ಭಾನುವಾರ, ಜನವರಿ 26, 2020
28 °C
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್

ಅನುದಾನ ವಾಪಸ್ಸಾಗದಂತೆ ಕಾರ್ಯ ನಿರ್ವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಿಗದಿತ ಸಮಯದೊಳಗೆ ಎಲ್ಲ ಕಾಮಗಾರಿಗಳನ್ನು ಮುಗಿಸಬೇಕು. ಯಾವುದೇ ಹಣ ವಾಪಸ್ಸಾಗಬಾರದು. ಅದರಲ್ಲಿಯೂ ಜಿಲ್ಲಾ ಪಂಚಾಯಿತಿಗೆ ಬರುವ ಅನುದಾನ ಹಿಂದಕ್ಕೆ ಹೋಗಲೇ ಬಾರದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ನೆರೆ ಪರಿಹಾರ ಮತ್ತು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ನವೆಂಬರ್ ಅಂತ್ಯದವರೆಗೆ ಶೇ 50 ಪ್ರಗತಿ ಸಾಧಿಸಲಾಗಿದೆ. ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ಚುರುಕಾಗಬೇಕಿದೆ. ಮಾರ್ಚ್‌ವರೆಗೆ ಕಾಯದೇ ಬೇಗನೇ ಮುಗಿಸಬೇಕು ಎಂದು ತಿಳಿಸಿದರು.

ಪರಿಹಾರ ಹಣ ಸಾಲಕ್ಕೆ ಹೋಗದಿರಲಿ: ಅತಿವೃಷ್ಟಿಯಿಂದ ತೊಂದರೆಗೊಳಗಾದವರಿಗೆ ಸಿಗುವ ಪರಿಹಾರವನ್ನು ಬ್ಯಾಂಕಿನವರು ಸಾಲಕ್ಕೆ ಮುರಿದುಕೊಳ್ಳುತ್ತಿದ್ದಾರೆ. ಅಂಥದ್ದಾಗಬಾರದು ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಈ ತರಹ ಸಾಲಕ್ಕೆ ಜಮಾ ಮಾಡುವುದು ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸ್ಪಷ್ಟನೆ ನೀಡಿದರು.

ಜಿಲ್ಲೆಗೆ ಉತ್ತಮ ಸ್ಥಾನ: ಕಂದಾಯ ಇಲಾಖೆಯ ಪ್ರಗತಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ರ‍್ಯಾಂಕ್‌ ನಿಗದಿಗೊಳಿಸಲಾಗುತ್ತಿದೆ. ದಾವಣಗೆರೆಯು ಸೆಪ್ಟೆಂಬರ್‌ನಲ್ಲಿ ನಾಲ್ಕನೇ ಸ್ಥಾನ, ಅಕ್ಟೋಬರ್‌ನಲ್ಲಿ 7ನೇ ಸ್ಥಾನ, ನವೆಂಬರ್‌ನಲ್ಲಿ 6ನೇ ಸ್ಥಾನ ಪಡೆದಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ದಾವಣಗೆರೆ ಯಾವಾಗಲೂ ಹಾಗೆ ಇದೆ. ಇತ್ತ ಮೊದಲ ಸ್ಥಾನಕ್ಕೂ ಬರುವುದಿಲ್ಲ. ಅತ್ತ ಕೊನೇಯ ಸ್ಥಾನದಲ್ಲಿಯೂ ಇರುವುದಿಲ್ಲ. ಹಾಗಾಗಿ ಮೊದಲ ಸ್ಥಾನ ಗಳಿಸಲು ಏನು ಮಾಡಿದ್ದೀರಿ ಎಂದು ಕೇಳುವಂತಿಲ್ಲ. ಯಾಕೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದೀರಿ ಎಂದು ಪ್ರಶ್ನಿಸುವಂತೆಯೂ ಇಲ್ಲ. 5 ಸ್ಥಾನಗಳ ಒಳಗೆ ಬನ್ನಿ ಎಂದು ಉಮಾಶಂಕರ್ ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ಬರುವುದಾಗಿ ಜಿಲ್ಲಾಧಿಕಾರಿ ವಿಶ್ವಾಸ ವ್ಯಕ್ತಪಡಿಸಿದರು. ‘ಆಗಸ್ಟ್‌ನಲ್ಲಿ ಉಂಟಾದ ಅತಿವೃಷ್ಟಿಯಿಂದ ತೊಂದರೆಗೊಳಗಾದ ಎಲ್ಲರಿಗೂ ಪರಿಹಾರ ವಿತರಣೆಯಾಗಿದೆ. ಪೂರ್ಣ ಪ್ರಮಾಣದಲ್ಲಿ ತೊಂದರೆಗೆ ಒಳಗಾದ 15 ಮನೆಗಳಲ್ಲಿ ಈಗಾಗಲೇ 5 ಮನೆಗಳ ನಿರ್ಮಾಣ ಆರಂಭಗೊಂಡಿದೆ. ಉಳಿದವು ಇನ್ನಾಗಬೇಕು. ಸೆಪ್ಟೆಂಬರ್‌ನಲ್ಲಿ ಉಂಟಾದ ಅತಿವೃಷ್ಟಿಯ ಹಾನಿಯ ವರದಿ ಕಳುಹಿಸಿದ್ದೇವೆ. ಇತರ ಜಿಲ್ಲೆಗಳಲ್ಲಿ ಈಗಷ್ಟೇ ಆಗಸ್ಟ್‌ನ ನಷ್ಟದ ವರದಿಯನ್ನು ಕಳುಹಿಸುತ್ತಿದ್ದಾರೆ’ ಎಂದು ಮಹಾಂತೇಶ ಬೀಳಗಿ ತಿಳಿಸಿದರು.

ಪೋಡಿ ಇನ್ನಿತರ ವ್ಯಾಜ್ಯಗಳನ್ನು ಈ ಜಿಲ್ಲೆಯಲ್ಲಿ ಚೆನ್ನಾಗಿ ನಿರ್ವಹಿಸಲಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ವರ್ಷಕ್ಕೆ ಐದಾರು ಪ್ರಕರಣಗಳೂ ಇತ್ಯರ್ಥವಾಗುತ್ತಿಲ್ಲ ಎಂದು ಉಸ್ತುವಾರಿ ಕಾರ್ಯದರ್ಶಿ ಶ್ಲಾಘಿಸಿದರು.

ವಸತಿ ಯೋಜನೆಗಳಲ್ಲಿ ನಕಲಿ ಹಾವಳಿ ಇದೆ ಎಂಬ ದೂರು ಇದೆ. ಜಿಲ್ಲೆಯಲ್ಲಿ ಹೇಗಿದೆ ಎಂದು ಉಮಾಶಂಕರ್‌ ಪ್ರಶ್ನಿಸಿದರು.

ಸಾಮಾಜಿಕ ಭದ್ರತಾ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 1.93 ಲಕ್ಷ ಫಲಾನುಭವಿಗಳು ವೇತನ ಪಡೆಯುತ್ತಿದ್ದಾರೆ. ತಾಂತ್ರಿಕ ದೋಷದಿಂದ 17 ಸಾವಿರ ಫಲಾನುಭವಿಗಳಿಗೆ ವೇತನ ತಲುಪಿಲ್ಲ. ಡಿಸೆಂಬರ್‌ ಒಳಗೆ ಅವರೆಲ್ಲರಿಗೂ ತಲುಪಿಸುವ ಭರವಸೆ ನೀಡಲಾಗಿತ್ತು. ಕೆ2 ವರ್ಗಾವಣೆ ಸಮಸ್ಯೆ ಸೇರಿದಂತೆ ತಾಂತ್ರಿಕ ಅಡಚಣೆಗಳಿಂದ ಡಿಸೆಂಬರ್‌ ಒಳಗೆ ಸರಿಪಡಿಸುವುದು ಕಷ್ಟ. ಜನವರಿ ಅಂತ್ಯದೊಳಗೆ ಎಲ್ಲ ಅರ್ಹರಿಗೆ ವೇತನ ತಲುಪಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಾಮಾಜಿಕ ಭದ್ರತೆ ಪಿಂಚಣಿದಾರರ ಸೌಲಭ್ಯ ಪಡೆಯುವವರ ಬಗ್ಗೆಯೂ ವರ್ಷಕ್ಕೊಮ್ಮೆ ತಿಳಿದುಕೊಳ್ಳಬೇಕು ಎಂದು ಉಸ್ತುವಾರಿ ಕಾರ್ಯದರ್ಶಿ ಸೂಚಿಸಿದರು. ‘ಪಾಲಿಕೆ ವ್ಯಾಪ್ತಿಯಲ್ಲಿ ಸಂಶಯಾಸ್ಪದ 48 ಪ್ರಕರಣಗಳನ್ನು ವಿಜಿಲ್‌ ಆ್ಯಪ್‌ ಮೂಲಕ ಕಳುಹಿಸಿಕೊಡಲಾಗಿದೆ. ಪರಿಶೀಲಿಸುತ್ತೇವೆ’ ಎಂದು ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ತಿಳಿಸಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳು ಡೌನ್‌ಲೋಡ್‌ ಮಾಡುತ್ತಿದ್ದಾರೆ ಎಂದು ಸಿಇಒ ಪದ್ಮ ಬಸವಂತಪ್ಪ ಮಾಹಿತಿ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಬೋಮ್ಮನ್ನಾರ್, ಡಿಡಿಎಲ್‌ಆರ್ ರಾಮಾಂಜನೇಯ, ಡಿಎಚ್‌ಒ ಡಾ.ರಾಘವೇಂದ್ರ ಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶನ ವಿಜಯಕುಮಾರ್‌, ಆಹಾರ ಇಲಾಖೆಯ ಉಪನಿರ್ದೇಶಕ ಮಂಟೇಸ್ವಾಮಿ ಅವರೂ ಇಲಾಖಾವಾರು ಮಾಹಿತಿ ನೀಡಿದರು.

ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅವರೂ ಇದ್ದರು.

ಪ್ರತಿಕ್ರಿಯಿಸಿ (+)