳೆಗೇರಿಯಲ್ಲಿದ್ದ ನಮ್ಮನ್ನು ಇಲ್ಲಿಗೆ ಕಳುಹಿಸಲಾಯಿತು. ಕನಿಷ್ಠ ಮೂಲಸೌಕರ್ಯ ನೀಡಿಲ್ಲ. ಕೆಲ ಮನೆಗಳಿಗೆ ಶೌಚಾಲಯವಿಲ್ಲದ ಕಾರಣ ಬಯಲಿಗೇ ತೆರಳಬೇಕು. ಹಬ್ಬ, ಜಾತ್ರೆಗೆಂದು ನೆಂಟರನ್ನು ಕರೆದರೆ ಯಾರೂ ಬರುವುದಿಲ್ಲ. ನಮ್ಮ ನರಕಯಾತನೆಗೆ ಮುಕ್ತಿ ಯಾವಾಗ’? ಎಂದು ಪ್ರಶ್ನಿಸುತ್ತಾರೆ ಆರಾಧ್ಯ ನಗರದ ಭಾಗ್ಯಮ್ಮ ಮತ್ತು ಭಾರತ್‌ ನಗರದ ನಾಗರಾಜ್‌.

***

ಸಾರ್ವಜನಿಕರ ಪ್ರತಿಕ್ರಿಯೆಗಳು...

ಇಡೀ ಎಪಿಎಂಸಿ ಆವರಣದಲ್ಲಿ ಎರಡು ಶೌಚಾಲಯಗಳಿದ್ದು, ಒಂದನ್ನು ಮುಚ್ಚಲಾಗಿದೆ. ಬೆಳಿಗ್ಗೆಯಿಂದ ಸಂಜೆತನಕ ವ್ಯಾಪಾರ ಮಾಡುತ್ತೇವೆ. ನಾಲ್ಕೈದು ಬಾರಿ ಹೋಗಬೇಕೆಂದರೆ ಒಂದು ಸಲಕ್ಕೆ ₹5 ರಂತೆ ₹25 ನೀಡಬೇಕು. ವ್ಯಾಪಾರ ಮಾಡಿ ಜೀವನ ನಡೆಸುವುದೇ ಕಷ್ಟವಾಗಿರುವ ಕಾರಣ ಕೆಲವರು ಬಯಲಿಗೇ ಹೋಗುತ್ತಾರೆ. ಇರುವ ಶೌಚಾಲಯದ ಮುಂದೆ ಪುರುಷರು ಬೀಡಿ, ಸಿಗರೇಟು ಸೇದಿಕೊಂಡು ನಿಂತಿರುತ್ತಾರೆ. ಮಹಿಳೆಯರ ವಿಭಾಗಕ್ಕೆ ಅಡ್ಡಲಾಗಿ ಪರದೆಯೂ ಇಲ್ಲ. ಹೋಗಿಬರಲು ಮುಜುಗರವಾಗುತ್ತದೆ. ಮುಚ್ಚಿರುವ ಶೌಚಾಲಯವನ್ನು ತೆರೆಸಿ ಮಹಿಳೆಯರಿಗೆ ಮೀಸಲಿರಿಸಿದರೆ ಒಳ್ಳೆಯದು.

–ಗಂಗಮ್ಮ, ತರಕಾರಿ ವ್ಯಾಪಾರಿ, ಎಪಿಎಂಸಿ ಆವರಣ

ಸ್ಮಾರ್ಟ್‌ಸಿಟಿ ಯೋಜನೆ ಅಡಿ ಆರಂಭದಲ್ಲಿ ಕೆಲ ಉದ್ಯಾನಗಳಲ್ಲಿ ಇ–ಶೌಚಾಲಯಗಳನ್ನು ನಿರ್ಮಿಸಲಾಯಿತು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಯಲು ಶೌಚವನ್ನು ಮುಕ್ತಗೊಳಿಸಲು ನಗರದ ಜನಸಂದಣಿ ಪ್ರದೇಶಗಳಲ್ಲಿ ಇ–ಶೌಚಾಲಯಗಳನ್ನು ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ.

–ಕೆ.ಎಂ. ಗುರುಪಾದಯ್ಯ, ಕಾರ್ಯನಿರ್ವಾಹಕ ಎಂಜಿನಿಯರ್‌, ಸ್ಮಾರ್ಟ್‌ಸಿಟಿ


ಸಮುದಾಯ ಶೌಚಾಲಯ ನಿರ್ಮಿಸಿ ಮೂರು ವರ್ಷವಾದರೂ, ಸಾರ್ವಜನಿಕರ ಉಪಯೋಗಕ್ಕೆ ನೀಡದೆ ಬೀಗ ಹಾಕಲಾಗಿದೆ. ಆದಕಾರಣ ಇಲ್ಲಿನ ರಾಜಕಾಲುವೆ ಇಲ್ಲವೇ ಬಂದ್‌ ಆಗಿರುವ ರೈಸ್‌ ಮಿಲ್‌ ಆವರಣಕ್ಕೆ ನಿತ್ಯಕರ್ಮ ಮುಗಿಸಲು ತೆರಳಬೇಕು. ಮಿಲ್‌ ಜಾಗವನ್ನು ನಿವೇಶನವಾಗಿಸಿದರೆ ಎಲ್ಲಿ ಹೋಗಬೇಕು.? ಗರ್ಭಿಣಿಯರು, ಬಾಣಂತಿಯರು ದೂರ ಹೋಗಲು ಸಾಧ್ಯವಾಗದೆ ಚರಂಡಿ ಮೇಲೆಯೇ ಕೂರುತ್ತಿದ್ದಾರೆ. ಪರಿಣಾಮವಾಗಿ ಅನಾರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ನೀರಿನ ವ್ಯವಸ್ಥೆ ಉತ್ತಮವಾಗಿದ್ದು ಸಾರ್ವಜನಿಕರ ಉಪಯೋಗಕ್ಕೆ ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

–ಎಚ್‌.ವಿ. ಪ್ರಭುಲಿಂಗಪ್ಪ, ಎಚ್‌.ಕೆ. ನಗರ ನಿವಾಸಿ

ಶೌಚಾಲಯವಿಲ್ಲದವರು ಮುಂಜಾನೆ ಇಲ್ಲವೇ ಕತ್ತಲಾದ ಮೇಲೆ ಬಯಲಿಗೆ ತೆರಳಬೇಕಾದ ಸ್ಥಿತಿ ಇದೆ. ಹೀಗೆ ತೆರಳಿದಾಗ ಹೆಣ್ಣಮಕ್ಕಳು ಪುಂಡರಿಂದ ತೊಂದರೆಗೊಳಗಾದ ಸಂದರ್ಭಗಳು ಹಲವು. ಗರ್ಭಿಣಿಯೊಬ್ಬರು ಶೌಚಕ್ಕೆ ತೆರಳಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡು ಅಲ್ಲಿಯೇ ಹೆರಿಗೆಯಾಗಿ ಮಗು ತೀರಿಕೊಂಡ ಉದಾಹರಣೆ ಇದೆ. ಸಮುದಾಯ ಶೌಚಾಲಯವಿದ್ದರೂ ಹದಿನೈದು ವರ್ಷಗಳಿಂದ ಬೀಗ ಜಡಿಯಲಾಗಿದೆ. ಸುತ್ತಲೂ ಕೊಳಚೆ ತುಂಬಿ ಪಾಳು ಬಿದ್ದಿದೆ. ನೀರಿನ ವ್ಯವಸ್ಥೆ ಕಲ್ಪಿಸಿ, ಸ್ಥಳೀಯರಿಗೆ ನಿರ್ವಹಣೆ ಜವಾಬ್ದಾರಿ ನೀಡಿದರೆ ಅನುಕೂಲವಾಗುತ್ತದೆ. ಕಾಯಿಲೆಗಳಿಗೆ ತುತ್ತಾಗುವುದೂ ತಪ್ಪುತ್ತದೆ. ‌

–ಬಿಬಿಜಾನ್‌, ಬಾಷಾನಗರ 2ನೇ ಕ್ರಾಸ್‌

ಈ ಹಿಂದೆ ಬಯಲು ಶೌಚಕ್ಕೆ ತೆರಳಿದ್ದ ಇಲ್ಲಿನ ಹೆಣ್ಣುಮಗಳೊಬ್ಬಳ ಮೇಲೆ ಅತ್ಯಾಚಾರವಾಯಿತು. ಕೊನೆಗೆ ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡು ತೀರಿಕೊಂಡಳು. ಈಗಲೂ ಬಯಲಿಗೇ ತೆರಳಬೇಕಾದ ಸ್ಥಿತಿ ಇದೆ. ಪಾಲಿಕೆ, ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಕೊಳೆಗೇರಿಗಳಿಗೆ ಭೇಟಿ ನೀಡುವ ನಾಯಕರು ನಂತರದಲ್ಲಿ ಈಕಡೆ ತಿರುಗಿಯೂ ನೋಡುವುದಿಲ್ಲ. ಇಲ್ಲಿನ ಸಮುದಾಯ ಶೌಚಾಲದಲ್ಲಿ ಜಿಮ್‌ ನಡೆಸುತ್ತಿದ್ದು, ಅದನ್ನು ತೆರವುಗೊಳಿಸಿ ಮಹಿಳೆಯರ ಉಪಯೋಗಕ್ಕೆ ನೀಡಬೇಕು.

–ಶಾಹಿನಾ ಬೇಗಂ, ಶಿವಾನಗರ

ರಾಜಕಾಲುವೆ ನಿರ್ಮಾಣಕ್ಕಾಗಿ ಇಲ್ಲಿನ ಶೌಚಾಲಯವನ್ನು ಕೆಡವಿದ್ದರಿಂದ ಇಲ್ಲಿನ ಬಹುತೇಕರು ಬಯಲಿಗೆ ತೆರಳುತ್ತಿದ್ದೇವೆ. ಕಳೆದ ಮೂರು ವರ್ಷಗಳಿಂದ ಕಾಮಗಾರಿ ನಡೆಸುತ್ತಿದ್ದು, ತಿರುಗಾಡುವುದೂ ಕಷ್ಟವಾಗಿದೆ. ದೊಡ್ಡ ದೊಡ್ಡ ನಾಯಕರು ನಮ್ಮಂತಹವರು ವಾಸಿಸುವ ಪ್ರದೇಶಗಳಿಗೆ ಭೇಟಿ ನೀಡುವುದಿಲ್ಲ. ಹಾಗಾಗಿ ನಮ್ಮ ಕಷ್ಟ ಯಾರಿಗೂ ಗೊತ್ತಾಗುವುದಿಲ್ಲ. ಹೊಸ ದಾವಣಗೆರೆಯಲ್ಲದೇ ನಮ್ಮ ಪ್ರದೇಶವನ್ನೂ ಸ್ಮಾರ್ಟ್‌ ಮಾಡಲು ಕ್ರಮ ಕೈಗೊಳ್ಳಿ.

–ರತ್ನಮ್ಮ, ಕೊರಚರ ಕಾಲೊನಿ

ನಮ್ಮ ಕೇರಿಯ ಪ್ರತಿಮನೆಯಲ್ಲಿ ಶೌಚಾಲಯವಿರುವ ಕಾರಣ ಯಾರೂ ಸಮುದಾಯ ಶೌಚಾಲಯ ಬಳಸುವುದಿಲ್ಲ. ಆದರೆ, ಸುತ್ತಮುತ್ತಲಿನವರು ಇಲ್ಲಿಗೆ ಬರುತ್ತಾರೆ. ನೀರಿನ ವ್ಯವಸ್ಥೆ ಇಲ್ಲದ ಕಾರಣ ಚೊಂಬಿನಲ್ಲಿ ನೀರು ತಂದು ಗಲೀಜು ಮಾಡಿ ಹೋಗುತ್ತಾರೆ. ಹೇಳುವವರು ಕೇಳುವವರು ಯಾರೂ ಇಲ್ಲದಾಗಿದೆ. ಗಬ್ಬು ವಾಸನೆಯಿಂದಾಗಿ ಮನೆಯಲ್ಲಿರುವುದೂ ಕಷ್ಟವಾಗಿದೆ. ಶೌಚಾಲಯ ನಿರ್ವಹಣೆಗೆ ಯಾರನ್ನಾದರೂ ನೇಮಿಸಲಿ ಇಲ್ಲವೇ ತೆಗೆದುಹಾಕಲಿ.

–ನೂರ್‌ಜಾನ್‌ಬಿ, ಮುದ್ದಾಭೋವಿ ಕಾಲೊನಿ, ಬೇತೂರ್‌ ರಸ್ತೆ

ಸ್ವಚ್ಛ ಭಾರತ್‌ ಯೋಜನೆ ಅಡಿ ಶೌಚಾಲಯವಿಲ್ಲದವರಿಗೆ ಶೌಚಾಲಯ ಕಟ್ಟಿಸಿಕೊಡಲು ಸ್ಕೋಡ್‌ವೇಸ್‌ ಎಂಬ ಸ್ವಯಂ ಸೇವಾ ಸಂಸ್ಥೆಗೆ ಜವಾಬ್ದಾರಿ ನೀಡಲಾಗಿತ್ತು. ಆದರೆ, ಕೆಲ ಕೊಳೆಗೇರಿಗಳಲ್ಲಿ ಮೊದಲ ಕಂತಿನ ಹಣ ಬಿಡುಗಡೆಯಾಗಿದ್ದು, ಮತ್ತೆ ಹಣ ಬಿಡುಗಡೆಯಾಗಿಲ್ಲ. ಕೆಲವರು ಕೈಯಿಂದ ಹಣ ಹಾಕಿ ಪೂರ್ಣಗೊಳಿಸಿದ್ದಾರೆ. ಸಾಧ್ಯವಾಗದವರು ಹಾಗೇ ಬಿಟ್ಟಿದ್ದಾರೆ. ಇರುವ ಶೌಚಾಲಯಗಳೂ ಮೂಲಸೌಕರ್ಯಗಳ ಕೊರತೆ ಇಲ್ಲವೇ ನಿರ್ವಹಣೆ ಇಲ್ಲದೆ ಪಾಳುಬಿದ್ದಿವೆ. ಮಹಿಳೆಯರು ಬಹಿರ್ದೆಸೆಗೆ ತೆರಳಿದಾಗ ನಾನಾ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ.

–ರೇಣುಕಾ ಎಲ್ಲಮ್ಮ ಜಿ. ಹಾವೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸ್ಲಂ ಜನಾಂದೋಲನ ಕರ್ನಾಟಕ

ಸ್ವಚ್ಛ ಭಾರತ್‌ ಯೋಜನೆ ಅಡಿ ಸಮೀಕ್ಷೆ ಮೂಲಕ ಶೌಚಾಲಯ ಇಲ್ಲದವರಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡಲಾಗಿದೆ. 60 ಜನರಿಗೆ ಮಾತ್ರ ಎರಡನೇ ಕಂತಿನ ಹಣ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. ಯಾರಿಗೆ ಶೌಚಾಲಯ ಇಲ್ಲವೋ ಅಂಥಹವರು ಕಟ್ಟಿಸಿಕೊಳ್ಳಲು ಮುಂದೆ ಬಂದರೆ ನೆರವು ನೀಡಲಾಗುವುದು. ಕೊಳೆಗೇರಿಗಳಲ್ಲಿ ಬೀಗ ಹಾಕಲಾಗಿರುವ ಸಮುದಾಯ ಶೌಚಾಲಯಗಳನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

–ಮಂಜುನಾಥ ಬಳ್ಳಾರಿ, ಆಯುಕ್ತ, ದಾವಣಗೆರೆ ಮಹಾನಗರ ಪಾಲಿಕೆ.

***

* ನಗರದಲ್ಲಿರುವ ಸಮುದಾಯ ಶೌಚಾಲಯಗಳು –7

*ನಗರದಲ್ಲಿರುವ ಸಾರ್ವಜನಿಕ ಶೌಚಾಲಯಗಳು –30

*ಸ್ಮಾರ್ಟ್‌ಸಿಟಿ ಯೋಜನೆ ಅಡಿ ವಿವಿಧ ಉದ್ಯಾನಗಳಲ್ಲಿ ನಿರ್ಮಿಸಿರುವ ಇ–ಶೌಚಾಲಯಗಳು‌ –9

*ಸ್ಮಾರ್ಟ್‌ಸಿಟಿ ಯೋಜನೆ ಅಡಿ ನಗರದ ಜನಸಂದಣಿ ಪ್ರದೇಶಗಳಲ್ಲಿ ನಿರ್ಮಾಣದ ಹಂತದಲ್ಲಿರುವ ಇ–ಶೌಚಾಲಯಗಳು –37

*ಸ್ವಚ್ಛ ಭಾರತ್‌ ಯೋಜನೆ ಅಡಿ ವಿವಿಧ ಪ್ರದೇಶಗಳಲ್ಲಿ ವೈಯಕ್ತಿಕವಾಗಿ ಇದುವರೆಗೆ ನಿರ್ಮಿಸಿಕೊಡಲಾಗಿರುವ ಶೌಚಾಲಯಗಳು –3669

* ಸ್ವಚ್ಛ ಭಾರತ್‌ ಯೋಜನೆ ಅಡಿ ವೈಯಕ್ತಿಕವಾಗಿ ಶೌಚಾಲಯ ನಿರ್ಮಾಣಕ್ಕಾಗಿ ಕರ್ನಾಟಕ ನಗರಾಭಿವೃದ್ಧಿ ಮತ್ತು ಹಣಕಾಸು ನಿಗಮದಿಂದ ನೀಡಲಾಗುವ ಹಣ –₹10,500

*ಸ್ವಚ್ಛ ಭಾರತ್‌ ಯೋಜನೆ ಅಡಿ ವೈಯಕ್ತಿಕವಾಗಿ ಶೌಚಾಲಯ ನಿರ್ಮಾಣಕ್ಕಾಗಿ ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ನೀಡಲಾಗುವ ಹಣ –₹3,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT