ಸೂಳೆಕೆರೆ ಒತ್ತುವರಿ ಸರ್ವೆಗೆ ಆದೇಶ: ಪಾಂಡೋಮಟ್ಟಿಶ್ರೀ

ಶನಿವಾರ, ಏಪ್ರಿಲ್ 20, 2019
31 °C

ಸೂಳೆಕೆರೆ ಒತ್ತುವರಿ ಸರ್ವೆಗೆ ಆದೇಶ: ಪಾಂಡೋಮಟ್ಟಿಶ್ರೀ

Published:
Updated:
Prajavani

ದಾವಣಗೆರೆ: ಖಡ್ಗ ಸ್ವಯಂ ಸೇವಕರ ಸಂಘ ಮತ್ತು ಖಡ್ಗ ಶಾಂತಿಸಾಗರ (ಸೂಳೆಕೆರೆ) ಸಂರಕ್ಷಣಾ ಮಂಡಳಿಯ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ಸೂಳೆಕೆರೆಯ ಸರ್ವೆ ಮಾಡಲು ಕರ್ನಾಟಕ ನೀರಾವರಿ ನಿಗಮವು ₹ 11 ಲಕ್ಷ ಬಿಡುಗಡೆಗೆ ಅನುಮೋದನೆ ನೀಡಿದೆ ಎಂದು ಶಾಂತಿಸಾಗರ ಸಂರಕ್ಷಣಾ ಮಂಡಳಿ ಅಧ್ಯಕ್ಷ ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಹೇಳಿದರು.

ಜೂನ್‌, ಜುಲೈ ತಿಂಗಳಲ್ಲಿ ಸರ್ವೆ ಕಾರ್ಯ ನಡೆಯಲಿದೆ. ಸರ್ವೆ ಮುಗಿದ ತಕ್ಷಣ ಟ್ರೆಂಚ್‌ ಹಾಕಿ ಬಂದೋಬಸ್ತು ಮಾಡಬೇಕು ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಖಡ್ಗ ಸಂಘಟನೆಯು ಹಳ್ಳಿಗಳಲ್ಲಿ ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಮಕ್ಕಳಿಗೆ ಮಾಹಿತಿ ಸಿಗಲಿ ಎಂದು ವಿದ್ಯಾರ್ಥಿಗಳನ್ನು ಒಳಗೊಂಡ ಮೆರವಣಿಗೆಗಳನ್ನು ಮಾಡಲಾಗಿತ್ತು. ಇದರ ಜತೆಗೆ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರಗಳನ್ನೂ ಮಾಡಲಾಗಿತ್ತು. ರೈತ ಸಂಘ, ಸ್ಥಳೀಯರು, ವಿದ್ಯಾವಂತರು ಹೀಗೆ ಎಲ್ಲರ ಬೆಂಬಲದೊಂದಿಗೆ ನಡೆಸಿದ ಹೋರಾಟದ ಫಲ ಈ ಯುಗಾದಿಗೆ ಸಿಕ್ಕಿದೆ ಎಂದು ವಿವರಿಸಿದರು.

‘ನೋಟಾ ಅಭಿಯಾನದ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ನಮ್ಮ ಸಂಘಟನೆ ಯಾರನ್ನೂ ಬೆಂಬಲಿಸುವುದಿಲ್ಲ. ಸೂಳೆಕೆರೆಗಾಗಿ ರಾಜಕೀಯ ರಹಿತವಾದ ಹೋರಾಟ ನಮ್ಮದು’ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.

ನೀರಾವರಿ ಇಲಾಖೆಯ ಪ್ರಕಾರ ಸೂಳೆಕೆರೆಯು 6550 ಚದರ ಕಿಲೋಮೀಟರ್‌ ವಿಸ್ತೀರ್ಣ ಹೊಂದಿದೆ. ಕಂದಾಯ ಇಲಾಖೆಯ ಪ್ರಕಾರ 5547 ಚದರ ಕಿಲೋಮೀಟರ್‌ ವಿಸ್ತೀರ್ಣ ಇದೆ. ಇಲ್ಲಿಯೇ ಸುಮಾರು ಸಾವಿರ ಚದರ ಕಿಲೋಮೀಟರ್‌ ವ್ಯತ್ಯಾಸ ಇದೆ. 1200ರಿಂದ 1500 ಚದರ ಕಿಲೋಮೀಟರ್‌ ಕೆರೆ ಒತ್ತುವರಿಯಾಗಿದೆ ಎಂದು ಖಡ್ಗ ಸ್ವಯಂಸೇವಕರ ಸಂಘದ ಅಧ್ಯಕ್ಷ ಬಿ.ಆರ್‌. ರಘು ಹೇಳಿದರು.

ಒತ್ತುವರಿ ತೆರವಿನ ಸಂದರ್ಭದಲ್ಲಿ ಯಾರೂ ಅಡ್ಡಿಪಡಿಸಬಾರದು. ಅಧಿಕಾರಿಗಳಿಗೆ ಸಹಕಾರ ನೀಡಬೇಕು. ತೊಂದರೆ ನೀಡಿದರೆ ನ್ಯಾಯಾಲಯದ ಮೆಟ್ಟಿಲು ಏರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

 ಪತ್ರಿಕಾಗೋಷ್ಠಿಯಲ್ಲಿ ಚನ್ನಗಿರಿ ಹಿರೇಮಠದ ಶಾಂತವೀರ ಸ್ವಾಮೀಜಿ, ಖಡ್ಗ ಸ್ವಯಂ ಸೇವಕರ ಸಂಘ ಮತ್ತು ಖಡ್ಗ ಶಾಂತಿಸಾಗರ (ಸೂಳೆಕೆರೆ) ಸಂರಕ್ಷಣಾ ಮಂಡಳಿ ಪದಾಧಿಕಾರಿಗಳಾದ ಷಣ್ಮುಖಸ್ವಾಮಿ, ಚಂದ್ರಹಾಸ ಲಿಂಗದಹಳ್ಳಿ, ಎಂ.ಬಿ. ವೀರಭದ್ರಪ್ಪ, ಕೆ.ಎಂ. ವೀರಭದ್ರಪ್ಪ, ಮಹಮ್ಮದ್‌ ಶಬ್ಬೀರ್‌, ಕೆ.ಆರ್‌. ರಂಗಪ್ಪ, ಕೆ.ಎಸ್‌. ಅಣ್ಣಪ್ಪ, ಎಚ್‌.ಎಂ. ರವಿ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !