ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲೆಕಾಳು ಖರೀದಿ ಕೇಂದ್ರ ತೆರೆಯಿರಿ: ಡಿಸಿ ಸೂಚನೆ

ರೈತರಿಂದ ನೋಂದಣಿ ಆರಂಭ* ಜಗಳೂರು, ಹೊನ್ನಾಳಿ ಮತ್ತು ಚನ್ನಗಿರಿಯಲ್ಲಿ ಕೇಂದ್ರ
Last Updated 18 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ದಾವಣಗೆರೆ: ಕೇಂದ್ರ ಸರ್ಕಾರವು ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಕಡಲೆಕಾಳು ಉತ್ಪನ್ನವನ್ನು ಖರೀದಿಸಲು ಜಿಲ್ಲೆಯ ಜಗಳೂರು, ಹೊನ್ನಾಳಿ ಮತ್ತು ಚನ್ನಗಿರಿಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ 2019-20ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಎಫ್.ಎ.ಕ್ಯು ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಮಂಗಳವಾರ ಕರೆದಿದ್ದ ಟಾಸ್ಕ್‌ಫೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯು ಗುಣಮಟ್ಟದ ಕಡಲೆಕಾಳು ಉತ್ಪನ್ನಕ್ಕೆ ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್‌ಗೆ ₹4,875 ನಿಗದಿಪಡಿಸಿದೆ. ನಾಫೆಡ್ ಸಂಸ್ಥೆಯನ್ನು ಕೇಂದ್ರದ ಖರೀದಿ ಏಜೆನ್ಸಿಯಾಗಿ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ(ಮಾರ್ಕ್‍ಫೆಡ್) ಸಂಸ್ಥೆಯನ್ನು ರಾಜ್ಯದ ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ ಎಂದರು.

ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ‘ಪ್ರಸ್ತುತ ಜಿಲ್ಲೆಯ ಜಗಳೂರು, ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳಲ್ಲಿ ಹೆಚ್ಚಿನ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 17,869.8 ಟನ್ ಇಳುವರಿ ಬರುವ ಅಂದಾಜಿದ್ದು, ಬೆಂಬಲ ಬೆಲೆ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಲ್ಲಿ ರೈತರಿಗೆ ಅನುಕೂಲವಾಗುತ್ತದೆ’ ಎಂದರು.

ಎಪಿಎಂಸಿ ಕಾರ್ಯದರ್ಶಿ ಪ್ರಭು ಮಾತನಾಡಿ, ‘ಜಗಳೂರು ತಾಲ್ಲೂಕಿನ ರೈತರು ಈ ಬಾರಿ ಕಡಲೆಕಾಳು ಉತ್ಪನ್ನವನ್ನು ಹೆಚ್ಚಾಗಿ ಬೆಳೆದಿದ್ದಾರೆ. ಮಾರಾಟಕ್ಕಾಗಿ ತಾವು ಬೆಳೆದ ಕಡಲೆಯನ್ನು ಇತರೆ ಮಾರುಕಟ್ಟೆಗಳಿಗೆ ಮಾರಾಟಕ್ಕಾಗಿ ಕೊಂಡೊಯ್ಯುತ್ತಿದ್ದು ಖರೀದಿದಾರರು ನಿಗದಿಪಡಿಸಿಕೊಂಡಿರುವ ಅತಿ ಕಡಿಮೆ ಬೆಲೆಗೆ ತಾವು ಬೆಳೆದ ಕಡಲೆಯನ್ನು ಮಾರಾಟ ಮಾಡದೇ ಹಿಂದಿರುಗುತ್ತಿದ್ದು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರವನ್ನು ಸ್ಥಾಪಿಸಬೇಕೆಂದು ಮನವಿ ಸಹ ಸಲ್ಲಿಸಿದ್ದಾರೆ. ಆದ್ದರಿಂದ ರೈತರ ಹಿತ ದೃಷ್ಟಿಯಿಂದ ಕಡಲೇಕಾಳು ಖರೀದಿ ಕೇಂದ್ರ ಸ್ಥಾಪಿಸುವುದು ಸೂಕ್ತವೆಂದರು.

ಎಪಿಎಂಸಿ ಸಹಾಯಕ ನಿರ್ದೇಶಕ ಎಸ್.ಸೋಮಶೇಖರ್ ಮಾತನಾಡಿ, ‘ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಸಂಸ್ಥೆಯನ್ನು ರಾಜ್ಯದಿಂದ ಖರೀದಿ ಸಂಸ್ಥೆಯನ್ನಾಗಿ ಕೇಂದ್ರ ಸರ್ಕಾರ ನೇಮಿಸಿದ್ದು, ರೈತರು ಫೆ.13ರಿಂದ 30 ದಿನಗಳವರೆಗೆ ರೈತರ ನೋಂದಣಿಗೆ ಹಾಗೂ ಖರೀದಿ ಕಾಲಾವಧಿಯನ್ನು 40 ದಿನಗಳವರೆಗೆ ನಿಗದಿಪಡಿಸಿದ್ದು, ನೋಂದಣಿ ಮತ್ತು ಖರೀದಿ ಪ್ರಕ್ರಿಯೆಯನ್ನು ಒಟ್ಟಾಗಿ ಪ್ರಾರಂಭಿಸಲು ಸೂಚಿಸಲಾಗಿದೆ ’ಎಂದರು.

ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ‘ನಿಯಮಾನುಸಾರ ಪ್ರತಿ ರೈತರಿಂದ ಪ್ರತಿ ಎಕರೆಗೆ ಮೂರು ಕ್ವಿಂಟಲ್‍ನಂತೆ ಗರಿಷ್ಠ 10 ಕ್ವಿಂಟಲ್ ಕಡಲೆಕಾಳನ್ನು ಖರೀದಿಸಬಹುದಾಗಿದೆ’ ಎಂದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಮಂಗಳವಾರದಿಂದಲೇ ರೈತರ ನೊಂದಣಿ ಆರಂಭಿಸಿ, ಜಗಳೂರು, ಚನ್ನಗಿರಿ ಮತ್ತು ಹೊನ್ನಾಳಿ ಇಲ್ಲಿ ಖರೀದಿ ಕೇಂದ್ರ ತೆರೆಯಲು ಪೂರಕ ತಯಾರಿ ನಡೆಸಿ ಖರೀದಿ ಕೇಂದ್ರ ತೆರೆಯಬೇಕು’ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಸಂಸ್ಥೆಯ ವ್ಯವಸ್ಥಾಪಕ ಶ್ರೀಕಾಂತ್.ಎಸ್, ಎಪಿಎಂಸಿ ಸಹಾಯಕ ಕಾರ್ಯದರ್ಶಿ ಶಿಲ್ಪಶ್ರೀ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಜಿಲ್ಲಾ ವ್ಯವಸ್ಥಾಪಕ ಗಂಗಾಧರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT